ಭಾರತೀಯ ಯುವ ಬ್ಯಾಟರ್ ಅಭಿಷೇಕ್ ಶರ್ಮ
- ಇಂದು ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯ
- ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯ
- ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಫೀಲ್ಡಿಂಗ್ ಆಯ್ಕೆ
- ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಲು ವಿಫಲನಾದ ಅಭಿಷೇಕ್ ಶರ್ಮ
IND vs ENG: ಇಂದು (ಮಾ.05) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ಮತ್ತದೇ ಕಳಪೆ ಪ್ರದರ್ಶನವನ್ನು ಮುಂದುವರಿಸಿದ ಅಭಿಷೇಕ್ ಶರ್ಮ ವಿರುದ್ಧ ಸದ್ಯ ಕ್ರಿಕೆಟ್ ಪ್ರಿಯರು ತೀವ್ರ ಅಸಮಾಧಾನಗೊಂಡಿದ್ದಾರೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್, ಭಾರತಕ್ಕೆ ಬ್ಯಾಟ್ ಮಾಡುವಂತೆ ಆಹ್ವಾನಿಸಿದೆ. ಅಂತೆಯೇ ಬ್ಯಾಟಿಂಗ್ ಶುರು ಮಾಡಿದ ಟೀಮ್ ಇಂಡಿಯಾಗೆ ಇವತ್ತಾದರೂ ಯುವ ಬ್ಯಾಟರ್ ಅಭಿಷೇಕ್ ಶರ್ಮರಿಂದ ಉತ್ತಮ ಇನ್ನಿಂಗ್ಸ್ ಬರಲಿದೆ ಎಂದೇ ಕ್ರಿಕೆಟ್ ಪ್ರಿಯರು ನಿರೀಕ್ಷಿಸಿದ್ದರು. ಆದರೆ, ಭಾರತೀಯ ಕ್ರಿಕೆಟ್ ಅಭಿಮಾನಿಗಳ ಭರವಸೆಯನ್ನು ಇಂದಿನ ಪಂದ್ಯದಲ್ಲಿಯೂ ಛಿದ್ರಗೊಳಿಸಿದ ಅಭಿಷೇಕ್, ಕೇವಲ 9 ರನ್ಗೆ ಔಟ್ ಆಗಿ ಪೆವಿಲಿಯನ್ ಸೇರಿದರು.
ವಿಲ್ ಜ್ಯಾಕ್ಸ್ ಬೌಲಿಂಗ್ನಲ್ಲಿ ಫಿಲ್ ಸಾಲ್ಟ್ಗೆ ಕ್ಯಾಚ್ ನೀಡುವ ಮೂಲಕ ಕೇವಲ 9 ರನ್ಗೆ ಔಟ್ ಆದ ಅಭಿಷೇಕ್, ಹ್ಯಾರಿ ಬ್ರೂಕ್ ಪಡೆಯ ಮುಂದೆಯೂ ಅಬ್ಬರಿಸಲು ವಿಫಲರಾದರು. ಅಷ್ಟಕ್ಕೂ, ಇದೇ ಮೊದಲಾಗಿದಿದ್ದರೆ ಯಾರಿಗೂ ಬೇಸರವಾಗುತ್ತಿರಲಿಲ್ಲ. ಆದ್ರೆ, ಗ್ರೂಪ್ ಸ್ಟೇಜ್ ಹಂತದ ಮೂರು ಪಂದ್ಯಗಳಲ್ಲಿಯೂ ಸತತ ಡಕ್ಔಟ್ ಆದ ಅಭಿ, ಸೂಪರ್-8 ಮ್ಯಾಚ್ನಲ್ಲೂ ಫ್ಲಾಪ್ ಆದರು. ಇಷ್ಟಾದರೂ ಅವರ ಮೇಲೆ ನಂಬಿಕೆಯಿಟ್ಟು, ಸೆಮೀಫೈನಲ್ ಪಂದ್ಯದಲ್ಲಿ ಆಡಿಸಿದ ಗೌತಮ್ ಗಂಭೀರ್ಗೆ ಇದೀಗ ಮತ್ತೊಮ್ಮೆ ಭಾರೀ ಮುಖಭಂಗವೇ ಉಂಟಾಗಿದೆ.
ಅಭಿಗೆ ನೆಟ್ಟಿಗರ ತರಾಟೆ!
ಈ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಒಂದು ಪಂದ್ಯವನ್ನು ಹೊರತುಪಡಿಸಿದರೆ ಉಳಿದೆಲ್ಲ ಪಂದ್ಯದಲ್ಲಿಯೂ ಫ್ಲಾಪ್ ಆಗಿರುವ ಅಭಿಷೇಕ್ ಶರ್ಮ ವಿರುದ್ಧ ಭಾರತೀಯ ಕ್ರಿಕೆಟ್ ಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಟೀಕಿಸಿರುವ ಫ್ಯಾನ್ಸ್, ನಿಮ್ಮಿಂದ ಇದು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನೂ ಕೆಲವರು, ಉತ್ತಮ ಇನ್ನಿಂಗ್ಸ್ ನೀಡಲು ಈತನಿಂದ ಆಗ್ತಿಲ್ಲ ಎಂದಮೇಲೆ ಇನ್ನೂ ಎಷ್ಟು ಅವಕಾಶಗಳನ್ನು ಕೊಡ್ತೀರಿ ಎಂದು ಕಿಡಿಕಾರಿದ್ದಾರೆ,(ಏಜೆನ್ಸೀಸ್).