ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್
- 3ನೇ ಬಾರಿ ಟಿ20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ
- 96 ರನ್ಗಳಿಂದ ಭರ್ಜರಿ ಜಯ ಗಳಿಸಿದ ಸೂರ್ಯಕುಮಾರ್ ಯಾದವ್ ಪಡೆ
- ಭಾರತ ಗೆದ್ದ ಬೆನ್ನಲ್ಲೇ ನಾಲಿಗೆ ಹರಿಬಿಡಲು ಶುರುಮಾಡಿದ ಪಾಕ್ ಕ್ರಿಕೆಟಿಗರು
IND vs NZ Final: ಇಡೀ ಭಾರತವೇ ತುದಿಗಾಲಿನಲ್ಲಿ ಕಾಯುತ್ತಿದ್ದ ಕ್ಷಣ ಕಡೆಗೂ ನಿನ್ನೆ (ಮಾ.08) ರಾತ್ರಿ ಅಹಮದಾಬಾದ್ ಕ್ರೀಡಾಂಗಣದಲ್ಲಿ ಈಡೇರಿತು. ಕೋಟ್ಯಂತರ ಭಾರತೀಯರ ನಿರೀಕ್ಷೆಯಂತೆ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಟೂರ್ನಿಯ ವಿಜಯಶಾಲಿಯಾಗಿ ಹೊರಹೊಮ್ಮಿದೆ. ಈ ಮೂಲಕ ಸತತ ಮೂರು ಬಾರಿ ಟಿ20 ವಿಶ್ವಕಪ್ ಗೆದ್ದ ತಂಡ ಮತ್ತು ತವರಿನಲ್ಲಿ ಚುಟುಕು ವಿಶ್ವಕಪ್ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ತಂಡ ಪಾತ್ರವಾಗಿದೆ. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲೇ ಹೊಸ ಅಧ್ಯಾಯ ಬರೆದಿದೆ.
ಸೂರ್ಯಕುಮಾರ್ ಯಾದವ್ ಪಡೆಗೆ ದೇಶ-ವಿದೇಶಗಳಿಂದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಭಾರತ ತಂಡಕ್ಕೆ ಎಲ್ಲಾ ಕ್ರಿಕೆಟ್ ತಂಡಗಳಿಂದ ಹಾಗೂ ಕ್ರಿಕೆಟಿಗರಿಂದ ಶುಭಹಾರೈಕೆಗಳು ವ್ಯಕ್ತವಾಗುತ್ತಿವೆ. ಆದರೆ, ಪಾಕಿಸ್ತಾನ ಒಂದು ದೇಶ ಬಿಟ್ಟು. ಇದು ಎಲ್ಲರಿಗೂ ಗೊತ್ತೇ ಇದೆ. ವೈರಿ ರಾಷ್ಟ್ರದ ಮಾಜಿ ಕ್ರಿಕೆಟಿಗರು ಫೈನಲ್ ಪಂದ್ಯಕ್ಕೂ ಮುನ್ನವೇ ಭಾರತ ಸೋಲಲಿ ಎಂದು ದೇವರ ಮೊರೆ ಹೋಗಿದ್ದರು. ಆದರೆ, ಭಗವಂತನ ಲೆಕ್ಕಾಚಾರವೇ ಬೇರೆ ಆಗಿದ್ದರಿಂದ, ಇದೀಗ ನಾಲಿಗೆ ಹರಿಬಿಟ್ಟವರು ಅಂಡು ಸುಟ್ಟ ಬೆಂಕಿನಂತೆ ಆಡುತ್ತಿರುವುದು ಬೇಸರದ ಸಂಗತಿ.
ಈ ಸಾಲಿನಲ್ಲಿ ಮೊದಲಿಗಿರುವುದೇ ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್, ನ್ಯೂಜಿಲೆಂಡ್-ಭಾರತ ಪಂದ್ಯಕ್ಕೂ ಮೊದಲೇ ಭವಿಷ್ಯ ನುಡಿದಿದ್ದ ಶೋಯೆಬ್, ಕ್ರಿಕೆಟ್ಗೋಸ್ಕರ ಆದರೂ ನ್ಯೂಜಿಲೆಂಡ್ ಈ ಬಾರಿಯ ಟಿ20 ವಿಶ್ವಕಪ್ ಗೆಲ್ಲಲಿ ಎಂದಿದ್ದರು. ಆದರೆ, ತನ್ನ ಮಾತು ಈಡೇರದ ಹಿನ್ನೆಲೆ ಭಾರತೀಯ ಕ್ರಿಕೆಟ್ ತಂಡ ಮತ್ತು ಬಿಸಿಸಿಐ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಶ್ರೀಮಂತ ಮಗು
ಭಾರತ ಕ್ರಿಕೆಟ್ ಅನ್ನು ಸರ್ವನಾಶ ಮಾಡಿದೆ. ಶ್ರೀಮಂತ ಮಗು (ಟೀಮ್ ಇಂಡಿಯಾ) ತನ್ನ ಸ್ಥಳೀಯ ಬಡ ಮಕ್ಕಳನ್ನು ಕರೆದು, ಬನ್ನಿ ಕ್ರಿಕೆಟ್ ಆಡೋಣ ಎನ್ನುವಂತಾಗಿದೆ ಪರಿಸ್ಥಿತಿ. ಇದನ್ನೇ ಭಾರತ ನಮ್ಮೊಂದಿಗೆ ಮಾಡುತ್ತಿರುವುದು. 8 ತಂಡಗಳ ಪೈಕಿ ನಾಲ್ವರನ್ನು ಉಳಿಸಿಕೊಳ್ಳುವುದು, ಆ ನಾಲ್ಕರಲ್ಲಿ ಮೂರು. ಅಲ್ಲಿಂದ, ನಾವು ಗೆದ್ದವು ಎಂದು ಹೇಳಿಕೊಳ್ಳುವುದು. ಕ್ರಿಕೆಟ್ ಅನ್ನು ಸಂಪೂರ್ಣವಾಗಿ ಹಾಳು ಮಾಡಿದೆ ಎಂದು ಅಖ್ತರ್ ಹೇಳಿದ್ದಾರೆ.
ಪಂದ್ಯದ ವಿವರ
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ (89 ರನ್, 46 ಎಸೆತ, 5 ಬೌಂಡರಿ, 8 ಸಿಕ್ಸರ್) ಹಾಗೂ ಅಭಿಷೇಕ್ ಶರ್ಮಾ (52 ರನ್, 21 ಎಸೆತ, 6 ಬೌಂಡರಿ, 3 ಸಿಕ್ಸರ್) ಭರ್ಜರಿ ಆರಂಭ ಒದಗಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ಇಶಾನ್ ಕಿಶನ್ (54 ರನ್, 25 ಎಸೆತ, 4 ಬೌಂಡರಿ, 4 ಸಿಕ್ಸರ್) ಅರ್ಧ ಶತಕದೊಂದಿಗೆ ತಂಡದ ಮೊತ್ತವನ್ನು ಹಿಗ್ಗಿಸಿದರು. ಕೊನೆಯಲ್ಲಿ ಬಂದ ಶಿವಂ ದುಬೆ ( ಅಜೇಯ 26 ರನ್, 8 ಎಸೆತ, 3 ಬೌಂಡರಿ, 2 ಸಿಕ್ಸರ್) ವಿನಾಶಕಾರಿ ಇನ್ನಿಂಗ್ಸ್ ಆಡಿದರು. ಈ ಮೂಲಕ ಟೀಮ್ ಇಂಡಿಯಾ, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 255 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಕಿವೀಸ್ ಬೌಲರ್‌ಗಳಲ್ಲಿ, ಜೇಮ್ಸ್ ನೀಶಮ್ ಮೂರು ವಿಕೆಟ್‌ಗಳನ್ನು ಪಡೆದರೆ, ಮ್ಯಾಟ್ ಹೆನ್ರಿ ಮತ್ತು ರಾಚಿನ್ ರವೀಂದ್ರ ತಲಾ ಒಂದು ವಿಕೆಟ್ ಪಡೆದರು.
256 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಕಿವೀಸ್ ತಂಡ, ಟೀಮ್ ಇಂಡಿಯಾದ ಬೌಲಿಂಗ್ ದಾಳಿಗೆ ತತ್ತರಿಸಿತು. ಅಂತಿಮವಾಗಿ 19 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲೌಟ್ ಆಯಿತು. ಕಿವೀಸ್ ಪರ ಟಿಮ್ ಸೈಫರ್ಟ್ (26 ಎಸೆತಗಳಲ್ಲಿ 52 ರನ್) ಮತ್ತು ಮಿಚೆಲ್ ಸ್ಯಾಂಟ್ನರ್ (35 ಎಸೆತಗಳಲ್ಲಿ 43 ರನ್) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಉಳಿದಂತೆ ಯಾವೊಬ್ಬ ಬ್ಯಾಟರ್ ಕೂಡ ಪ್ರಭಾವ ಬೀರಲಿಲ್ಲ. ಸೆಮಿಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 33 ಎಸೆತಗಳಲ್ಲಿ ಶತಕ ಬಾರಿಸಿದ್ದ ಫಿನ್ ಅಲೆನ್ ನಿನ್ನೆಯ ಪಂದ್ಯದಲ್ಲಿ ಕೇವಲ 9 ರನ್ಗೆ ಔಟಾದರು. ಟೀಮ್ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ ನಾಲ್ಕು ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಮೂರು ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ ಮತ್ತು ಅಭಿಷೇಕ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.