ಬಾಂಗ್ಲಾ ಕ್ರಿಕೆಟ್​  
ಕ್ರಿಕೆಟ್

ಬಾಂಗ್ಲಾ ಕ್ರಿಕೆಟ್​ಗೆ ಐಸಿಸಿ ಡೆಡ್​ಲೈನ್​! ಭಾರತದಲ್ಲಿ ಟಿ20 ವಿಶ್ವಕಪ್​ ಆಡಲ್ಲ ಎಂದಿದ್ದ ಬಿಸಿಬಿಗೆ ಈಗ ಬಿಕ್ಕಟ್ಟಿನ ಪರಿಸ್ಥಿತಿ

ಪ್ರಮುಖ ಮುಖ್ಯಾಂಶಗಳು

  • ಫೆಬ್ರವರಿ 7ರಿಂದ ಟಿ20 ವಿಶ್ವಕಪ್ ಟೂರ್ನಿ
  • ಭಾರತದಲ್ಲಿ ನಮ್ಮ ಪಂದ್ಯಗಳನ್ನು ಆಡುವುದಿಲ್ಲ ಎಂದಿದ್ದ ಬಿಸಿಬಿ ಶ್ರೀಲಂಕಾಗೆ ಪಂದ್ಯಗಳನ್ನು
  • ಸ್ಥಳಾಂತರಿಸುವಂತೆ ಕೋರಿ ಐಸಿಸಿಗೆ ಪತ್ರ
  • ಬಾಂಗ್ಲಾ ಮನವಿ ತಿರಸ್ಕರಿಸಿದ ಐಸಿಸಿ ಈಗ ಒಂದೇ ಒಂದು ಆಯ್ಕೆಯನ್ನು ಮುಂದಿಟ್ಟಿದೆ
ನವದೆಹಲಿ: ಇದೇ ಫೆ.7ರಿಂದ ಟಿ20 ವಿಶ್ವಕಪ್ ಆರಂಭವಾಗಲಿದ್ದು, ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಈ ಮೆಗಾ ಟೂರ್ನಿಯನ್ನು ಆಯೋಜಿಸುತ್ತಿವೆ. ಇದಕ್ಕಾಗಿ ಈಗಾಗಲೇ ಐಸಿಸಿ ವೇಳಾಪಟ್ಟಿಯನ್ನು ಸಹ ಬಿಡುಗಡೆಗೊಳಿಸಿದೆ. ಎರಡೂ ದೇಶಗಳ ಮಧ್ಯೆ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆ ನಮಗೆ ಭಾರತದಲ್ಲಿ ಭದ್ರತೆಯ ಸಮಸ್ಯೆಯಿದೆ. ನಮ್ಮ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸಿ ಎಂದು ಬಾಂಗ್ಲಾ ಕ್ರಿಕೆಟ್​ ಐಸಿಸಿಗೆ ಪತ್ರದ ಮುಖೇನ ಮನವಿ ಸಲ್ಲಿಸಿತ್ತು. ಆದರೀಗ, ಅದ್ಯಾವುದಕ್ಕೂ ಒಪ್ಪಿಗೆ ಸಿಕ್ಕಿಲ್ಲ. ಬದಲಿಗೆ ಒಂದು ಡೆಡ್​ಲೈನ್ ಹೊರಬಿದ್ದಿದೆ.

ಡೆಡ್​ಲೈನ್​ ಒಳಗೆ ತಿಳಿಸಬೇಕು

ಮೊದಲ ಪತ್ರದಲ್ಲಿ ಶ್ರೀಲಂಕಾ ಕ್ರೀಡಾಂಗಣಗಳಲ್ಲಿ ತಮ್ಮ ಪಂದ್ಯಗಳನ್ನು ಆಡಿಸುವಂತೆ ಐಸಿಸಿ ಕೋರಿದ್ದ ಬಾಂಗ್ಲಾ ಕ್ರಿಕೆಟ್ ಮಂಡಳಿ (ಬಿಸಿಬಿ), ಅದಕ್ಕೆ ಪ್ರತಿಕ್ರಿಯೆ ಬಾರದ ಹಿನ್ನೆಲೆ ಎರಡನೇ ಬಾರಿಗೆ ಪತ್ರವನ್ನು ರವಾನಿಸಿತು. ಆದರೀಗ, ಕಡೆಗೂ ಸ್ಪಂದಿಸಿರುವ ಐಸಿಸಿ, ಈ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಮೂರು ವಾರಗಳಿಗಿಂತ ಕಡಿಮೆ ಸಮಯ ಉಳಿದಿರುವುದರಿಂದ ನಾವು ಸ್ಥಳಗಳನ್ನು ಬದಲಾಯಿಸುವುದು ಅಸಾಧ್ಯ ಎಂದು ಐಸಿಸಿ ಸ್ಪಷ್ಟಪಡಿಸಿದೆ.
ಹೀಗಾಗಿ, ವಿಶ್ವಕಪ್ ಟೂರ್ನಿಯಲ್ಲಿ ಆಡುವುದು ಅಥವಾ ಹೊರಗುಳಿಯುವ ನಿರ್ಧಾರ ಸದ್ಯ ಬಿಸಿಬಿ ಕೈಯಲ್ಲಿದೆ. ಮೆಗಾ ಟೂರ್ನಿಯಲ್ಲಿ ಭಾಗಿಯಾಗುವ ನಿರ್ಧಾರಕ್ಕೆ ಸಂಬಂಧಿಸಿದಂತೆ ಬಾಂಗ್ಲಾ ಕ್ರಿಕೆಟ್​ಗೆ ಜ.21 ರವರೆಗೆ ಕಾಲಾವಕಾಶ ನೀಡಲಾಗಿದೆ. ಈ ಸಮಯದೊಳಗೆ ತಮ್ಮ ನಿಲುವೇನು ಎಂಬುದನ್ನು ತಿಳಿಸುವುದು ಅನಿವಾರ್ಯ.

ಇಷ್ಟೆಲ್ಲ ಗೊಂದಲ, ಜಟಾಪಟಿಗೆ ಮೂಲ ಕಾರಣವೇನು?

ಬಾಂಗ್ಲಾದೇಶದಲ್ಲಿ ಹಿಂದೂಗಳ ಸರಣಿ ಹತ್ಯೆ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್ ತಂಡ ಕೋಲ್ಕತ ನೈಟ್ ರೈಡರ್ಸ್‌ನಿಂದ ಕೈಬಿಡುವಂತೆ ಬಿಸಿಸಿಐ ಕೇಳಿತ್ತು. ರೆಹಮಾನ್​ ಏನಾದರೂ ಭಾರತದಲ್ಲಿ ಆಡಿದರೆ ಕ್ರೀಡಾಂಗಣದ ಮುಂದೆ ಪ್ರತಿಭಟನೆ ನಡೆಸಲಿದ್ದೇವೆ ಎಂದು ಕೆಲವು ಹಿಂದೂ ಸಂಘಟನೆಗಳು ಎಚ್ಚರಿಸಿದ್ದರಿಂದ ಬಿಸಿಸಿಐ ಅವರನ್ನು ತಂಡದಿಂದ ಕೈಬಿಡುವಂತೆ ಸೂಚನೆ ನೀಡಿತು. ಅಂತಿಮವಾಗಿ ಕೆಕೆಆರ್ ತಂಡ ಆಟಗಾರನನ್ನು ಬಿಡುಗಡೆ ಮಾಡಿತು.