ಪಾಕ್ ಕ್ರಿಕೆಟಿಗ ತನ್ವೀರ್ ಅಹ್ಮದ್
- ಮಾ.28ರಿಂದ ಐಪಿಎಲ್ 19ನೇ ಆವೃತ್ತಿ ಆರಂಭ
- ಬಾಬರ್ ಅಜಮ್ ಐಪಿಎಲ್ನಲ್ಲಿ ಆಡಿದಿದ್ದರೆ ದೊಡ್ಡ ಮೊತ್ತಕ್ಕೆ ಬಿಡ್
- ಮತ್ತೊಮ್ಮೆ ನಾಲಿಗೆ ಹರಿಬಿಟ್ಟ ಪಾಕ್ ಮಾಜಿ ಕ್ರಿಕೆಟಿಗ
IPL 2026: ಇದೇ ಮಾ.28ರಿಂದ ಐಪಿಎಲ್ 19ನೇ ಆವೃತ್ತಿಗೆ ಅದ್ಧೂರಿ ಚಾಲನೆ ಸಿಗಲಿದ್ದು, ಮೊದಲ ಪಂದ್ಯವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವೆ ನಡೆಯಲಿದೆ. ಈ ಕ್ಷಣಕ್ಕಾಗಿ ತೀರ ಕುತೂಹಲದಿಂದ ಕಾಯುತ್ತಿರುವ ಭಾರತೀಯ ಹಾಗೂ ಇತರೆ ದೇಶಗಳ ಕ್ರಿಕೆಟ್ ಅಭಿಮಾನಿಗಳು, ತಮ್ಮ ನೆಚ್ಚಿನ ಫ್ರಾಂಚೈಸಿಗೆ ಬೆಂಬಲ ನೀಡಲು ಉತ್ಸುಕರಾಗಿದ್ದಾರೆ. ಆದರೆ, ಸದಾ ಭಾರತೀಯ ಕ್ರಿಕೆಟ್ ವಿರುದ್ಧ ಏನಾದರೂ ಒಂದು ಹೇಳಿಕೆ ನೀಡದಿದ್ದರೆ ಪಾಕ್ ಆಟಗಾರರಿಗೆ ತಿಂದ ಅನ್ನ ಅರಗುವುದಿಲ್ಲ ಅನಿಸುತ್ತೆ.
ಟೀಮ್ ಇಂಡಿಯಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗಿಯಾದ ಮೊದಲ ದಿನದಿಂದಲೂ ಟೀಕಿಸುತ್ತಲೇ ಬಂದ ಪಾಕ್ ಮಾಜಿ ಕ್ರಿಕೆಟಿಗ ತನ್ವೀರ್ ಅಹ್ಮದ್, ಈಗ ಐಪಿಎಲ್ ಉಲ್ಲೇಖಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಿಸಿಸಿಐ ನಡೆಸುವ ಐಪಿಎಲ್ ಒಂದು ನಕಲಿ ಲೀಗ್ ಎಂದಿರುವ ಅಹ್ಮದ್, ಅದೇ ಸಮಯದಲ್ಲಿ, ಪಾಕ್ ಆರಂಭಿಕ ಬ್ಯಾಟರ್ ಬಾಬರ್ ಅಜಮ್ ಐಪಿಎಲ್ನಲ್ಲಿ ಇದ್ದಿದ್ದರೆ, ಅವರು ಹರಾಜಿನಲ್ಲಿ ಸುಮಾರು 50 ಕೋಟಿ ರೂ.ಗೆ ಬಿಡ್ ಆಗುತ್ತಿದ್ದರು ಎಂದಿದ್ದಾರೆ.
ತಮ್ಮ ತಂಡದಲ್ಲೇ ಇಲ್ಲ ಸ್ಥಾನ
ಬಾಬರ್ನಂತಹ ಆಟಗಾರರು ಭಾರತದಲ್ಲಿ ಇಲ್ಲ. ಈ ಸಂದರ್ಭದಲ್ಲಿ, ಅವರೇನಾದರೂ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಿದಿದ್ದರೆ, ಖಂಡಿತ ಬೇರೆಯವರಿಗಿಂತ ಹೆಚ್ಚು ಸಂಖ್ಯೆಗೆ ಬಿಡ್ ಆಗುತ್ತಿದ್ದರು ಎಂದರು. ತನ್ವೀರ್ ಅಹ್ಮದ್ನ ಇಂತಹ ಹುಚ್ಚು ಹೇಳಿಕೆಗಳಿಗೆ ಸದ್ಯ ನೆಟ್ಟಿಗರು ಛೀಮಾರಿ ಹಾಕಿದ್ದು, ಮೊದಲು ಫಾರ್ಮ್ ಕಳೆದುಕೊಂಡಿರುವ ಆಟಗಾರ ಉತ್ತಮ ಪ್ರದರ್ಶನ ನೀಡುವಂತಾಗಲಿ, ತಮ್ಮದೇ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲಿ ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ.
ಕಳಪೆ ಬಾಬರ್
ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಸದ್ಯ ಬಾಬರ್ ಅಜಮ್ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದೆ. ಸರಣಿ ವೈಫಲ್ಯಗಳಿಂದ ನಾಯಕತ್ವ ಕಳೆದುಕೊಂಡ ಬೆನ್ನಲ್ಲೇ, ಬ್ಯಾಕ್ ಟು ಬ್ಯಾಕ್ ಪ್ರದರ್ಶನದಲ್ಲಿ ಫ್ಲಾಪ್ ಆಗುತ್ತಿರುವ ಬಾಬರ್, ತಮ್ಮ ತಂಡದಲ್ಲಿ ಸ್ಥಾನ ಪಡೆಯಲು ಹೆಣಗಾಡುತ್ತಿದ್ದಾರೆ. ಇದೆಲ್ಲ ಗೊತ್ತಿದ್ದರೂ, ಇಂತಹ ಹೇಳಿಕೆ ನೀಡಿದ ತನ್ವೀರ್ ಅಹ್ಮದ್ ವಿರುದ್ಧ ಹಲವರು ಕಿಡಿಕಾರಿದ್ದಾರೆ,(ಏಜೆನ್ಸೀಸ್).