ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯ
- ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯ
- ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಧ ಪಂದ್ಯ
- ಟೀಮ್ ಇಂಡಿಯಾ ಕೊಟ್ಟ 254 ರನ್ಗಳನ್ನು ಬೆನ್ನತ್ತುವಲ್ಲಿ ಎಡವಿದ ಆಂಗ್ಲರು
- ರೋಚಕ ಜಯ ಸಾಧಿಸುವ ಮೂಲಕ ಫೈನಲ್ಗೇರಿದ ಟೀಮ್ ಇಂಡಿಯಾ
IND vs ENG: ಇಂದು (ಮಾ.05) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಕಾಳಗದಲ್ಲಿ ಟೀಮ್ ಇಂಡಿಯಾ ರೋಚಕ ಜಯ ಸಾಧಿಸುವ ಮೂಲಕ ಇದೀಗ ಟಿ20 ವಿಶ್ವಕಪ್ ಫೈನಲ್ಗೇರಿದೆ.
254 ರನ್ಗಳ ಬೃಹತ್ ಗುರಿ
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್, ಭಾರತಕ್ಕೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾಗೆ ಸಂಜು ಸ್ಯಾಮ್ಸನ್ (42 ಎಸೆತ 89 ರನ್) ಇಶಾನ್ ಕಿಶನ್ (39), ಶಿವಂ ದುಬೆ (43) ಮತ್ತು ಹಾರ್ದಿಕ್ ಪಾಂಡ್ಯ (27) ಅವರ ಸ್ಪೋಟಕ ಇನ್ನಿಂಗ್ಸ್ ತಂಡದ ಮೊತ್ತವನ್ನು 250ರ ಗಡಿದಾಟಿಸಿತು. 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ ಭಾರತ 253 ರನ್ ಕಲೆಹಾಕಿತು.
ವ್ಯರ್ಥವಾಗದ ಸಂಜು ಅದ್ಭುತ ಇನ್ನಿಂಗ್ಸ್
ಈ ಬೃಹತ್ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ಗೆ ಆರಂಭದಲ್ಲೇ ಫಿಲ್ ಸಾಲ್ಟ್ ಅವರ ವಿಕೆಟ್ ದೊಡ್ಡ ಸಂಕಷ್ಟಕ್ಕೆ ದೂಡಿತು. ಅವರ ನಂತರದಲ್ಲಿ, ಜಾಸ್ ಬಟ್ಲರ್ ಮತ್ತು ನಾಯಕ ಹ್ಯಾರಿ ಬ್ರೂಕ್ ವಿಕೆಟ್ಗಳು ಆಂಗ್ಲರಿಗೆ ಸೋಲಿನ ಭೀತಿ ತಂದಿಟ್ಟಿತು. ಇಲ್ಲಿಗೆ ಭಾರತ ಗೆಲ್ಲುವುದು ಬಹುತೇಕ ಖಚಿತ ಎಂದು ಕ್ರಿಕೆಟ್ ಪ್ರಿಯರು ಖುಷಿಯಾಗಿದ್ದರು. ಆದರೆ, ಟೀಮ್ ಇಂಡಿಯಾ ಅಭಿಮಾನಿಗಳಿಗೆ ಜಾಕೆಬ್ ಬೆಥಲ್ ಮತ್ತು ವಿಲ್ ಜ್ಯಾಕ್ಸ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಬಿಗ್ ಶಾಕ್ ನೀಡಿದರು. ಆದರೆ, ಅಂತಿಮ ಘಟ್ಟದಲ್ಲಿ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಬೌಲಿಂಗ್ ದಾಳಿ ಆಂಗ್ಲರ ಲೆಕ್ಕಾಚಾರಗಳನ್ನೇ ತಲೆಕೆಳಗಾಗಿಸಿತು.
ಕೊನೆಯ ಓವರ್ವರೆಗೂ ಹೋದ ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿದ್ದು, ಕ್ರೀಡಾಂಗಣದಲ್ಲಿ ತುಂಬಿದ್ದ ಕ್ರಿಕೆಟ್ ಪ್ರೇಮಿಗಳು ಮತ್ತು ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮ ಸೇರಿದಂತೆ ಕ್ರಿಕೆಟ್ ದಿಗ್ಗಜರ ಸಂಭ್ರಮಕ್ಕೆ ಸಾಕ್ಷಿಯಾಯಿತು. ಈ ಪಂದ್ಯವನ್ನು ಕೇವಲ 7 ರನ್ಗಳಿಂದ ಗೆದ್ದ ಭಾರತ ಈಗ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟಿ20 ವಿಶ್ವಕಪ್ ಪಟ್ಟಕ್ಕಾಗಿ ಸೆಣಸಲಿದೆ.