ಶ್ರೀಶಾಂತ್ ನನ್ನ ರೂಮ್‌ಮೇಟ್ ಆಗಬೇಕು: ಬಾಕ್ಸಿಂಗ್ ರಿಂಗ್ ಸವಾಲಿಗೆ ಅಚ್ಚರಿ ಉತ್ತರ ಕೊಟ್ಟ ಹರ್ಭಜನ್! Harbhajan Singh
- ಹರ್ಭಜನ್ ಸಿಂಗ್ ಮತ್ತು ಶ್ರೀಶಾಂತ್ ನಡುವಿನ ಹಳೆಯ ವೈಷಮ್ಯ ಕರಗುವ ಲಕ್ಷಣ
- ಶ್ರೀಶಾಂತ್ ತನಗೆ ರೂಮ್‌ಮೇಟ್ ಆದರೆ ಯಾವುದೇ ಅಭ್ಯಂತರವಿಲ್ಲ ಎಂದ ಹರ್ಭಜನ್
- ಬಾಕ್ಸಿಂಗ್ ರಿಂಗ್‌ಗೆ ಬರುವಂತೆ ಈ ಹಿಂದೆ ಹರ್ಭಜನ್‌ಗೆ ನೇರ ಸವಾಲು ಹಾಕಿದ್ದ ಎಸ್ ಶ್ರೀಶಾಂತ್
- ಹಳೆಯ ಕಹಿ ಘಟನೆಗಳನ್ನು ಮರೆತು ಮಾಜಿ ಆಟಗಾರರು ಹೊಸ ಸ್ನೇಹಕ್ಕೆ ನಾಂದಿ
ನವದೆಹಲಿ: ಕ್ರಿಕೆಟ್ ಜಗತ್ತಿನಲ್ಲಿ ಹರ್ಭಜನ್ ಸಿಂಗ್ ( Harbhajan Singh ) ಮತ್ತು ಎಸ್. ಶ್ರೀಶಾಂತ್ ( S Sreesanth ) ನಡುವಿನ ಭಿನ್ನಾಭಿಪ್ರಾಯ ಯಾರಿಗೆ ತಾನೆ ತಿಳಿದಿಲ್ಲ? 2008ರ ಐಪಿಎಲ್ ಪಂದ್ಯದ ವೇಳೆ ನಡೆದ 'ಕಪಾಳಮೋಕ್ಷ' ವಿವಾದ ಭಾರಿ ಚರ್ಚೆಯಾಗಿತ್ತು. ಈ ಘಟನೆ ಬಳಿಕ ಇಬ್ಬರು ದಿಗ್ಗಜರು ಪರಸ್ಪರ ಮಾತನಾಡಿಕೊಂಡೇ ಇರಲಿಲ್ಲ. ಆದರೆ, ಇತ್ತೀಚೆಗೆ ಈ ಇಬ್ಬರ ನಡುವಿನ ಹಳೆಯ ವೈಷಮ್ಯದ ಮಂಜುಗಡ್ಡೆ ಕರಗುವ ಲಕ್ಷಣಗಳು ಗೋಚರಿಸುತ್ತಿದ್ದು, ಹರ್ಭಜನ್ ಸಿಂಗ್ ನೀಡಿರುವ ಹೇಳಿಕೆಯೊಂದು ಕ್ರಿಕೆಟ್ ಪ್ರಿಯರಲ್ಲಿ ಅಚ್ಚರಿ ಹಾಗೂ ಕುತೂಹಲ ಮೂಡಿಸಿದೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಶ್ರೀಶಾಂತ್ ಕುರಿತು ಮಾತನಾಡಿರುವ ಹರ್ಭಜನ್ ಸಿಂಗ್, ತಮಗೆ ಶ್ರೀಶಾಂತ್ ರೂಮ್‌ಮೇಟ್ ಆಗಿರುವುದರಲ್ಲಿ ಯಾವುದೇ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾವಿಬ್ಬರೂ ಒಂದೇ ಕೋಣೆಯಲ್ಲಿ ಉಳಿದುಕೊಂಡರೆ, ಅನೇಕ ವಿಷಯಗಳು ಬಗೆಹರಿಯುತ್ತವೆ. ನಾನು ಅವರನ್ನು ನನ್ನ ರೂಮ್‌ಮೇಟ್ ಆಗಿ ಪರಿಗಣಿಸಬಹುದು. ನನಗೆ ಯಾವುದೇ ಅಡ್ಡಿಯಿಲ್ಲ ಎಂದು ಹರ್ಭಜನ್ ಮುಕ್ತವಾಗಿ ತಮ್ಮ ಮನಸ್ಸಿನ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಮತ್ತೊಂದೆಡೆ, ಶ್ರೀಶಾಂತ್ ಕೂಡ ಇತ್ತೀಚಿನ ಸಂದರ್ಶನವೊಂದರಲ್ಲಿ ಹರ್ಭಜನ್ ಸಿಂಗ್ ಅವರನ್ನು ಬಾಕ್ಸಿಂಗ್ ರಿಂಗ್‌ನಲ್ಲಿ ಎದುರಿಸುವುದಾಗಿ ಸವಾಲು ಹಾಕಿದ್ದರು. ಇಬ್ಬರೂ ಬಾಕ್ಸಿಂಗ್ ಉಡುಪಿನಲ್ಲಿರುವ ಹಳೆಯ ಚಿತ್ರಗಳನ್ನು ನೆನಪಿಸಿಕೊಂಡ ಶ್ರೀಶಾಂತ್, "ಅದೇ ದೃಶ್ಯ, ನಿಮ್ಮಲ್ಲಿ ಧೈರ್ಯವಿದೆಯೇ? ನನ್ನೊಂದಿಗೆ ರಿಂಗ್‌ಗೆ ಬರುವ ಗಟ್ಸ್ ನಿಮಗಿದೆಯೇ?" ಎಂದು ಹರ್ಭಜನ್ ಅವರಿಗೆ ನೇರ ಸವಾಲು ಎಸೆದಿದ್ದರು. ನಾನು ಪ್ರಸ್ತುತ 'ಬೇರ್ ನಕಲ್ ಫೈಟಿಂಗ್ ಲೀಗ್' ಜೊತೆ ಗುರುತಿಸಿಕೊಂಡಿದ್ದು, ಅಂತಾರಾಷ್ಟ್ರೀಯ ಫೈಟರ್ ಆದ ಕೊನರ್ ಮೆಕ್‌ಗ್ರೆಗರ್ ಅವರಂತಹ ದಿಗ್ಗಜರೊಂದಿಗೆ ಕೆಲಸ ಮಾಡುತ್ತಿರುವುದಾಗಿ ಶ್ರೀಶಾಂತ್ ಇದೇ ಸಂದರ್ಭದಲ್ಲಿ ತಿಳಿಸಿದ್ದರು.
ಹರ್ಭಜನ್ ಸಿಂಗ್ ಅವರಿಗೆ ಕೇವಲ ಜಾಹೀರಾತುಗಳಲ್ಲಿ ನಟಿಸುವುದಷ್ಟೇ ಅಲ್ಲದೆ, ನಿಜವಾಗಿಯೂ ಸ್ವಾಭಿಮಾನವಿದ್ದರೆ ರಿಂಗ್‌ನೊಳಗೆ ಬಂದು ತನ್ನೊಂದಿಗೆ ಸ್ಪರ್ಧಿಸಲಿ ಎಂದು ಶ್ರೀಶಾಂತ್ ಸವಾಲು ಹಾಕಿದ್ದರು. ಮಲಯಾಳಿಗಳು ಮತ್ತು ಸರ್ದಾರ್‌ಗಳ ಹೆಸರಿನಲ್ಲಿ ಈ ಸವಾಲನ್ನು ಸ್ವೀಕರಿಸುವಂತೆ ಹರ್ಭಜನ್ ಅವರನ್ನು ಕೆಣಕಿದ್ದರು. ಇದೆಲ್ಲದರ ನಡುವೆ ಇದೀಗ ಹರ್ಭಜನ್ ನೀಡಿರುವ ಹೇಳಿಕೆಯನ್ನು ನೋಡಿದರೆ, ಎಲ್ಲವನ್ನು ಮರೆತು ಸ್ನೇಹದ ಹಸ್ತ ಚಾಚಿರುವಂತೆ ತೋರುತ್ತದೆ.
ಒಟ್ಟಾರೆಯಾಗಿ, ಹರ್ಭಜನ್ ಸಿಂಗ್ ರೂಮ್‌ಮೇಟ್ ಆಗಿ ಹೊಂದಾಣಿಕೆ ಮಾಡಿಕೊಳ್ಳುವ ಮಾತುಗಳನ್ನಾಡಿದ್ದರೆ, ಶ್ರೀಶಾಂತ್ ಮಾತ್ರ ಬಾಕ್ಸಿಂಗ್ ರಿಂಗ್‌ನಲ್ಲಿ ಕಾದಾಡುವಂತೆ ಮುಕ್ತ ಸವಾಲು ಹಾಕಿದ್ದರು. 2008ರ ಕಹಿ ನೆನಪುಗಳನ್ನು ಬಿಟ್ಟು ಈ ಇಬ್ಬರು ಹಳೆಯ ಆಟಗಾರರು ತಮ್ಮ ನಡುವಿನ ವೈಮನಸ್ಸನ್ನು ಕೊನೆಗೊಳಿಸಿ ಹೊಸ ಸ್ನೇಹಕ್ಕೆ ನಾಂದಿ ಹಾಡುತ್ತಾರಾ ಅಥವಾ ಕ್ರೀಡಾಂಗಣದ ಹೊರಗಿನ ಈ ವಾಗ್ವಾದ ಮುಂದುವರಿಯುತ್ತಾ ಎಂಬುದನ್ನು ಕಾಲವೇ ನಿರ್ಧರಿಸಬೇಕಿದೆ.
ಏನಿದು ಸ್ಲ್ಯಾಪ್‌ಗೇಟ್ ಕೇಸ್?
ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ವಿವಾದವಾಗಿ ಉಳಿದಿರುವ 'ಸ್ಲ್ಯಾಪ್‌ಗೇಟ್' ಘಟನೆಯು 2008ರ ಚೊಚ್ಚಲ ಐಪಿಎಲ್ ಆವೃತ್ತಿಯ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯದ ವೇಳೆ ನಡೆದಿತ್ತು. ಪಂದ್ಯ ಮುಗಿದ ಬಳಿಕ ಅಂದಿನ ಮುಂಬೈ ತಂಡದ ನಾಯಕರಾಗಿದ್ದ ಹರಭಜನ್ ಸಿಂಗ್, ಪಂಜಾಬ್ ತಂಡದ ವೇಗಿ ಎಸ್. ಶ್ರೀಶಾಂತ್ ಅವರಿಗೆ ಮೈದಾನದಲ್ಲೇ ಬಹಿರಂಗವಾಗಿ ಕಪಾಳಮೋಕ್ಷ ಮಾಡಿದ್ದರು. ಪಂದ್ಯ ಮುಗಿದ ನಂತರ ಶ್ರೀಶಾಂತ್ ಮೈದಾನದಲ್ಲೇ ಕಣ್ಣೀರಿಡುತ್ತಿರುವ ದೃಶ್ಯಗಳು ಇಡೀ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದವು. ಈ ಕೃತ್ಯಕ್ಕಾಗಿ ಹರ್ಭಜನ್ ಸಿಂಗ್ ಅವರನ್ನು ಆ ಐಪಿಎಲ್ ಸೀಸನ್‌ನ ಉಳಿದ ಪಂದ್ಯಗಳಿಂದ ನಿಷೇಧಿಸಲಾಗಿದ್ದಲ್ಲದೆ, ಅವರ ಪಂದ್ಯದ ಶುಲ್ಕವನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಆರಂಭದಲ್ಲಿ ಇದು ಇಬ್ಬರ ನಡುವಿನ ತೀವ್ರ ವೈಷಮ್ಯಕ್ಕೆ ಕಾರಣವಾಗಿದ್ದರೂ, ಆ ನಂತರದ ವರ್ಷಗಳಲ್ಲಿ ಇಬ್ಬರೂ ಆಟಗಾರರು ಸಾರ್ವಜನಿಕವಾಗಿ ಒಂದಾಗಿ ಹಳೆಯ ಕಹಿ ಘಟನೆಯನ್ನು ಮರೆತು ಸ್ನೇಹಿತರಾಗಿದ್ದರು, (ಏಜೆನ್ಸೀಸ್).