ಯಶಸ್ವಿ ಜೈಸ್ವಾಲ್​ಗೆ ಐಸಿಸಿ ಶಾಕ್​! ಪಂದ್ಯದ ಮಧ್ಯೆ ಶ್ರೀಲಂಕಾ ಆಟಗಾರನ ಜತೆ ಕಿರಿಕ್ ಮಾಡಿಕೊಂಡ ಬೆನ್ನಲ್ಲೇ ಕ್ರಮ  
ಕ್ರಿಕೆಟ್

ಯಶಸ್ವಿ ಜೈಸ್ವಾಲ್​ಗೆ ಐಸಿಸಿ ಶಾಕ್​! ಪಂದ್ಯದ ಮಧ್ಯೆ ಶ್ರೀಲಂಕಾ ಆಟಗಾರನ ಜತೆ ಕಿರಿಕ್ ಮಾಡಿಕೊಂಡ ಬೆನ್ನಲ್ಲೇ ಕ್ರಮ

ಪ್ರಮುಖ ಮುಖ್ಯಾಂಶಗಳು

  • ಮೊದಲ ಪಂದ್ಯದ ವೇಳೆ ಮೈದಾನದಲ್ಲೇ ಸ್ಟಾರ್ ಆಟಗಾರರ ಜಟಾಪಟಿ
  • ಹೆಲ್ಮೆಟ್​ನಿಂದ ಶ್ರೀಲಂಕಾ ಆಟಗಾರನನ್ನು ನೂಕಿದ ಯಶಸ್ವಿ ಜೈಸ್ವಾಲ್​
  • ನಿಯಮ ಉಲ್ಲಂಘಿಸಿದ ಇಬ್ಬರೂ ಆಟಗಾರರಿಗೆ ಐಸಿಸಿ ಶಾಕ್
ನವದೆಹಲಿ: ಪ್ರಸಕ್ತ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದ ವೇಳೆ ಮೈದಾನದಲ್ಲೇ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್​ ಯಶಸ್ವಿ ಜೈಸ್ವಾಲ್‌ (Yashaswi Jaiswal) ಮತ್ತು ಲಂಕಾ ಆಟಗಾರ ಆಸಿತಾ ಫೆರ್ನಾಂಡೊ ಮಾಡಿಕೊಂಡ ಜಗಳಕ್ಕೆ ಇದೀಗ ಐಸಿಸಿ ಬಿಗ್ ಶಾಕ್ ನೀಡಿದೆ.
ಪ್ರಸ್ತುತ, ಕೊಲಂಬೊದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್​ನಲ್ಲಿ ಲಂಕಾ ಪಡೆಯನ್ನು ಕ್ಲೀನ್​ ಸ್ವೀಪ್ ಮಾಡುವತ್ತ ಸಾಗುತ್ತಿರುವ ಟೀಮ್ ಇಂಡಿಯಾ, 2-0 ಅಂತರದಲ್ಲಿ ಸರಣಿ ಗೆಲ್ಲುವ ತವಕದಲ್ಲಿದೆ. ಈ ಮಧ್ಯೆಯೇ, ಆಟಗಾರರ ವಿವಾದವನ್ನು ಬೆನ್ನತ್ತಿದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ), ಯಶಸ್ವಿ ಜೈಸ್ವಾಲ್ ಮತ್ತು ಅಸಿತಾ ಫೆರ್ನಾಂಡೊಗೆ ಪಂದ್ಯ ಶುಲ್ಕದ ಶೇ.25ರಷ್ಟು ದಂಡ ವಿಧಿಸಿದೆ.
ಐಸಿಸಿ ನೀತಿ ಸಂಹಿತೆಯ ಲೆವೆಲ್-1 ನಿಬಂಧನೆಯನ್ನು ಉಲ್ಲಂಘಿಸಿದ್ದಕ್ಕಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಐಸಿಸಿ ತಿಳಿಸಿದೆ. ಇದು ಆಟಗಾರರು ಮೈದಾನದಲ್ಲಿ ಶಿಸ್ತನ್ನು ಉಲ್ಲಂಘಿಸಿದ ಕಾರಣಕ್ಕೆ ಎಂದು ಒತ್ತಿ ಹೇಳಿದ್ದು, ಒಂದು ಡಿಮೆರಿಟ್ ಪಾಯಿಂಟ್ ಅನ್ನು ಕೂಡ ನೀಡಿದೆ. ಭಾರತದ ಮೊದಲ ಇನ್ನಿಂಗ್ಸ್‌ನ 17ನೇ ಓವರ್‌ನಲ್ಲಿ, ಯಶಸ್ವಿ ಜೈಸ್ವಾಲ್ ಅವರನ್ನು ಅಸಿತಾ ಫೆರ್ನಾಂಡೊ ಔಟ್ ಮಾಡಿದರು. ಇದಾದ ಬಳಿಕ, ಶ್ರೀಲಂಕಾ ಆಟಗಾರರು ಸಂಭ್ರಮಿಸುತ್ತಿರುವಾಗ, ಯಶಸ್ವಿ ಡಗೌಟ್ ಕಡೆಗೆ ನಡೆಯುತ್ತಿದ್ದಾಗ ಅಸಿತಾ ಕೆಲವು ಕಾಮೆಂಟ್‌ಗಳನ್ನು ಮಾಡಿದರು. ಈ ವೇಳೆ ಜಟಾಪಟಿ ಶುರುವಾಯಿತು.
ಸುಮ್ಮನೆ ಹೋಗುತ್ತಿದ್ದ ಜೈಸ್ವಾಲ್​ರನ್ನು ಕೆಣಕಿದ ಅಸಿತಾಗೆ ಖಡಕ್ ತಿರುಗೇಟು ನೀಡಲು ವಾಗ್ವಾದಕ್ಕಿಳಿದ ಟೀಮ್ ಇಂಡಿಯಾ ಆಟಗಾರ, ಫರ್ನಾಂಡೊ ತಲೆಗೆ ತಮ್ಮ ಹೆಲ್ಮೆಟ್​ನಿಂದ ನೂಕಿದರು. ತಕ್ಷಣವೇ ಇಬ್ಬರನ್ನು ತಡೆದ ಶ್ರೀಲಂಕಾ ಕ್ಯಾಪ್ಟನ್​ ಧನಂಜಯ ಡಿ ಸಿಲ್ವಾ, ಜೈಸ್ವಾಲ್​-ಆಸಿತಾಗೆ ಸುಮ್ಮನಿರುವಂತೆ ಸಮಾಧಾನ ಹೇಳಿದರು. ಈ ದೃಶ್ಯ ಕ್ಷಣಮಾತ್ರದಲ್ಲಿ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಕ್ರಿಕೆಟ್​ ಪ್ರೇಮಿಗಳ ಭಾರಿ ಅಸಮಾಧಾನಕ್ಕೆ ಕಾರಣವಾಗಿದೆ,(ಏಜೆನ್ಸೀಸ್).