ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಅಘಾ
- ಬಾಂಗ್ಲಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಸಲ್ಮಾನ್ ರನ್ಔಟ್
- ಮೈದಾನದಲ್ಲಿ ಬಾಂಗ್ಲಾದೇಶ ಕ್ಯಾಪ್ಟನ್ ನಡೆಗೆ ಸಲ್ಮಾನ್ ಗರಂ
- ಬ್ಯಾಟ್, ಗ್ಲೌಸ್ ಕಿತ್ತೆಸೆದ ಪಾಕ್ ನಾಯಕನಿಗೆ ಐಸಿಸಿ ಶಾಕ್
ಢಾಕಾ: ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾ ಪರ ನಿಂತ ಪಾಕಿಸ್ತಾನಕ್ಕೆ ಇದೀಗ ಭಾರೀ ಮುಖಭಂಗವೇ ಉಂಟಾಗಿದೆ. ಬಾಂಗ್ಲಾದೇಶಕ್ಕೆ ಆಡಲು ಅನುಮತಿ ನೀಡಿದಿದ್ದರೆ ನಾವು ಭಾರತ ವಿರುದ್ಧ ಪಂದ್ಯವನ್ನಾಡಲ್ಲ ಎಂದಿದ್ದ ಪಿಸಿಬಿಗೆ ಇದಕ್ಕಿಂತ ಹೀನಾಯ ಅವಮಾನ ಮತ್ತೊಂದಿಲ್ಲ ಎಂದೇ ಹೇಳಬಹುದು. ಇಷ್ಟಕ್ಕೆಲ್ಲ ಪಾಕ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ ರನ್ಔಟ್ ಒಂದೇ ಕಾರಣ.
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಸಲ್ಮಾನ್ ಅಲಿ ಆಘಾ ಆದ ರನೌಟ್ ಸದ್ಯ ಕ್ರಿಕೆಟ್ ಲೋಕದಲ್ಲಿ ದೊಡ್ಡ ವಿವಾದಕ್ಕೆ ಹಾಗೂ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕ್ರೀಸ್ ಬಿಟ್ಟು ಅದಾಗಲೇ ಮುಂದಕ್ಕೆ ಬಂದಿದ್ದ ಸಲ್ಮಾನ್ರನ್ನು ರನ್ಔಟ್ ಮಾಡಿದ ಬಾಂಗ್ಲಾ ನಾಯಕ, ಇದು ನಿಯಮದ ವ್ಯಾಪ್ತಿಯಲ್ಲಿ ಮತ್ತು ಆಟದ ಉತ್ಸಾಹವನ್ನು ಎಲ್ಲಿಯೂ ಉಲ್ಲಂಘಿಸಲಿಲ್ಲ ಎಂದು ಹೇಳಿದ್ದಾರೆ.
ಕೆಲವರು ಬಾಂಗ್ಲಾದೇಶದ ಆಟಗಾರನ ನಡೆಗೆ ಆಕ್ರೋಶ ಹೊರಹಾಕಿದ್ದು, ಇದು ಕ್ರೀಡಾ ಮನೋಭಾವವೇ? ಎಂದು ಪ್ರಶ್ನಿಸಿದ್ದಾರೆ. ಆದರೆ, ಬಹುತೇಕರು ಮಾತ್ರ ಸಲ್ಮಾನ್ ಅಲಿಗೆ ಅಷ್ಟು ತಿಳಿಯಲಿಲ್ಲವೇ? ಬಾಲ್ ನೇರವಾಗಿ ತಮ್ಮ ಕಡೆಗೆ ಬರುತ್ತಿದೆ ಎಂದರೆ, ಒಂದು ರನ್ಗಾಗಿ ಓಡಬೇಕಿತ್ತು. ಇಲ್ಲವೇ, ಕ್ರೀಸ್ಗೆ ವಾಪಾಸ್ ಆಗಬೇಕಿತ್ತು. ಅದನ್ನು ಬಿಟ್ಟು ನಿಂತಲ್ಲೇ ನಿಂತರೆ ಔಟ್ ಆಗದೆ ಇನ್ನೇನು ಎಂದು ಟೀಕಿಸಿದ್ದಾರೆ. ಸದ್ಯ ಈ ವಿವಾದಕ್ಕೆ ಮಾಜಿ ಕ್ರಿಕೆಟಿಗರು ಮತ್ತು ದಿಗ್ಗಜರು ಸಹ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಸಲ್ಮಾನ್ಗೆ ಐಸಿಸಿ ಬರೆ
ತಮ್ಮ ವಿಕೆಟ್ನ ಈ ರೀತಿ ಕಳೆದುಕೊಂಡಿದ್ದಕ್ಕೆ ಸಿಟ್ಟಾದ ಸಲ್ಮಾನ್, ಪೆವಿಲಿಯನ್ಗೆ ಸಾಗುವ ವೇಳೆ ತಮ್ಮ ಗ್ಲೌಸ್, ಹೆಲ್ಮೆಟ್ ಮತ್ತು ಬ್ಯಾಟ್ ಅನ್ನು ಕಿತ್ತುಬಿಸಾಡಿದರು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಐಸಿಸಿ, "ಢಾಕಾದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಪಾಕಿಸ್ತಾನದ ಎರಡನೇ ಏಕದಿನ ಪಂದ್ಯದಲ್ಲಿ ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ಅನ್ನು ಪಾಕ್ ಆಟಗಾರ ಉಲ್ಲಂಘಿಸಿದ ಕಾರಣ ಅವರಿಗೆ ವಾಗ್ದಂಡನೆ ವಿಧಿಸಲಾಗಿದೆ" ಎಂದು ಅಧಿಕೃತವಾಗಿ ತಿಳಿಸಿದೆ.
"ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.2 ಅನ್ನು ಪಾಕ್ ನಾಯಕ ಇಲ್ಲಿ ಉಲ್ಲಂಘಿಸಿರುವುದು ಸ್ಪಷ್ಟ. ಇದು ಅಂತಾರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಕ್ರಿಕೆಟ್ ಅಥವಾ ವಸ್ತ್ರ ಸೇರಿದಂತೆ ಇತರೆ ಉಪಕರಣಗಳನ್ನು ಎಸೆಯುವುದು ಮತ್ತು ಅಶಿಸ್ತು ತೋರಿದ ಹಿನ್ನೆಲೆ ಸಲ್ಮಾನ್ಗೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. ಇದು 24 ತಿಂಗಳ ಅವಧಿಯಲ್ಲಿ ಅವರಿಂದ ಆದ ಮೊದಲ ತಪ್ಪು ಎನ್ನಲಾಗಿದೆ,(ಏಜೆನ್ಸೀಸ್).