ಮಹಿಳಾ ಕ್ರಿಕೆಟಿಗರು ತಾಯ್ತನದ ಬಿಡುವಿನ ಬಳಿಕ ಕ್ರಿಕೆಟ್​ಗೆ ಮರಳಲು ಐಸಿಸಿ ನೆರವು! 
ಕ್ರಿಕೆಟ್

ಮಹಿಳಾ ಕ್ರಿಕೆಟಿಗರು ತಾಯ್ತನದ ಬಿಡುವಿನ ಬಳಿಕ ಕ್ರಿಕೆಟ್​ಗೆ ಮರಳಲು ಐಸಿಸಿ ನೆರವು!

ದುಬೈ: ಗರ್ಭಧಾರಣೆಯ ಬಳಿಕ ಮಹಿಳಾ ಕ್ರಿಕೆಟಿಗರು ಸ್ಪರ್ಧಾತ್ಮಕ ಕ್ರಿಕೆಟ್​ಗೆ ಸುರಕ್ಷಿತ ಮತ್ತು ಸುಸ್ಥಿರವಾಗಿ ಮರಳುವುದನ್ನು ಖಚಿತಪಡಿಸಿಕೊಳ್ಳಲು ಐಸಿಸಿ (ICC) ಸೋಮವಾರ 16 ವಾರಗಳ ಯೋಜನೆಯನ್ನು ಒಳಗೊಂಡ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಮಹಿಳಾ ಕ್ರಿಕೆಟಿಗರು ಇನ್ನು ತಾಯಿಯಾದ (motherhood ) ಬಳಿಕವೂ ಆರೋಗ್ಯಪೂರ್ಣ ಮತ್ತು ಫಿಟ್​ ಆಗಿ ಮೊದಲಿನಂತೆಯೇ ಕ್ರಿಕೆಟ್​ಗೆ ಮರಳಲು ನೆರವಾಗುವ ಸಲುವಾಗಿ ಐಸಿಸಿ ಈ ಹೆಜ್ಜೆ ಇಟ್ಟಿದೆ.
"ಗರ್ಭಧಾರಣೆಯ ನಂತರ ಆಟಕ್ಕೆ ಮರಳಲು ಮಾರ್ಗಸೂಚಿ' (Return to Play Post-Pregnancy) ಹೆಸರಿನಲ್ಲಿ ಐಸಿಸಿ ಮಹಿಳಾ ಕ್ರಿಕೆಟಿಗರಿಗೆ ಸಿದ್ಧ, ವಿಮರ್ಶೆ, ಮರುಸ್ಥಾಪನೆ, ಮರುಪರಿಶೀಲನೆ, ವಾಪಸ್​ ಮತ್ತು ಪರಿಷರಣೆ (ರೆಡಿ, ರಿವೀವ್​, ರಿಸ್ಟೋರ್​, ರಿಕಂಡೀಷನ್​, ರಿರ್ಟನ್​, ರಿಫೈನ್​) ಸಹಿತ "ಆರು ಆರ್​' ಒಳಗೊಂಡ ರೂಪುರೇಷೆ ರೂಪಿಸಿದೆ. ಇದು ಮಹಿಳಾ ಕ್ರಿಕೆಟಿಗರು ಮಗುವಿಗೆ ಜನ್ಮ ನೀಡಿದ ಬಳಿಕ ಆರಂಭಿಕ ಚೇತರಿಕೆ, ವೈದ್ಯಕಿಯ ಮತ್ತು ಯೋಗಕ್ಷೇಮ ವಿಮರ್ಶೆ, ರಚನಾತ್ಮಕ ತರಬೇತಿಗೆ ಕ್ರಮೇಣ ಮರಳುವಿಕೆ, ಕ್ರಿಕೆಟ್​ ನಿರ್ದಿಷ್ಟ ಕಂಡೀಷನಿಂಗ್​, ಆಟಕ್ಕೆ ಮರಳುವಿಕೆ ಮತ್ತು ಆಟಗಾರ್ತಿ ಕ್ರಿಕೆಟ್​ ಪರಿಸರಕ್ಕೆ ಮರಳಿದಾಗ ನಿರಂತರ ಮೇಲ್ವಿಚಾರಣೆಯ ವಿಧಾನವನ್ನು ಒಳಗೊಂಡಿದೆ ಎಂದು ಐಸಿಸಿ ತಿಳಿಸಿದೆ.

ತಾಯ್ತನದ ಬಳಿಕ ಮಹಿಳಾ ಕ್ರಿಕೆಟಿಗರು ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳುವ ಹಾದಿಯ ಮೇಲ್ವಿಚಾರಣೆ ನೋಡಿಕೊಳ್ಳಲು ಐಸಿಸಿ "ಕೇಸ್​ ಮ್ಯಾನೇಜರ್​'ಅನ್ನೂ ನೇಮಿಸಲಿದೆ. ಇವರು ವೈದ್ಯರು ಅಥವಾ ಫಿಸಿಯೋ ಥೆರಪಿಸ್ಟ್​ ಆಗಿರಲಿದ್ದಾರೆ.

ಈ ಮಾರ್ಗಸೂಚಿಗಳು ಮಹಿಳೆಯರು ಮೈದಾನದ ಒಳಗೆ ಮತ್ತು ಹೊರಗೆ ಬೆಳವಣಿಗೆ ಕಾಣಬಹುದಾದಂಥ ಆಟದ ವಾತಾವರಣವನ್ನು ನಿರ್ಮಿಸುವ ನಮ್ಮ ಬದ್ಧತೆಯ ಪ್ರತಿಬಿಂಬವಾಗಿವೆ ಎಂದು ಐಸಿಸಿ ಚೇರ್ಮನ್​ ಜಯ್​ ಷಾ ತಿಳಿಸಿದ್ದಾರೆ.

ಸ್ಥಳಿಯ ಕಾನೂನಿಗೆ ಅನುಗುಣವಾಗಿಯೇ ಐಸಿಸಿ ಈ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ. ಭಾರತದ ಕಾರ್ಮಿಕ ಕಾನೂನಿನ ಅನ್ವಯ, ಮಹಿಳೆಯರು ಆರು ತಿಂಗಳ ವೇತನ ಸಹಿತ ಮಾತೃತ್ವ ರಜೆಯನ್ನು ಪಡೆಯಬಹುದಾಗಿದೆ. ಇದು ಇನ್ನು ಮಹಿಳಾ ಕ್ರಿಕೆಟಿಗರಿಗೂ ಅನ್ವಯಿಸಲಿದೆ.

2022ರ ಮಹಿಳಾ ಏಕದಿನ ವಿಶ್ವಕಪ್​ನಲ್ಲಿ 8 ತಾಯಂದಿರು ಆಡಿದ್ದರು. ವೆಸ್ಟ್​ ಇಂಡೀಸ್​ನ ಆಫಿ ಫ್ಲೆಚರ್​ ಹಾಲಿ ಮಹಿಳಾ ಟಿ20 ವಿಶ್ವಕಪ್​ನಲ್ಲಿ ಆಡುತ್ತಿರುವ ಏಕೈಕ ಅಮ್ಮನಾಗಿದ್ದಾರೆ.
*ಇನ್ನೂ ಮುಂದೆ ಯಾವುದೇ ಮಹಿಳಾ ಕ್ರಿಕೆಟರ್​ ಉನ್ನತ ಮಟ್ಟದಲ್ಲಿ ತನ್ನ ದೇಶದ ಪರ ಪ್ರತಿನಿಧಿಸುವುದು ಮತ್ತು ತಾಯ್ತನದ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳುವ ಪರಿಸ್ಥಿತಿ ಬರಬಾರದು. ಗರ್ಭಧಾರಣೆಯ ನಂತರ ಕ್ರಿಕೆಟ್​ಗೆ ಮರಳುವ ಮಾರ್ಗಸೂಚಿಯು ಆಟದ ಕಡೆಗೆ ಹೆಚ್ಚು ಬೆಂಬಲ ಮತ್ತು ಮಾಹಿತಿಯುಕ್ತ ವಾತಾವರಣ ನಿರ್ಮಿಸುವತ್ತ ಪ್ರಮುಖ ಹೆಜ್ಜೆಯಾಗಿದೆ.
| ಜಯ್​ ಷಾ, ಐಸಿಸಿ ಚೇರ್ಮನ್​
ಇನ್ನು ತಾಯಿಯಾದರೆ ಕ್ರಿಕೆಟ್​ ಜೀವನ ಅಂತ್ಯವಲ್ಲ
ಇದುವರೆಗಿನ ಪರಿಸ್ಥಿತಿಯಲ್ಲಿ ತಾಯಿಯಾದರೆ ಕ್ರಿಕೆಟ್​ ಜೀವನ ಮುಗಿಯಿತು ಎಂದೇ ಯೋಚಿಸಲಾಗುತಿತ್ತು. ಆದರೆ ಇನ್ನು ಹಾಗೆ ಆಗಲ್ಲ. ಅದಕ್ಕಾಗಿಯೇ ಈ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ ಎಂದು ಐಸಿಸಿಯ ವೈದ್ಯಕಿಯ ಸಲಹಾ ಸಮಿತಿಯ ಸದಸ್ಯೆ ಡಾ. ಫಿಲಿಪ್ಪಾ ಇಂಗೆ ತಿಳಿಸಿದ್ದಾರೆ.