ಕ್ರಿಕೆಟಿಗರಿಂದ ಪಾಕ್ ಸರ್ಕಾರಕ್ಕೆ ಪತ್ರ ( Imran Khan )
- ಕೆಲವು ವರ್ಷಗಳಿಂದ ಜೈಲಿನಲ್ಲಿ ಬಂಧಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್
- ಕ್ಷೀಣಿಸುತ್ತಿದೆ ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ಅವರ ಆರೋಗ್ಯ
- ಇಮ್ರಾನ್‌ಗೆ ಸೂಕ್ತ ಚಿಕಿತ್ಸೆ ಕೊಡಿಸಿ ಎಂದು ಪಾಕಿಸ್ತಾನ ಸರ್ಕಾರಕ್ಕೆ ಪತ್ರ ಬರೆದ 14 ದಿಗ್ಗಜ ಕ್ರಿಕೆಟಿಗರು
ಅಹಮದಾಬಾದ್: ಕೆಲವು ವರ್ಷಗಳಿಂದ ಜೈಲಿನಲ್ಲಿ ಬಂಧಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ( Imran Khan ) ಅವರ ಆರೋಗ್ಯದ ಬಗ್ಗೆ 14 ದಿಗ್ಗಜ ಕ್ರಿಕೆಟಿಗರು ಕಳವಳ ವ್ಯಕ್ತಪಡಿಸಿದ್ದು, ಪಾಕ್ ಸರ್ಕಾರಕ್ಕೆ ಪತ್ರ ಬರೆದು, ಇಮ್ರಾನ್ ಖಾನ್ಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕೆಂದು ಮನವಿ ಮಾಡಿದ್ದಾರೆ.
ಯಾರೆಲ್ಲ ಸಹಿ ಹಾಕಿದ್ದಾರೆ?
ಭಾರತ ಸೇರಿದಂತೆ ಐದು ದೇಶಗಳ ಮಾಜಿ ನಾಯಕರು ಇಮ್ರಾನ್‌ಗೆ ಸೂಕ್ತ ಚಿಕಿತ್ಸೆ ಮತ್ತು ಆರೈಕೆ ಒದಗಿಸಬೇಕೆಂದು ಒತ್ತಾಯಿಸಿ ಪಾಕಿಸ್ತಾನ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಪತ್ರಕ್ಕೆ ಸುನಿಲ್ ಗವಾಸ್ಕರ್, ಕಪಿಲ್ ದೇವ್, ಅಲನ್ ಬಾರ್ಡರ್, ಗ್ರೆಗ್ ಚಾಪೆಲ್, ಇಯಾನ್ ಚಾಪೆಲ್, ಸ್ಟೀವ್ ವಾ, ಬೆಲಿಂಡಾ ಕ್ಲಾರ್ಕ್, ಮೈಕೆಲ್ ಅಥರ್ಟನ್, ಮೈಕೆಲ್ ಬ್ರಿಯರ್ಲಿ, ಡೇವಿಡ್ ಗೋವರ್, ಕಿಮ್ ಹ್ಯೂಸ್, ನಾಸರ್ ಹುಸೇನ್, ಕ್ಲೈವ್ ಲಾಯ್ಡ್ ಮತ್ತು ಜಾನ್ ರೈಟ್ ಸಹಿ ಹಾಕಿದ್ದಾರೆ.
ಕಡಿಮೆಯಾಗುತ್ತಿರುವ ಬಲಗಣ್ಣಿನ ದೃಷ್ಟಿ
ಇಮ್ರಾನ್ ಖಾನ್ ಅವರು 800 ದಿನಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿದ್ದಾರೆ. ಸದ್ಯ ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಇಮ್ರಾನ್ ಅವರ ಬಲಗಣ್ಣಿನ ದೃಷ್ಟಿ ಶೇ. 85 ರಷ್ಟು ಹೋಗಿದೆ ಎಂದು ಅವರ ವಕೀಲರು ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಎಷ್ಟೇ ಹೇಳಿದರೂ ಕಳೆದ ಮೂರು ತಿಂಗಳಿನಿಂದ ಅಧಿಕಾರಿಗಳು ಅವರ ಮನವಿಯನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ವಕೀಲರು ಇದೇ ಸಂದರ್ಭದಲ್ಲಿ ಆರೋಪಿಸಿದ್ದಾರೆ. ಇಮ್ರಾನ್ ಅವರ ಸಹೋದರಿ ಅಲೀಮಾ ಖಾನ್ ಕೂಡ ಈ ಹಿಂದೆ ಇಮ್ರಾನ್ ಆರೋಗ್ಯ ಹದಗೆಡುತ್ತಿರುವ ಬಗ್ಗೆ ಮಾತನಾಡಿ, ಪ್ರತಿಭಟಿಸಿದ್ದರು.
ಅರ್ಹ ರಕ್ಷಣೆ ಕೊಡಬೇಕು
ಇದೀಗ, ಪಾಕ್ ಸರ್ಕಾರಕ್ಕೆ ಪತ್ರ ಬರೆದಿರುವ ದಿಗ್ಗಜ ಆಟಗಾರರು, ರಾಜಕೀಯ ನಿಲುವು ಏನೇ ಇರಲಿ, ವಿಶ್ವ ದರ್ಜೆಯ ಕ್ರೀಡಾಪಟು ಮತ್ತು ಮಾಜಿ ಪ್ರಧಾನಿಯಾಗಿ ಅವರಿಗೆ ಅರ್ಹವಾದ ರಕ್ಷಣೆ ನೀಡಬೇಕೆಂದು ಲೆಜೆಂಡರಿ ಕ್ರಿಕೆಟಿಗರು ತಮ್ಮ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ. ಇಮ್ರಾನ್‌ಗೆ ತಜ್ಞ ವೈದ್ಯರ ಸೇವೆ ಮತ್ತು ಅವರಿಗೆ ಅಗತ್ಯವಿರುವ ತುರ್ತು ಚಿಕಿತ್ಸೆಯನ್ನು ನೀಡಬೇಕು. ಜೈಲು ಸೌಲಭ್ಯಗಳು ಅಂತಾರಾಷ್ಟ್ರೀಯ ಮಾನದಂಡಗಳನ್ನು ಪೂರೈಸಬೇಕು ಮತ್ತು ಅವರ ಕುಟುಂಬ ಸದಸ್ಯರನ್ನು ನೋಡಲು ಅವಕಾಶ ನೀಡಬೇಕು ಎಂದು ದಿಗ್ಗಜ ಕ್ರಿಕೆಟಿಗರು ಒತ್ತಾಯಿಸುತ್ತಿದ್ದಾರೆ. ಕಾನೂನು ಪ್ರಕ್ರಿಯೆಗಳನ್ನು ಪಾರದರ್ಶಕಗವಾಗಿ ಮತ್ತು ತ್ವರಿತಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ವಿಶ್ವಕಪ್ ಗೆದ್ದು ಕೊಟ್ಟ ನಾಯಕ
ಪಂದ್ಯ ಮುಗಿದ ಕೂಡಲೇ ಮೈದಾನದಲ್ಲಿನ ಪೈಪೋಟಿ ಕೊನೆಗೊಳ್ಳುತ್ತದೆ. ಆದರೆ, ಪರಸ್ಪರ ಗೌರವ ಯಾವಾಗಲೂ ಉಳಿಯುವ ವಿಷಯವಾಗಿದೆ. ಇಮ್ರಾನ್ ತಮ್ಮ ವೃತ್ತಿಜೀವನದುದ್ದಕ್ಕೂ ಆ ಮನೋಭಾವವನ್ನು ಎತ್ತಿಹಿಡಿದ ವ್ಯಕ್ತಿ. 1992 ರಲ್ಲಿ ಪಾಕಿಸ್ತಾನವನ್ನು ವಿಶ್ವಕಪ್ ಗೆಲುವಿಗೆ ಕರೆದೊಯ್ದ ಇಮ್ರಾನ್ ಅವರ ನಾಯಕತ್ವ ಮತ್ತು ಕ್ರೀಡಾ ಪರಾಕ್ರಮ ಎಂದಿಗೂ ಮರೆಯಲಾಗದು. ಇದು ನಮ್ಮ ಮಾನವೀಯ ವಿನಂತಿಯಾಗಿದೆ ಮತ್ತು ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ದಿಗ್ಗಜ ಆಟಗಾರರು ತಮ್ಮ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಶೆಹಬಾಜ್ ಷರೀಫ್ ನೇತೃತ್ವದ ಪಾಕಿಸ್ತಾನ ಸರ್ಕಾರ ಈ ವಿಷಯದಲ್ಲಿ ತುರ್ತಾಗಿ ಮಧ್ಯಪ್ರವೇಶಿಸಬೇಕೆಂದು ಲೆಜೆಂಡರಿ ಕ್ರಿಕೆಟಿಗರು ಒತ್ತಾಯಿಸಿದ್ದಾರೆ. ಈ ವಿಚಾರವಾಗಿ ಪಾಕ್ ಸರ್ಕಾರ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ ಎಂದು ಕಾದು ನೋಡಬೇಕಿದೆ.
ಬಂಧನ ಏಕೆ?
ಇಮ್ರಾನ್ ಖಾನ್ ಅವರ ಬಂಧನಕ್ಕೆ ಮುಖ್ಯ ಕಾರಣ ಅಲ್-ಖಾದಿರ್ ಟ್ರಸ್ಟ್ ಪ್ರಕರಣ ಮತ್ತು ತೋಷಾಖಾನಾ ಭ್ರಷ್ಟಾಚಾರ ಪ್ರಕರಣ. 2023ರ ಮೇ ತಿಂಗಳಲ್ಲಿ ಅವರನ್ನು ಅಲ್-ಖಾದಿರ್ ಟ್ರಸ್ಟ್‌ನಲ್ಲಿ ಭ್ರಷ್ಟಾಚಾರ ಆರೋಪದ ಮೇಲೆ (ರಿಯಲ್ ಎಸ್ಟೇಟ್ ಟೈಕೂನ್‌ನಿಂದ ಲಾಭ ಪಡೆದು ಭೂಮಿ ಪಡೆದ ಆರೋಪ) ಬಂಧಿಸಲಾಯಿತು, ನಂತರ ಆಗಸ್ಟ್‌ನಲ್ಲಿ ತೋಷಾಖಾನಾ ಕೇಸ್‌ನಲ್ಲಿ (ಪ್ರಧಾನಿಯಾಗಿದ್ದಾಗ ಸರ್ಕಾರಿ ಉಡುಗೊರೆಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪ) ಮತ್ತೆ ಬಂಧನವಾಯಿತು. ಈ ಪ್ರಕರಣಗಳಲ್ಲಿ ಅವರಿಗೆ ಹಲವು ವರ್ಷಗಳ ಶಿಕ್ಷೆ ವಿಧಿಸಲಾಗಿದ್ದು, ಇವುಗಳನ್ನು ಅವರು ರಾಜಕೀಯ ಪ್ರೇರಿತ ಎಂದು ಆರೋಪಿಸುತ್ತಾರೆ, (ಏಜೆನ್ಸೀಸ್).