ಪಾಕ್​ ಆಟಗಾರ ಮೊಹಮ್ಮದ್ ಅಮೀರ್ 
ಕ್ರಿಕೆಟ್

ಇದೇ ನನ್ನ ಚಾಲೆಂಜ್​... ಭಾರತ-ನ್ಯೂಜಿಲೆಂಡ್ ಫೈನಲ್​ ಪಂದ್ಯಕ್ಕೂ ಮೊದಲು ಅಮೀರ್ ಶಪಥ ನುಡಿ | IND vs NZ Final

ಪ್ರಮುಖ ಮುಖ್ಯಾಂಶಗಳು

  • ಇಂದು ಟಿ20 ವಿಶ್ವಕಪ್​ ಫೈನಲ್ ಪಂದ್ಯ
  • ಭಾರತ-ನ್ಯೂಜಿಲೆಂಡ್​ ವಿರುದ್ಧ ಹೈವೋಲ್ಟೇಜ್​ ಕದನ
  • ಪಂದ್ಯಕ್ಕೂ ಮುನ್ನ ಪಾಕ್​ ಆಟಗಾರನ ಭವಿಷ್ಯ ನುಡಿ
IND vs NZ Final: ಟೀಮ್ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವ ತವಕದಲ್ಲಿದೆ. ಸತತ ಎರಡನೇ ಬಾರಿಗೆ ಭಾರತ ಟಿ20 ವಿಶ್ವಕಪ್‌ನ ಫೈನಲ್ ತಲುಪಿದ್ದು, ಇಂದು (ಮಾ.08) ಅಹಮದಾಬಾದ್​​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಂತಿಮ ಕಾಳಗ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಅನೇಕ ಕ್ರಿಕೆಟ್​ ದಿಗ್ಗಜರು ಮತ್ತು ಮಾಜಿ ಆಟಗಾರರು ಭವಿಷ್ಯ ನುಡಿಯುತ್ತಿದ್ದಾರೆ. ಇವರ ಮಧ್ಯೆ, ಸದಾ ಮೂಗು ತೂರಿಸುವ ಪಾಕ್​ ಕ್ರಿಕೆಟಿಗರು ಕೂಡ ಭವಿಷ್ಯವಾಣಿ ನುಡಿದಿದ್ದಾರೆ.

ಎರಡು ಬದಲಾವಣೆ?

ನ್ಯೂಜಿಲೆಂಡ್​ ವಿರುದ್ಧ ಫೈನಲ್ ಪಂದ್ಯ ಗೆಲ್ಲಲು ಸೂರ್ಯಕುಮಾರ್ ಕುಮಾರ ಯಾದವ್ ಪಡೆ ಉತ್ತಮ ಪ್ಲ್ಯಾನಿಂಗ್ ಮಾಡಿಕೊಂಡಿದೆ. ಇದರೊಟ್ಟಿಗೆ ಅನೇಕರ ಮಹತ್ವದ ಸಲಹೆಗಳಿಗೆ ಕಿವಿಕೊಟ್ಟು, ತಂಡದಲ್ಲಿ ಒಂದಷ್ಟು ಬದಲಾವಣೆಗಳನ್ನು ಕೂಡ ತಂದಿದೆ ಎಂದು ವರದಿಗಳು ತಿಳಿಸಿವೆ. ಅಹಮದಾಬಾದ್​ ಪಿಚ್​ ಮತ್ತು ಕಿವೀಸ್ ಪಡೆಯನ್ನು ಗಮನದಲ್ಲಿಟ್ಟುಕೊಂಡಿರುವ ಟೀಮ್ ಇಂಡಿಯಾ, ಓಪನರ್​ ಅಭಿಷೇಕ್​ ಶರ್ಮ ಮತ್ತು 'ಮಿಸ್ಟರಿ ಸ್ಪಿನ್ನರ್' ವರುಣ್ ಚಕ್ರವರ್ತಿಯನ್ನು ತಂಡದಿಂದ ಕೈಬಿಡಲು ನಿರ್ಧರಿಸಿದೆ ಎನ್ನಲಾಗಿದೆ.
ಈ ಎಲ್ಲ ಬೆಳವಣಿಗೆಯನ್ನು ದೂರದಿಂದಲೇ ಸೂಕ್ಷ್ಮವಾಗಿ ಗಮನಿಸುತ್ತಿರುವ ಪಾಕ್​ ಆಟಗಾರರು, ಭಾರತ ಸೋತರೆ ಸಾಕಪ್ಪ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ. ಇವರೆಲ್ಲರ ಮಧ್ಯೆ, ಸದಾ ಭಾರತವನ್ನು ಟಾರ್ಗೆಟ್​ ಮಾಡುವ ಮೊಹಮ್ಮದ್ ಅಮೀರ್​, ಈ ಬಾರಿ ಮತ್ತೊಮ್ಮೆ ಟೀಮ್ ಇಂಡಿಯಾ ಸೋಲುತ್ತೆ. ಯಾವುದೇ ಕಾರಣಕ್ಕೂ ಕಿವೀಸ್​ ಎದುರು ಗೆಲುವು ಸಾಧಿಸಿ, ಟಿ20 ವಿಶ್ವಕಪ್​ ಎತ್ತಿಹಿಡಿಯಲು ಆಗಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

ಬುಮ್ರಾ ಬಿಟ್ಟರೆ ಇನ್ಯಾರು?

ನೀವು ನ್ಯೂಜಿಲೆಂಡ್​ ಆಟವನ್ನು ನೋಡಿದರೆ, ಅವರು ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದರು. ತಂಡದಲ್ಲಿ ಕಂಪ್ಲೀಟ್​ ಪ್ರದರ್ಶನವಿತ್ತು. ಅದೇ ಟೀಮ್ ಇಂಡಿಯಾ ನೋಡಿದರೆ, ಕೇವಲ ಇಬ್ಬರು ಆಟಗಾರರ ಮೇಲೆ ಸಂಪೂರ್ಣವಾಗಿ ಅವಲಂಬಿಸಿದೆ. ಜಸ್ಪ್ರೀತ್ ಬುಮ್ರಾ ಮತ್ತು ಸಂಜು ಸ್ಯಾಮ್ಸನ್​ ದೊಡ್ಡ ಇಂಪಾಕ್ಟ್​ ಪ್ಲೇಯರ್​​ ಆಗಿ ಗುರುತಿಸಿಕೊಂಡಿದ್ದಾರೆ ಎಂದು ಅಮೀರ್ ಹೇಳಿದ್ದಾರೆ.

ಬೌಲಿಂಗ್ ಯೂನಿಟ್​ ಬಲಿಷ್ಠವಿಲ್ಲ!

ನರೇಂದ್ರ ಮೋದಿ ಸ್ಟೇಡಿಯಂ ನ್ಯೂಜಿಲೆಂಡ್​ಗೆ ವರದಾನ ಆಗಲಿದೆ. ಕಾರಣ, ಅವರ ಉತ್ತಮ ಫಾರ್ಮ್​ ಇಲ್ಲಿ ವರ್ಕ್ ಆಗಲಿದೆ. ಕಿವೀಸ್​ ಪಡೆಯ ಬೌಲಿಂಗ್ ಯೂನಿಟ್​ ಭಾರತಕ್ಕಿಂತ ಬಲಿಷ್ಠವಾಗಿದೆ. ಅಷ್ಟಕ್ಕೂ, ಬುಮ್ರಾ ಬಿಟ್ಟರೆ ಇನ್ಯಾರು ಆ ತಂಡದಲ್ಲಿ ಒಳ್ಳೆಯ ಫಾರ್ಮ್​ನಲ್ಲಿದ್ದಾರೆ? ವರುಣ್​ ಚಕ್ರವರ್ತಿ ಮತ್ತು ಹಾರ್ದಿಕ್​ ಪಾಂಡ್ಯ ಒದ್ದಾಡುತ್ತಿದ್ದಾರೆ. ಎರಡು ತಂಡದಲ್ಲಿಯೂ ಒಳ್ಳೆಯ ಬ್ಯಾಟಿಂಗ್ ಲೈನ್​ಅಪ್ ಇದೆ. ಆದ್ರೆ, ಬೌಲಿಂಗ್​ನಲ್ಲಿ ನ್ಯೂಜಿಲೆಂಟ್​ ಒಂದು ಕೈಮೇಲಿದೆ. ಹೀಗಾಗಿ, ಸ್ಯಾಟ್ನರ್​ ಪಡೆ ಟಿ20 ವಿಶ್ವಕಪ್​ ಅನ್ನು ಗೆದ್ದು ಬೀಗಲಿದೆ ಎಂದು ಅಮೀರ್​ ಹೇಳಿದ್ದಾರೆ,(ಏಜೆನ್ಸೀಸ್).