- ಬಾಂಗ್ಲಾದೇಶ ಕ್ರಿಕೆಟ್ ಮನವಿಗೆ ಮಣಿಯದ ಐಸಿಸಿ
- ಶ್ರೀಲಂಕಾದಲ್ಲಿ ಬಾಂಗ್ಲಾ ಟಿ20 ವಿಶ್ವಕಪ್ ಪಂದ್ಯಗಳನ್ನಾಡಿಸಲು ಒಪ್ಪಿಗೆ ಇಲ್ಲ
- ಚೆನ್ನೈ ಮತ್ತು ತಿರುವನಂತಪುರಂ ಸ್ಟೇಡಿಯಂಗಳಲ್ಲಿ ಆಡಿಸಲು ಅವಕಾಶ
ನವದೆಹಲಿ: 2026ರ ಐಪಿಎಲ್ನಿಂದ ಬಾಂಗ್ಲಾ ವೇಗಿ ಮುಸ್ತುಫಿಜುರ್ ರೆಹಮಾನ್ರನ್ನು ಬಿಸಿಸಿಐ ಕೈಬಿಟ್ಟ ನಿರ್ಧಾರದಿಂದ ಸಿಡಿಮಿಡಿಗೊಂಡಿರುವ ಬಾಂಗ್ಲಾದೇಶ ಕ್ರಿಕೆಟ್, ಫೆಬ್ರವರಿ 7ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತ ಬಿಟ್ಟು ಶ್ರೀಲಂಕಾದಲ್ಲಿ ಆಡಿಸಿ ಎಂದು ಐಸಿಸಿ ಮೊರೆ ಹೋಯಿತು. ಬಿಸಿಬಿಯ ಮನವಿಯನ್ನು ಸುತಾರಾಮ್ ಒಪ್ಪದ ಐಸಿಸಿ, ಇದೀಗ ಬದಲು ಆಯ್ಕೆಯನ್ನು ನೀಡಿರುವುದು ಗಮನಾರ್ಹ.
ಮುಸ್ತುಫಿಜುರ್ ರೆಹಮಾನ್ರನ್ನು ಬಿಸಿಸಿಐ ನಿರ್ದೇಶನದ ಮೇರೆಗೆ 2026ರ ಐಪಿಎಲ್ನಿಂದ ಕೈಬಿಟ್ಟ ಬೆನ್ನಲ್ಲೇ ನಮ್ಮ ದೇಶದ ಆಟಗಾರರಿಗೆ ಸೂಕ್ತ ಭದ್ರತೆಯ ಅಗತ್ಯವಿದೆ. ಹೀಗಾಗಿ, ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯಲ್ಲಿ ಬಾಂಗ್ಲಾದೇಶ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿಸುವುದು ಉತ್ತಮ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಐಸಿಸಿಗೆ ಪತ್ರದ ಮುಖೇನ ಮನವಿ ಸಲ್ಲಿಸಿತು. ಮೊದಲ ಬಾರಿಗೆ ಕಳುಹಿಸಿದ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಲಭಿಸದ ಹಿನ್ನೆಲೆ ಎರಡನೇ ಪತ್ರದಲ್ಲಿ ಹೀಗಂತ ಉಲ್ಲೇಖಿಸಿದೆ. ಆದರೆ, ಇದಕ್ಕೆ ಮಣಿಯದ ಐಸಿಸಿ, ಇದೀಗ ಭಾರತದ ಎರಡು ಸ್ಟೇಡಿಯಂಗಳಲ್ಲಿ ಬಾಂಗ್ಲಾ ತಂಡದ ಪಂದ್ಯಗಳನ್ನು ಆಡಿಸಲು ನಿರ್ಧರಿಸಿರುವುದಾಗಿ ವರದಿಯಾಗಿದೆ.
ಈ ಮೊದಲೇ ನಿಗದಿಯಾಗಿರುವಂತೆ ಮುಂಬೈ ಮತ್ತು ಕೋಲ್ಕತ ಕ್ರೀಡಾಂಗಣಗಳಲ್ಲಿ ಬಾಂಗ್ಲಾದೇಶ ತನ್ನ ಪಂದ್ಯಗಳನ್ನು ಆಡಬೇಕು. ಆದರೀಗ, ಬದಲಾವಣೆಯ ಅಗತ್ಯತೆ ಹಾಗೂ ಅನಿವಾರ್ಯತೆ ಎದುರಾದ ಹಿನ್ನೆಲೆ ಐಸಿಸಿ, ಚೆನ್ನೈ ಮತ್ತು ಕೇರಳದ ತಿರುವನಂತಪುರಂ ಕ್ರೀಡಾಂಗಣಗಳಲ್ಲಿ ಗ್ರೂಪ್ ಹಂತದ ಪಂದ್ಯಗಳನ್ನಾಡುವಂತೆ ಸೂಚಿಸಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ನ ಈ ನಿರ್ಧಾರಕ್ಕೆ ಬಾಂಗ್ಲಾ ಉತ್ತರ ಏನು ಇರಲಿದೆ? ಎಂಬುದನ್ನು ಕಾದು ತಿಳಿಯಬೇಕಿದೆ.
ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯನ್ನು ಭೀಕರವಾಗಿ ಹತ್ಯೆಗೈದ ಪ್ರಕರಣ ಸೇರಿದಂತೆ ಹಿಂದೂಗಳನ್ನು ಗುರಿಯಾಗಿಸಿಕೊಂಡಿರುವ ಬಾಂಗ್ಲಾದೇಶ ವಿರುದ್ಧ ಭಾರತ ಸಿಡಿದೆದ್ದಿದೆ. ಎರಡೂ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಿಸಿ ಕ್ರೀಡೆಗೂ ತಟ್ಟಿದ್ದು, 2026ರ ಐಪಿಎಲ್ನಿಂದ ಬಾಂಗ್ಲಾ ವೇಗಿ ಮುಸ್ತುಫಿಜುರ್ ರೆಹಮಾನ್ರನ್ನು ಕೆಕೆಆರ್ ಕೈಬಿಟ್ಟಿತು. ಬಿಸಿಸಿಐ ತೆಗೆದುಕೊಂಡ ಈ ನಿರ್ಧಾರದಿಂದ ಸದ್ಯ ಬಾಂಗ್ಲಾದೇಶ ಕ್ರಿಕೆಟ್ ಕೆರಳಿದ್ದು, ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಹೊರಗಾಡಿಸಿ ಎಂದು ಐಸಿಸಿ ಬಳಿ ಮನವಿ ಮಾಡಿದೆ,(ಏಜೆನ್ಸೀಸ್).