7, 0, 5... 11 ವರ್ಷಗಳಲ್ಲೇ ಇದು ಮೊದಲು! 2027ರ ಏಕದಿನ ವಿಶ್ವಕಪ್​ಗೂ ಮುನ್ನವೇ ಏನಾಯ್ತು ಕಿಂಗ್ ಕೊಹ್ಲಿಗೆ? | Virat Kohli 
ಕ್ರಿಕೆಟ್

7, 0, 5... 11 ವರ್ಷಗಳಲ್ಲೇ ಇದು ಮೊದಲು! 2027ರ ಏಕದಿನ ವಿಶ್ವಕಪ್​ಗೂ ಮುನ್ನವೇ ಏನಾಯ್ತು ಕಿಂಗ್ ಕೊಹ್ಲಿಗೆ? | Virat Kohli

ನವದೆಹಲಿ: ಇತ್ತೀಚೆಗಷ್ಟೇ ಮುಕ್ತಾಯಗೊಂಡ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 3-1 ಅಂತರದಲ್ಲಿ ಸರಣಿಯನ್ನು ಗೆದ್ದು ಬೀಗಿದ್ದೇ ಆದರೂ ತಂಡದ ದಿಗ್ಗಜ ಬ್ಯಾಟ್ಸ್​ಮನ್​, 'ದಾಖಲೆಗಳ ಸರದಾರ' ವಿರಾಟ್​ ಕೊಹ್ಲಿ (Virat Kohli) ಅವರ ಕಳಪೆ ಬ್ಯಾಟಿಂಗ್ ಪ್ರದರ್ಶನ ಇದೀಗ ಕ್ರಿಕೆಟ್​ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಕಳಪೆ ಬ್ಯಾಟಿಂಗ್ ಪ್ರದರ್ಶನ

ಈ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೊಹ್ಲಿಯೇ ಆದರೂ ಆಡಿದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 21.50 ಸರಾಸರಿಯೊಂದಿಗೆ ಕೇವಲ 86 ರನ್‌ಗಳಷ್ಟೇ ಕೊಹ್ಲಿ ಗಳಿಸಿರುವುದು ಸದ್ಯ ಅವರ ಕರಿಯರ್​ನ ಕೆಟ್ಟ ದಾಖಲೆಯಾಗಿದೆ. ಇಡೀ ಸರಣಿಯಲ್ಲಿ ಯಾವುದೇ ಭಾರತೀಯ ಬ್ಯಾಟರ್ 100 ರನ್‌ಗಳ ಗಡಿಯನ್ನು ತಲುಪಲು ಸಾಧ್ಯವಾಗಲಿಲ್ಲ ಎಂಬುದು ತಂಡದ ಬ್ಯಾಟಿಂಗ್ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಇದೇ ಸಮಯದಲ್ಲಿ, ಅನೇಕರು ವಿರಾಟ್​ರ ಕಳಪೆ ದಾಖಲೆಯನ್ನು ಟೀಕಿಸಿ, 2027ರ ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆಯುವ ಬಗ್ಗೆ ಪ್ರಶ್ನಿಸಿದ್ದಾರೆ.

11 ವರ್ಷಗಳ ಏಕದಿನ ಸರಣಿ

ಆಕ್ಲೆಂಡ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಮಳೆಯ ಅಡಚಣೆಯ ನಡುವೆಯೂ, ಕೊಹ್ಲಿ ಅದ್ಭುತ ಇನ್ನಿಂಗ್ಸ್ ಆಡಿದರು. ಅವರು ಕೇವಲ 51 ಎಸೆತಗಳಲ್ಲಿ 13 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 74 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಆದರೆ, ನಂತರದ ಪಂದ್ಯಗಳಲ್ಲಿ ವಿರಾಟ್​ ತಮ್ಮ ಲಯವನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ವೆಲ್ಲಿಂಗ್ಟನ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 7 ರನ್‌ಗೆ ಔಟಾದರು. ಮೂರನೇ ಏಕದಿನ ಪಂದ್ಯ ಮಳೆಯ ಕಾರಣದಿಂದ ರದ್ದುಗೊಂಡಿತು.

ಇನ್ನು, ಮೌಂಟ್ ಮೌಂಗನುಯಿಯಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ, ಮ್ಯಾಟ್ ಹೆನ್ರಿ ಅವರ ಬೌಲಿಂಗ್‌ನಲ್ಲಿ ಕೊಹ್ಲಿ ಯಾವುದೇ ರನ್ ಗಳಿಸದೆ, ಶೂನ್ಯಕ್ಕೆ ಔಟಾದರು. ಭಾನುವಾರ ನಡೆದ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ, ಮ್ಯಾಥ್ಯೂ ಫಿಶರ್ ಅವರ ಬೌಲಿಂಗ್​ನಲ್ಲಿ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿ ಕೇವಲ 5 ರನ್‌ಗೆ ಪೆವಿಲಿಯನ್‌ ಹಾದಿ ಹಿಡಿದರು.

7, 0, 5...

ಮೊದಲ ಪಂದ್ಯದಲ್ಲಿ ಗಳಿಸಿದ 74 ರನ್‌ಗಳನ್ನು ಹೊರತುಪಡಿಸಿದರೆ, ಮುಂದಿನ ಮೂರು ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಕೇವಲ 12 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ. ಏಕದಿನ ಸರಣಿಯೊಂದರಲ್ಲಿ ಕೊಹ್ಲಿ ಸತತ ಮೂರು ಬಾರಿ ಏಕ ಅಂಕದ ಮೊತ್ತಕ್ಕೆ (7, 0, 5) ಸೀಮಿತವಾಗಿದ್ದು, ಕಳೆದ 11 ವರ್ಷಗಳಲ್ಲಿ ಇದೇ ಮೊದಲು. ಇದಕ್ಕೂ ಮೊದಲು 2014-15ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಅವರು ಏಕ ಅಂಕದ ಮೊತ್ತಕ್ಕೆ ಔಟಾಗಿದ್ದರು.

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ 2,000 ರನ್‌ಗಳ ಮೈಲಿಗಲ್ಲನ್ನು ತಲುಪಲು 103 ರನ್‌ಗಳ ಅಗತ್ಯವಿದ್ದ ಕೊಹ್ಲಿ, ಸದ್ಯ ಆ ದಾಖಲೆಯಿಂದ 17 ರನ್‌ಗಳಷ್ಟು ದೂರದಲ್ಲಿದ್ದಾರೆ. 2027ರ ಏಕದಿನ ವಿಶ್ವಕಪ್‌ಗೆ ಸಿದ್ಧತೆ ನಡೆಯುತ್ತಿರುವ ಈ ನಿರ್ಣಾಯಕ ಹಂತದಲ್ಲಿ, ವೇಗ ಮತ್ತು ಬೌನ್ಸ್ ಇರುವ ಪಿಚ್‌ಗಳಲ್ಲಿ ವಿರಾಟ್ ಕೊಹ್ಲಿ ವಿಫಲರಾಗುತ್ತಿರುವುದು ಟೀಮ್ ಇಂಡಿಯಾದ ಮ್ಯಾನೇಜ್​ಮೆಂಟ್​ಗೆ ಮುಂದಿನ ಆಯ್ಕೆ ವಿಚಾರದಲ್ಲಿ ತೀವ್ರ ಗೊಂದಲ ಸೃಷ್ಟಿಸಿದೆ,(ಏಜೆನ್ಸೀಸ್).