- ಇಂದು ಭಾರತ-ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯ
- ಈ ಪಂದ್ಯ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ವೇಗಿಗೆ ಐಸಿಸಿ ಎಚ್ಚರಿಕೆ
- ಒಂದು ಡಿಮೆರಿಟ್ ಪಾಯಿಂಟ್ ಕಟ್ ಮಾಡಿ, ವಾರ್ನಿಂಗ್ ನೀಡಿದ ಐಸಿಸಿ
IND vs ENG 2nd ODI: ಇಂದು (ಜು.16) ಕಾರ್ಡಿಫ್ ವೇಲ್ಸ್ ಮೈದಾನದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿಯೂ ಗೆಲುವು ಸಾಧಿಸಿ, ಸರಣಿಯನ್ನು ಗೆದ್ದು ಬೀಗಲು ಟೀಮ್ ಇಂಡಿಯಾ ಕಣ್ಣಿಟ್ಟಿದೆ. ಇದೇ ಸಮಯದಲ್ಲಿ, ಪಂದ್ಯ ಆರಂಭಕ್ಕೂ ಮುನ್ನವೇ ಭಾರತೀಯ ತಂಡದ ಸ್ಟಾರ್ ವೇಗಿ ಗುರ್ನೂರ್ ಬ್ರಾರ್ಗೆ ಐಸಿಸಿ ಖಡಕ್ ಎಚ್ಚರಿಕೆ ನೀಡಿದೆ.
ವೇಗದ ಬೌಲರ್ಗೆ ವಾರ್ನಿಂಗ್ ನೀಡಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ, ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ನಿಯಮವನ್ನು ಉಲ್ಲಂಘಿಸಿದ ಆರೋಪದ ಮೇಲೆ ಬ್ರಾರ್ ಅವರಿಗೆ ಮುಂದಿನ ಪಂದ್ಯಗಳಲ್ಲಿ ಇಂತಹ ತಪ್ಪನ್ನು ರಿಪೀಟ್ ಮಾಡದಂತೆ ಎಚ್ಚರಿಸಿ, ಒಂದು ಡಿಮೆರಿಟ್ ಪಾಯಿಂಟ್ ಅನ್ನು ವಿಧಿಸಿದೆ.
ಬ್ರಾರ್ ಮಾಡಿದ ತಪ್ಪೇನು?
ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿ, ಸರಣಿಯಲ್ಲಿ ಮುನ್ನಡೆ ಸಾಧಿಸಿದ ಟೀಮ್ ಇಂಡಿಯಾ ಪರ ವೇಗಿ ಗುರ್ನೂರ್ ಬ್ರಾರ್, ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.9 ಅನ್ನು ಉಲ್ಲಂಘಿಸಿರುವುದು ಸಾಬೀತಾಗಿದೆ. ಈ ನಿಯಮ ಪ್ರಕಾರ, ಅಂತಾರಾಷ್ಟ್ರೀಯ ಪಂದ್ಯದಲ್ಲಿ ಎದುರಾಳಿ ಆಟಗಾರನ ಮೇಲೆ ಅಥವಾ ಆತನ ಹತ್ತಿರ ಅನುಚಿತ ಹಾಗೂ ಅಪಾಯಕಾರಿ ರೀತಿಯಲ್ಲಿ ಚೆಂಡನ್ನು ಎಸೆಯುವುದು ತಪ್ಪಾಗಿದೆ.
ಮೈದಾನದಲ್ಲಿ ನಡೆದಿದ್ದೇನು?
ಇಂಗ್ಲೆಂಡ್ ಇನಿಂಗ್ಸ್‌ನ 8ನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಗುರ್ನೂರ್ ಬ್ರಾರ್ ತಮ್ಮ ಬೌಲಿಂಗ್ನಲ್ಲಿ ಬ್ಯಾಟರ್ನಿಂದ ಬಂದ ಬಾಲ್ ಅನ್ನು ಹಿಡಿದು, ಕ್ರೀಸ್‌ನಲ್ಲಿದ್ದ ಇಂಗ್ಲೆಂಡ್ ಬ್ಯಾಟರ್ ಬೆನ್ ಡಕೆಟ್ ಅವರತ್ತ ನೇರವಾಗಿ ಬೀಸಿದರು. ಬ್ರಾರ್ರ ಈ ವರ್ತನೆ ಅತ್ಯಂತ ಅಪಾಯಕಾರಿ ಹಾಗೂ ಸರಿಯಲ್ಲ ಎಂದು ಆನ್ಫೀಲ್ಡ್ ಅಂಪೈರ್ ತೀರ್ಮಾನಿಸಿದ ಬೆನ್ನಲ್ಲೇ ಐಸಿಸಿ ಎಚ್ಚರಿಕೆ ಕೊಟ್ಟಿದೆ.
ಏನಿದು ಡಿಮೆರಿಟ್ ಪಾಯಿಂಟ್?
ಮೈದಾನದಲ್ಲಿ ಆಟಗಾರರು ಪಂದ್ಯದ ನಡುವೆ ಅಶಿಸ್ತು ತೋರಿದರೆ, ಅಂತಹವರಿಗೆ ಐಸಿಸಿ ಡಿಮೆರಿಟ್ ಪಾಯಿಂಟ್‌ಗಳನ್ನು ನೀಡುತ್ತದೆ. ಈ ಡಿಮೆರಿಟ್ ಪಾಯಿಂಟ್‌ಗಳು ಆಟಗಾರನ ಶಿಸ್ತಿನ ಪಟ್ಟಿಯಲ್ಲಿ ಒಂದು ವರ್ಷದ ಮಟ್ಟಿಗೆ ಇರಲಿದೆ. ನಂತರ ಡಿಲೀಟ್ ಆಗಲಿವೆ. ಅದೇ ಏನಾದರೂ 24 ತಿಂಗಳ ಅವಧಿಯಲ್ಲಿ 4 ಅಥವಾ ಅದಕ್ಕಿಂತ ಹೆಚ್ಚು ಬಾರಿ ಡಿಮೆರಿಟ್ ಪಾಯಿಂಟ್‌ಗಳನ್ನು ಪಡೆದರೆ, ಆ ಆಟಗಾರ ಮುಂದಿನ ಪಂದ್ಯಗಳಿಂದ ಬ್ಯಾನ್ ಆಗುವ ಎಲ್ಲ ಸಾಧ್ಯತೆಗಳು ಹೆಚ್ಚಿರುತ್ತವೆ,(ಏಜೆನ್ಸೀಸ್).