IND vs ENG ಐದನೇ ಟಿ20 ಪಂದ್ಯ
- ಐದನೇ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ಗೆ ಜಯ
- 56 ರನ್‌ಗಳ ಜಯ, ಆಂಗ್ಲರ ಪಾಲಿಗೆ ಒಲಿದ ಟಿ20 ಸರಣಿ
- 4-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದ ಹ್ಯಾರಿ ಬ್ರೂಕ್ ಪಡೆ
IND vs ENG: ನಿನ್ನೆ (ಜು.11) ಸೌತಾಂಪ್ಟನ್ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಕೊನೆಯ ಹಾಗೂ ಐದನೇ ಟಿ20 ಪಂದ್ಯದಲ್ಲಿಯೂ ಭಾರತ ಗೆಲುವು ದಾಖಲಿಸುವಲ್ಲಿ ಎಡವಿದ್ದು, ಕ್ಲೀನ್ ಸ್ವೀಪ್ ಆಗುವ ಮೂಲಕ ಸದ್ಯ ಭಾರಿ ಮುಖಭಂಗಕ್ಕೆ ಗುರಿಯಾಗಿದೆ. ಟಿ20 ಸರಣಿಯ ಹೀನಾಯ ಸೋಲಿನ ಬೆನ್ನಲ್ಲೇ ಮಾತನಾಡಿದ ಟೀಮ್ ಇಂಡಿಯಾ ಕ್ಯಾಪ್ಟನ್ ಶ್ರೇಯಸ್ ಅಯ್ಯರ್, ಪಂದ್ಯದ ಸೋಲಿಗೆ ಏನು ಕಾರಣ ಎಂಬುದನ್ನು ಓಪನ್ ಆಗಿ ಮಾತನಾಡಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ನಿಗದಿತ 20 ಓವರ್‌ಗಳಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ 257 ರನ್ ಗಳಿಸಿತು. ಜಾಸ್ ಬಟ್ಲರ್ (64 ಎಸೆತಗಳಲ್ಲಿ 131 ರನ್, 12 ಬೌಂಡರಿ, 8 ಸಿಕ್ಸರ್) ಅದ್ಭುತ ಇನ್ನಿಂಗ್ಸ್ ಆಡಿದರೆ, ಕ್ಯಾಪ್ಟನ್ ಹ್ಯಾರಿ ಬ್ರೂಕ್ (45 ಎಸೆತಗಳಲ್ಲಿ ಅಜೇಯ 95 ರನ್, 4 ಬೌಂಡರಿ, 8 ಸಿಕ್ಸರ್) ಭಾರತೀಯ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಜಾಡಿಸಿದರು. ಈ ಜೋಡಿ ಕೇವಲ 103 ಎಸೆತಗಳಲ್ಲಿ ಎರಡನೇ ವಿಕೆಟ್‌ಗೆ 233 ರನ್ ಸೇರಿಸಿತು. ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಎಂದಿನಂತೆ ಟಾಪ್ ಆರ್ಡರ್ ಬ್ಯಾಟರ್ಗಳಿಂದ ಉತ್ತಮ ಪ್ರದರ್ಶನ ಬರಲಿಲ್ಲ.
20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ ಕೇವಲ 201 ರನ್ ಗಳಿಸಲಷ್ಟೇ ಭಾರತ ಶಕ್ತವಾಯಿತು. ಇಶಾನ್ ಕಿಶನ್ (35 ಎಸೆತಗಳಲ್ಲಿ 56 ರನ್, 7 ಬೌಂಡರಿ, 2 ಸಿಕ್ಸರ್) ಮತ್ತು ತಿಲಕ್ ವರ್ಮಾ (25 ಎಸೆತಗಳಲ್ಲಿ 53 ರನ್, 3 ಬೌಂಡರಿ, 4 ಸಿಕ್ಸರ್) ಅರ್ಧಶತಕ ಗಳಿಸಿದರು. ಉಳಿದ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಲು ವಿಫಲರಾದರು. ಇದರಿಂದ ಟೀಮ್ ಇಂಡಿಯಾ ಆಂಗ್ಲರ ವಿರುದ್ಧ ಒಂದೇ ಒಂದು ಪಂದ್ಯವನ್ನು ಗೆಲ್ಲದೆ ಸರಣಿಯನ್ನು ಕಳೆದುಕೊಂಡಿತು.
ಐದನೇ ಟಿ20 ಪಂದ್ಯವನ್ನು ಸೋತ ಬಳಿಕ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್, ಈ ಸರಣಿಯಲ್ಲಿನ ಪ್ರತಿಯೊಂದು ಪಂದ್ಯದಲ್ಲೂ ಪರಿಸ್ಥಿತಿಗಳು ಬದಲಾಗುತ್ತಿವೆ. ಆದರೆ, ಕಳೆದ ಪಂದ್ಯದ ಪಿಚ್ ಅತ್ಯುತ್ತಮವಾಗಿತ್ತು. ಹೀಗಾಗಿಯೇ, ನಾವು ಬ್ಯಾಟಿಂಗ್ ಲೈನ್ಅಪ್ ಅನ್ನು ಬದಲಾಯಿಸಬೇಕಾಯಿತು. ವೃತ್ತಿಪರ ತಂಡವಾಗಿ ಪ್ರತಿಯೊಂದು ಪರಿಸ್ಥಿತಿಗೆ ಹೊಂದಿಕೊಳ್ಳುವುದು ಬಹಳ ಮುಖ್ಯ. ನಮ್ಮ ತಂಡವು ಫೀಲ್ಡಿಂಗ್‌ನಲ್ಲಿ ಸಾಕಷ್ಟು ತಪ್ಪುಗಳನ್ನು ಮಾಡಿದೆ. ಮುಖ್ಯವಾಗಿ, ಕೈಬಿಟ್ಟ ಎರಡು ಕ್ಯಾಚ್‌ಗಳು ಪಂದ್ಯದ ದಿಕ್ಕನ್ನೇ ಬದಲಿಸಿತು. ಆ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡಿದ್ದರೆ ಎದುರಾಳಿ ತಂಡವನ್ನು 220ರಿಂದ 225 ರನ್‌ಗೆ ಕಟ್ಟಿಹಾಕಬಹುದಿತ್ತು ಎಂದರು.
ಇನ್ನು, ತಂಡದ ಬ್ಯಾಟಿಂಗ್ ಬಗ್ಗೆ ಮಾತನಾಡುತ್ತಾ, ಪವರ್‌ಪ್ಲೇಯಲ್ಲಿ ವಿಕೆಟ್‌ಗಳು ಹೋಗುವುದು ತಂಡಕ್ಕೆ ದೊಡ್ಡ ಹೊಡೆತ. ಇಂತಹ ಪಿಚ್‌ಗಳಲ್ಲಿ, ನೀವು ಮೊದಲು ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ನಾವು ವಿಫಲರಾಗಿದ್ದೇವೆ. ಇಂಗ್ಲೆಂಡ್ ಬೌಲರ್‌ಗಳು ತಮ್ಮ ಪ್ಲ್ಯಾನ್ ಅನ್ನು ಅದ್ಭುತವಾಗಿ ಎಕ್ಸಿಕ್ಯೂಟ್ ಮಾಡಿದ್ದಾರೆ. ಅದಕ್ಕೆ ನನ್ನ ಮೆಚ್ಚುಗೆಯಿದೆ. ತವರಿನಲ್ಲಿ ಆಡುವ ಅನುಭವವೂ ಅವರಿಗಿದೆ. ಪಂದ್ಯದಲ್ಲಿ ಜಾಸ್ ಬಟ್ಲರ್ ಮತ್ತು ಹ್ಯಾರಿ ಬ್ರೂಕ್ ಅವರ ಪಾರ್ಟ್ನರ್ಶಿಪ್ ಬ್ಯಾಟಿಂಗ್ ಇಂಗ್ಲೆಂಡ್‌ನ ಇನ್ನಿಂಗ್ಸ್‌ಗೆ ಬಲವಾದ ಅಡಿಪಾಯವನ್ನು ಹಾಕಿಕೊಟ್ಟಿತು. ಕೊನೆಯದಾಗಿ, ಈ ಸರಣಿಯಲ್ಲಿ ಪಡೆದ ಅನುಭವಗಳು ಭವಿಷ್ಯದ ವಿದೇಶ ಪ್ರವಾಸಗಳಲ್ಲಿ ಖಂಡಿತವಾಗಿಯೂ ಉಪಯೋಗವಾಗಲಿವೆ ಮತ್ತು ಈ ಪಾಠಗಳನ್ನು ಮರೆಯುವಂತಿಲ್ಲ ಎಂದು ಹೇಳಿದರು,(ಏಜೆನ್ಸೀಸ್).