2035ರವರೆಗಿನ ಐಸಿಸಿ ಟೂರ್ನಿ ವೇಳಾಪಟ್ಟಿ ಪ್ರಕಟ 
ಕ್ರಿಕೆಟ್

2035ರವರೆಗಿನ ಐಸಿಸಿ ಟೂರ್ನಿ ವೇಳಾಪಟ್ಟಿ ಪ್ರಕಟ: ಭಾರತಕ್ಕೆ 2031ರ ವಿಶ್ವಕಪ್ ಆತಿಥ್ಯ!..ಹೀಗಿದೆ ನೋಡಿ ಟೈಮ್​ ಟೇಬಲ್​​ | ICC Schedule

ICC Schedule: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ತನ್ನ ಮಹತ್ವದ ಮಂಡಳಿ ಸಭೆಗಳ ಬಳಿಕ, 2035ರವರೆಗಿನ ಪ್ರಮುಖ ಪುರುಷರ ಕ್ರಿಕೆಟ್ ಟೂರ್ನಿಗಳ ವೇಳಾಪಟ್ಟಿಯನ್ನು ಭಾನುವಾರ ಅಂತಿಮಗೊಳಿಸಿದೆ. ಇದರೊಂದಿಗೆ, 2027ರ ಏಕದಿನ ವಿಶ್ವಕಪ್ ಮತ್ತು 2028ರ ಟಿ20 ವಿಶ್ವಕಪ್ ಸೇರಿದಂತೆ ಮೂರು ಪ್ರಮುಖ ಟೂರ್ನಿಗಳ ಅರ್ಹತಾ ವ್ಯವಸ್ಥೆಯನ್ನೂ ಮಂಡಳಿ ನಿರ್ಧರಿಸಿದೆ.

ವಿಶೇಷವೆಂದರೆ, 2029ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ 2031ರ ಏಕದಿನ ವಿಶ್ವಕಪ್ ಟೂರ್ನಿಗಳ ಆತಿಥ್ಯದ ಹಕ್ಕು ಭಾರತಕ್ಕೆ ಒಲಿದಿದೆ.

ಸದಸ್ಯ ರಾಷ್ಟ್ರಗಳಿಗೆ ದೀರ್ಘಕಾಲೀನ ಸ್ಪಷ್ಟತೆ!

ಈ ಕುರಿತು ಅಧಿಕೃತ ಹೇಳಿಕೆ ನೀಡಿರುವ ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಸಂಜೋಗ್ ಗುಪ್ತಾ, ಆಟಗಾರರು ಮತ್ತು ಸಹ ಸದಸ್ಯ ರಾಷ್ಟ್ರಗಳಿಗೆ ಪ್ರಮುಖ ಟೂರ್ನಿಗಳ ಕುರಿತು ದೀರ್ಘಕಾಲೀನ ಸ್ಪಷ್ಟತೆ ನೀಡುವ ಮಹತ್ವವನ್ನು ಮಂಡಳಿ ಮನಗಂಡಿದೆ. ಇದು ಉನ್ನತ-ಕಾರ್ಯಕ್ಷಮತೆಯ ಕಾರ್ಯಕ್ರಮಗಳು ಮತ್ತು ವ್ಯವಸ್ಥಿತ ಕ್ಯಾಲೆಂಡರ್‌ಗಳ ಮೇಲೆ ಕೇಂದ್ರೀಕರಿಸುವ ಮೂಲಕ ಕ್ರೀಡಾಪಟುಗಳ ಬೆಳವಣಿಗೆಯ ಹಾದಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಐಸಿಸಿ ಟೂರ್ನಿಗಳ ವೇಳಾಪಟ್ಟಿಯು ಜಾಗತಿಕ ಕ್ರಿಕೆಟ್ ವಿನ್ಯಾಸದ ನಿರ್ಣಾಯಕ ಭಾಗವಾಗಿದ್ದು, ಅಭಿಮಾನಿಗಳು ಮತ್ತು ಆಟಗಾರರಿಗೆ ದೊಡ್ಡ ಮಟ್ಟದಲ್ಲಿ ಸ್ಪರ್ಧಾತ್ಮಕ ಅನುಭವವನ್ನು ನೀಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ICC.pdf
Preview

ಭಾರತಕ್ಕೆ ಎರಡು ಪ್ರಮುಖ ಟೂರ್ನಿಗಳ ಆತಿಥ್ಯ!

ಐಸಿಸಿ ಅಂತಿಮಗೊಳಿಸಿರುವ ವೇಳಾಪಟ್ಟಿಯ ಪ್ರಕಾರ, 2029ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಏಕಾಂಗಿಯಾಗಿ ಆಯೋಜಿಸಲಿದ್ದು, ಈ ಟೂರ್ನಿಯು ಅಕ್ಟೋಬರ್ 9ರಿಂದ 28ರವರೆಗೆ ನಡೆಯಲಿದೆ. ಇದಲ್ಲದೆ, 2031ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಮತ್ತು ಬಾಂಗ್ಲಾದೇಶ ಜಂಟಿಯಾಗಿ ಆತಿಥ್ಯ ವಹಿಸಲಿದ್ದು, ಅಕ್ಟೋಬರ್ 9ರಿಂದ ನವೆಂಬರ್ 23ರವರೆಗೆ ಪಂದ್ಯಾವಳಿ ಜರುಗಲಿದೆ.

ಇತರ ಪ್ರಮುಖ ಐಸಿಸಿ ಟೂರ್ನಿಗಳ ವೇಳಾಪಟ್ಟಿ!

  • 2028ರ ಟಿ20 ವಿಶ್ವಕಪ್: ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಜಂಟಿ ಆತಿಥ್ಯದಲ್ಲಿ ಅಕ್ಟೋಬರ್ 12ರಿಂದ ನವೆಂಬರ್ 12ರವರೆಗೆ ನಡೆಯಲಿದೆ.

  • 2029ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ಜೂನ್ 8ರಿಂದ 12ರವರೆಗೆ ಇಂಗ್ಲೆಂಡ್‌ನಲ್ಲಿ ಆಯೋಜಿಸಲಾಗಿದೆ.

  • 2030ರ ಟಿ20 ವಿಶ್ವಕಪ್: ಇಂಗ್ಲೆಂಡ್, ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಜಂಟಿ ಆತಿಥ್ಯದಲ್ಲಿ ಜುಲೈ 4ರಿಂದ ಆಗಸ್ಟ್ 4ರವರೆಗೆ ನಡೆಯಲಿದೆ.

  • 2031ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ಮತ್ತೊಮ್ಮೆ ಇಂಗ್ಲೆಂಡ್‌ನಲ್ಲಿ ಜೂನ್ 12ರಿಂದ 16ರವರೆಗೆ ಜರುಗಲಿದೆ.

ಲಾಸ್ ಏಂಜಲೀಸ್ ಒಲಿಂಪಿಕ್ಸ್ ಅರ್ಹತಾ ಸುತ್ತಿನ ವಿವರ

2028ರ ಲಾಸ್ ಏಂಜಲೀಸ್ ಒಲಿಂಪಿಕ್ ಕ್ರೀಡಾಕೂಟಕ್ಕೆ (LA28) ಕ್ರಿಕೆಟ್ ಮರಳುತ್ತಿರುವ ಹಿನ್ನೆಲೆಯಲ್ಲಿ, ಅದರ ಅರ್ಹತಾ ಸುತ್ತಿನ ಪಂದ್ಯಗಳು ಅಮೆರಿಕ ಮತ್ತು ಬಾಂಗ್ಲಾದೇಶದಲ್ಲಿ ನಡೆಯಲಿವೆ ಎಂದು ಐಸಿಸಿ ಘೋಷಿಸಿದೆ. ಪುರುಷರ ಅರ್ಹತಾ ಪಂದ್ಯಗಳು 2028ರ ಫೆಬ್ರವರಿ 5ರಿಂದ 13ರವರೆಗೆ ಬಾಂಗ್ಲಾದೇಶದಲ್ಲಿ ನಡೆಯಲಿದ್ದು, ಮಹಿಳೆಯರ ಅರ್ಹತಾ ಪಂದ್ಯಗಳು 2028ರ ಫೆಬ್ರವರಿ 26ರಿಂದ ಮಾರ್ಚ್ 5ರವರೆಗೆ ಅಮೆರಿಕದಲ್ಲಿ ಜರುಗಲಿವೆ.

ಒಲಿಂಪಿಕ್ಸ್ ಅರ್ಹತಾ ಹಾದಿಯ ಅಂತಿಮ ಘಟ್ಟವಾಗಿರುವ ಈ ಎರಡೂ ಟೂರ್ನಿಗಳಲ್ಲಿ ತಲಾ ಎಂಟು ತಂಡಗಳು ಭಾಗವಹಿಸಲಿವೆ. ತಂಡಗಳನ್ನು ನಾಲ್ಕರಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಒಟ್ಟು 13 ಪಂದ್ಯಗಳು ನಡೆಯಲಿವೆ. ಪ್ರತಿ ತಂಡವು ತನ್ನ ಗುಂಪಿನ ಇತರ ತಂಡಗಳೊಂದಿಗೆ ತಲಾ ಒಂದು ಪಂದ್ಯವನ್ನು ಆಡಲಿದ್ದು, ಗುಂಪಿನ ಅಗ್ರಸ್ಥಾನಿಗಳು ಫೈನಲ್‌ಗೆ ಪ್ರವೇಶಿಸಲಿವೆ. ಫೈನಲ್‌ನಲ್ಲಿ ಗೆಲ್ಲುವ ತಂಡವು 2028ರ ಲಾಸ್ ಏಂಜಲೀಸ್ ಒಲಿಂಪಿಕ್ ಕ್ರೀಡಾಕೂಟಕ್ಕೆ ಅಂತಿಮ ಅರ್ಹತಾ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ(ಏಜೆನ್ಸೀಸ್​).