ಟೀಮ್ ಇಂಡಿಯಾ ದಿಗ್ಗಜ ವಿರಾಟ್ ಕೊಹ್ಲಿ
- 2027ರ ಏಕದಿನ ವಿಶ್ವಕಪ್ ಚರ್ಚೆ ಬೆನ್ನಲ್ಲೇ ವಿರಾಟ್ ಕೊಹ್ಲಿ ಬಿಚ್ಚುಮಾತು
- ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುವಂತೆ ಕೇಳಿದ್ರೆ ಅಲ್ಲಿ ನಾನಿಲ್ಲ
- ಟೀಮ್ ಇಂಡಿಯಾದಲ್ಲಿ ತಮ್ಮ ಉಪಸ್ಥಿತಿ ಇರಲಿದೆಯೇ? ಇಲ್ಲವೇ? ಎಂಬುದರ ಬಗ್ಗೆ ಶಾಕಿಂಗ್ ಹೇಳಿಕೆ
Virat Kohli: ಟೀಮ್ ಇಂಡಿಯಾದ ಮಾಜಿ ನಾಯಕ, ದಾಖಲೆಗಳ ಸರದಾರ, ಅಭಿಮಾನಿಗಳ ನೆಚ್ಚಿನ 'ಕಿಂಗ್', ವಿರಾಟ್ ಕೊಹ್ಲಿ ತಮ್ಮ ಭವಿಷ್ಯದ ಬಗ್ಗೆ ಹರಿದಾಡುತ್ತಿರುವ ಚರ್ಚೆಗಳ ಕುರಿತು ಇತ್ತೀಚಿನ ಸಂದರ್ಶನದಲ್ಲಿ ಹಲವು ಕುತೂಹಲಕಾರಿ ಸಂಗತಿಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ವಿರಾಟ್ರ ಈ ಹೇಳಿಕೆಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಅನೇಕರ ಹುಬ್ಬೇರಿಸಿದೆ.
ಪ್ರಸಕ್ತ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅದ್ಭುತ ಇನ್ನಿಂಗ್ಸ್ ಆಡುತ್ತಿರುವ ಕಿಂಗ್ ಕೊಹ್ಲಿ, 2027ರ ಏಕದಿನ ವಿಶ್ವಕಪ್‌ನಲ್ಲಿ ಆಡುವುದು ಬಹುತೇಕ ಖಚಿತ. ಅವರು ಮತ್ತು ರೋಹಿತ್ ಶರ್ಮ ತಂಡದಲ್ಲಿ ಸ್ಥಾನ ಪಡೆಯುತ್ತಾರೆ ಎಂದೇ ಕ್ರಿಕೆಟ್ ಪ್ರಿಯರು ನಿರೀಕ್ಷಿಸಿದ್ದಾರೆ. ಈ ಕುರಿತಂತೆ ಮೌನ ಮುರಿದಿರುವ ವಿರಾಟ್, ಐಪಿಎಲ್ನ ಅತ್ಯಂತ ಬಲಿಷ್ಠ ಹಾಗೂ ಜನಪ್ರಿಯ ಫ್ರಾಂಚೈಸಿಯಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡೆಸಿದ ಪಾಡ್‌ಕ್ಯಾಸ್ಟ್‌ನಲ್ಲಿ ಯಾರಿಗೂ ನಾನಿಲ್ಲಿ ಸಾಬೀತುಪಡಿಸುವ ಅವಶ್ಯಕತೆ ಇಲ್ಲ ಎಂದು ನೀಡಿರುವ ಹೇಳಿಕೆ ಸದ್ಯ ವೈರಲ್ ಆಗಿದೆ.
2024ರ ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ರೋಹಿತ್ ಶರ್ಮ ಜೊತೆ ಟಿ20 ಕ್ರಿಕೆಟ್ಗೆ ಗುಡ್ಬೈ ಹೇಳಿದ ಕೊಹ್ಲಿ, ಕಳೆದ ವರ್ಷ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಅದೇ ರೀತಿಯಲ್ಲೇ ಟೆಸ್ಟ್ ಕ್ರಿಕೆಟ್ಗೂ ವಿದಾಯ ಹೇಳಿದರು. ಪ್ರಸ್ತುತ, ಟೀಮ್ ಇಂಡಿಯಾ ಪರ ಏಕದಿನ ಪಂದ್ಯಗಳಲ್ಲಿ ಮಾತ್ರ ಆಡುತ್ತಿರುವ ದಿಗ್ಗಜ ಬ್ಯಾಟರ್, ಕ್ರಿಕೆಟ್ ಬಗ್ಗೆ ಅವರ ದೃಷ್ಟಿಕೋನವು ಈಗ ತುಂಬಾ ಸ್ಪಷ್ಟವಾಗಿದೆ ಎಂದಿದ್ದಾರೆ.
ಕೊಹ್ಲಿ ಓಪನ್ ಟಾಕ್!
ನಾನು ಯಾವಾಗಲೂ ರೆಡಿಯೇ. ಕಾರಣ, ಅದು ನನ್ನ ದಿನಚರಿ. ನಿಮಗೆ ಗೊತ್ತು, ಪ್ರತಿದಿನ ವರ್ಕ್ಔಟ್ ಮತ್ತು ಊಟವನ್ನು ಮನೆಯಲ್ಲೇ ಮಾಡ್ತೀನಿ. ಇದು ಕ್ರಿಕೆಟ್ ಆಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿ ಏನಾಗಿದೆ ಎಂದರೆ, 2027ರ ವಿಶ್ವಕಪ್ ಬಗ್ಗೆಯೇ ಹೆಚ್ಚು ಚರ್ಚೆ ಶುರುವಾಗಿದೆ. ನಿಮಗೆ ಏಕದಿನ ವಿಶ್ವಕಪ್ ಆಡುವ ಆಸೆಯಿದೆಯೇ? ಎಂದು ಅನೇಕ ಬಾರಿ ಪ್ರಶ್ನಿಸಲಾಗಿದೆ ಎಂದರು.
"ನಾನು ಈಗ ಆಡ್ತಿದ್ದೀನಿ ಎಂದರೆ, ಖಂಡಿತ ಆಡುತ್ತೇನೆ ಎಂದರ್ಥ. ದೇಶಕ್ಕೋಸ್ಕರ ವಿಶ್ವಕಪ್ ಆಡುವುದು ನಿಜಕ್ಕೂ ಅದ್ಭುತ. ಆದರೆ, ಮುಂಚೆಯೇ ನಾನು ಹೇಳಿದಂತೆ, ಎರಡೂ ಕಡೆಯಿಂದಲೂ ಬರುವ ಮೌಲ್ಯಗಳು ಇಲ್ಲಿ ಬಹಳ ಮುಖ್ಯ. ಪದೇ ಪದೇ ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿ ಎಂದರೆ, ಅಂಥ ಜಾಗದಲ್ಲಿ ನಾನಿರುವುದಿಲ್ಲ. ಕಾರಣ, ನನ್ನ ತಯಾರಿಯಲ್ಲಿ ಶೇ.100ಕ್ಕೆ 100 ಅದಕ್ಕಾಗಿಯೇ ಮೀಸಲಿಟ್ಟಿರುತ್ತೇನೆ" ಎಂದರು.
"ಈಗಲೂ ಅದೇ ಮಟ್ಟದ ಶಿಸ್ತಿನಿಂದ ಕೆಲಸ ಮಾಡುತ್ತಿದ್ದೇನೆ. ಏಕದಿನ ಪಂದ್ಯಗಳಲ್ಲಿ 40 ಓವರ್‌ಗಳಿಗೆ ಬೌಂಡರಿಯಿಂದ ಬೌಂಡರಿಗೆ ಓಡಬೇಕಾದರೂ, ಯಾವುದೇ ಸಮಸ್ಯೆ ಹೇಳದೆ, ನಾನು ಆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತೇನೆ. ಆಡುವ ಪ್ರತಿ ಬಾಲ್ ಅನ್ನು ನನ್ನ ಕರಿಯರ್ನ ಕೊನೆಯ ಎಸೆತ ಎಂದೇ ಆಡುತ್ತೇನೆ. ಮತ್ತು ತಂಡಕ್ಕಾಗಿ ಏನೆಲ್ಲ ಕೊಡುಗೆ ನೀಡಬಹುದೋ, ಅದೆಲ್ಲವನ್ನೂ ಪೂರ್ಣ ಪ್ರಮಾಣದಲ್ಲಿ ಮಾಡಿರುತ್ತೇನೆ. ಇಷ್ಟೆಲ್ಲ ಮಾಡಿದರೂ ನನ್ನನ್ನು ಸಾಬೀತುಪಡಿಸಲು ಯಾರಾದರೂ ಕೇಳಿದಾಗ, ಆ ಜಾಗ ನನಗೆ ಸೂಕ್ತವಲ್ಲ" ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.
ವಿರಾಟ್ ಕೊಹ್ಲಿಯ ಈ ಮಾತುಗಳು ಸದ್ಯ ಏಕದಿನ ವಿಶ್ವಕಪ್ ತಂಡದಲ್ಲಿ ಅವರ ಸ್ಥಾನ ಖಚಿತವೇ ಎಂಬ ಗೊಂದಲ, ಅನುಮಾನಗಳಿಗೆ ದಾರಿಯಾಗಿದೆ. ಮತ್ತೊಂದೆಡೆ, ವಿರಾಟ್ ಟೆಸ್ಟ್ಗೆ ನಿವೃತ್ತಿ ಘೋಷಿಸಲು ಇದೇ ರೀತಿ ಸಾಮರ್ಥ್ಯ ಸಾಬೀತುಪಡಿಸಲು ಕೇಳಿದ್ದಕ್ಕೆ ಆಯಿತೇ ಎಂಬ ಬಿಸಿ ಬಿಸಿ ಮಾತುಗಳು ಸದ್ಯ ಸೋಷಿಯಲ್ ಮೀಡಿಯಾಗಳನ್ನು ಸುತ್ತುವರೆದಿವೆ. ಸದ್ಯ ಏಕದಿನ ಪಂದ್ಯಗಳಲ್ಲಿ ಮಾತ್ರ ಟೀಮ್ ಇಂಡಿಯಾ ಪರ ಆಡುತ್ತಿರುವ ಕೊಹ್ಲಿಯನ್ನು ತಂಡದಲ್ಲಿ ನೋಡಲು ಅಭಿಮಾನಿಗಳು ತೀವ್ರ ಕುತೂಹಲದಿಂದ ಕಾಯತೊಡಗಿದ್ದಾರೆ,(ಏಜೆನ್ಸೀಸ್).