Hardik Pandya  
ಕ್ರಿಕೆಟ್

KKR ವಿರುದ್ಧ ಸೋಲು.. ಅದರ ನಡುವೆ ಹಾರ್ದಿಕ್‌ಗೆ ಮತ್ತೊಂದು ಶಾಕ್‌! | Hardik Pandya

ಮುಂಬೈ: ಹಾರ್ದಿಕ್ ಪಾಂಡ್ಯ(Hardik Pandya) ನೇತೃತ್ವದ Mumbai Indians ತಂಡಕ್ಕೆ ಬುಧವಾರ ನಡೆದ ಐಪಿಎಲ್‌ 2026 ಪಂದ್ಯದಲ್ಲಿ ನಿರಾಸೆ ಎದುರಾಯಿತು. Kolkata Knight Riders ವಿರುದ್ಧದ ಪಂದ್ಯದಲ್ಲಿ ಸೋಲು ಕಂಡಿದ್ದಲ್ಲದೆ, ಪಂದ್ಯದ ವೇಳೆ ನಿಯಮ ಉಲ್ಲಂಘಿಸಿದ ಕಾರಣ ಹಾರ್ದಿಕ್ ಪಾಂಡ್ಯಗೆ ಐಪಿಎಲ್‌ ಆಡಳಿತ ಮಂಡಳಿ ದಂಡ ವಿಧಿಸಿದೆ.
ಪಂದ್ಯದ ವೇಳೆ ಕೋಪ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಹಾರ್ದಿಕ್ ಪಾಂಡ್ಯ ಅವರ ಪಂದ್ಯ ಶುಲ್ಕದ 10 ರಷ್ಟು ದಂಡ ವಿಧಿಸಲಾಗಿದ್ದು, ಜೊತೆಗೆ ಒಂದು ಡಿಮೆರಿಟ್ ಪಾಯಿಂಟ್‌ ಕೂಡ ನೀಡಲಾಗಿದೆ. ಐಪಿಎಲ್‌ ನಡವಳಿಕೆ ಸಂಹಿತೆಯ ಲೆವೆಲ್‌-1 ನಿಯಮ ಉಲ್ಲಂಘನೆಯಡಿ ಈ ಕ್ರಮ ಕೈಗೊಳ್ಳಲಾಗಿದೆ.
ಕೊಲ್ಕತ್ತಾ ಇನ್ನಿಂಗ್ಸ್‌ನ 10ನೇ ಓವರ್‌ ವೇಳೆ ಈ ಘಟನೆ ನಡೆದಿದೆ. ಬೌಲಿಂಗ್‌ ಮಾಡಲು ಹಿಂತಿರುಗುತ್ತಿದ್ದಾಗ ಹಾರ್ದಿಕ್ ಪಾಂಡ್ಯ ವಿಕೆಟ್‌ನ ಬೇಲ್ಸ್‌ಗಳನ್ನು ಬಲವಾಗಿ ಕೆಡವಿದ್ದರು. ಇದನ್ನು “ಮೈದಾನ ಉಪಕರಣಗಳ ದುರುಪಯೋಗ” ಎಂದು ಪರಿಗಣಿಸಿದ ಐಪಿಎಲ್‌ ಆಡಳಿತ ಮಂಡಳಿ, ಸಂಹಿತೆಯ 2.2ನೇ ವಿಧಿಯ ಅಡಿಯಲ್ಲಿ ಕ್ರಮ ಕೈಗೊಂಡಿದೆ.
ಇನ್ನೊಂದೆಡೆ, ಪಂದ್ಯದಲ್ಲಿ ಕೊಲ್ಕತ್ತಾ ತಂಡ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿ ಪ್ಲೇಆಫ್‌ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಮುಂಬೈ ಇಂಡಿಯನ್ಸ್‌ ನೀಡಿದ್ದ ಗುರಿಯನ್ನು ಹಿಂಬಾಲಿಸಿದ ಕೆಕೆಆರ್‌ ನಿರ್ಣಾಯಕ ಕ್ಷಣಗಳಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿ ಗೆಲುವು ತನ್ನದಾಗಿಸಿಕೊಂಡಿತು.
ಪಂದ್ಯಾನಂತರ ಮಾತನಾಡಿದ ಹಾರ್ದಿಕ್ ಪಾಂಡ್ಯ, “ನಮ್ಮ ಬ್ಯಾಟಿಂಗ್‌ ವಿಭಾಗ ಇನ್ನೂ 15-20 ರನ್‌ ಹೆಚ್ಚು ಗಳಿಸಬೇಕಿತ್ತು. ಪವರ್‌ಪ್ಲೇನಲ್ಲಿ ನಾವು ಬೇಗ ವಿಕೆಟ್‌ ಕಳೆದುಕೊಂಡೆವು. ನಾನು ಮತ್ತು Tilak Varma ಇನ್ನಷ್ಟು ಹೊತ್ತು ಕ್ರೀಸ್‌ನಲ್ಲಿ ಉಳಿದಿದ್ದರೆ ಪಂದ್ಯ ಬೇರೆ ರೀತಿಯಾಗಬಹುದಿತ್ತು,” ಎಂದು ಹೇಳಿದರು.
ಪಿಚ್‌ ಬಗ್ಗೆ ಮಾತನಾಡಿದ ಅವರು, “ಬೌಲರ್‌ಗಳಿಗೆ ಸಹಾಯವಾಗುವಂತಹ ಪಿಚ್‌ನಲ್ಲಿ ಆಡೋದರಲ್ಲಿ ನನಗೆ ತೊಂದರೆ ಇಲ್ಲ. ಇತ್ತೀಚೆಗೆ ಐಪಿಎಲ್‌ ತುಂಬಾ ಬ್ಯಾಟಿಂಗ್‌ ಆಧಾರಿತವಾಗುತ್ತಿದೆ. ಬೌಲರ್‌ಗಳು ಸಂಪೂರ್ಣ ಅಸಹಾಯಕರಾಗುತ್ತಿದ್ದಾರೆ. ಆದರೆ ಇಂದಿನ ಪಿಚ್‌ ಬೌಲರ್‌ಗಳಿಗೆ ಸಹಾಯ ಮಾಡಿತು. ಅದರಿಂದ ಉತ್ತಮ ಸ್ಪರ್ಧಾತ್ಮಕ ಕ್ರಿಕೆಟ್‌ ನೋಡಲು ಸಾಧ್ಯವಾಯಿತು,” ಎಂದು ಅಭಿಪ್ರಾಯಪಟ್ಟರು.
ತಂಡದ ಫೀಲ್ಡಿಂಗ್‌ ವೈಫಲ್ಯವನ್ನೂ ಹಾರ್ದಿಕ್ ಒಪ್ಪಿಕೊಂಡರು. “ಈ ಸೀಸನ್‌ ಪಂದ್ಯಗಳಲ್ಲಿ ನಮ್ಮ ಫೀಲ್ಡಿಂಗ್‌ ದುರ್ಬಲವಾಗಿದೆ. ಅನೇಕ ಕ್ಯಾಚ್‌ಗಳನ್ನು ಕೈಚೆಲ್ಲಿದ್ದೇವೆ. ಪಂದ್ಯ ಗೆಲ್ಲಬೇಕಾದರೆ ಅರ್ಧ ಅವಕಾಶಗಳನ್ನೂ ಬಳಸಿಕೊಳ್ಳಬೇಕು. ಮುಖ್ಯ ಕ್ಷಣಗಳಲ್ಲಿ ಕ್ಯಾಚ್‌ ಬಿಟ್ಟರೆ ನಂತರ ಆಟವನ್ನು ಹಿಂಬಾಲಿಸಬೇಕಾಗುತ್ತದೆ,” ಎಂದು ಹೇಳಿದರು.
ಸೀಸನ್‌ನ ಉಳಿದ ಪಂದ್ಯಗಳ ಬಗ್ಗೆ ಮಾತನಾಡಿದ ಹಾರ್ದಿಕ್, “ಮುಂದಿನ ಪಂದ್ಯ ESA ಗೇಮ್‌. ಮಕ್ಕಳಿಗಾಗಿ ವಿಶೇಷ ಪಂದ್ಯ ಆಯೋಜಿಸಲಾಗಿದೆ. ಸುಮಾರು 25 ಸಾವಿರ ಮಕ್ಕಳು ಮೈದಾನಕ್ಕೆ ಬರಲಿದ್ದಾರೆ. ಅವರನ್ನು ಮನರಂಜಿಸಿ, ಸಂತೋಷ ಪಡಿಸುವುದು ನಮ್ಮ ಗುರಿ. ಅವರಿಗೆ ಇದು ಜೀವನಪೂರ್ತಿ ನೆನಪಾಗುವ ಅನುಭವವಾಗಬೇಕು,” ಎಂದರು.
ಮುಂಬೈ ಇಂಡಿಯನ್ಸ್‌ ಈಗಾಗಲೇ ಅಸ್ಥಿರ ಪ್ರದರ್ಶನದಿಂದ ಟೀಕೆಗೆ ಗುರಿಯಾಗಿದ್ದು, ನಾಯಕ ಹಾರ್ದಿಕ್ ಪಾಂಡ್ಯ ಮೇಲೂ ಒತ್ತಡ ಹೆಚ್ಚಾಗಿದೆ. ತಂಡದ ಬ್ಯಾಟಿಂಗ್‌, ಫೀಲ್ಡಿಂಗ್‌ ಮತ್ತು ಮಧ್ಯಮ ಕ್ರಮಾಂಕದ ವೈಫಲ್ಯಗಳು ಈ ಸೀಸನ್‌ನಲ್ಲಿ ಹಲವು ಪಂದ್ಯಗಳಲ್ಲಿ ದುಬಾರಿಯಾಗಿವೆ. ಈಗ ಉಳಿದಿರುವ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಅಭಿಮಾನಿಗಳ ನಿರೀಕ್ಷೆ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ತಂಡದ ಮುಂದಿದೆ,(ಏಜೆನ್ಸೀಸ್​).