ನನ್ನ ಬಗ್ಗೆ ಎಲ್ಲರು ಅಂದುಕೊಂಡಿರುವುದು ನಿಜವಲ್ಲ, ನನ್ನ ಕತೆಯೇ ಬೇರೆ... ರಜತ್ ಪಾಟೀದಾರ್ ಅಚ್ಚರಿ ಹೇಳಿಕೆ! Rajat Patidar  
ಕ್ರಿಕೆಟ್

ನನ್ನ ಬಗ್ಗೆ ಎಲ್ಲರು ಅಂದುಕೊಂಡಿರುವುದು ನಿಜವಲ್ಲ, ನನ್ನ ಕತೆಯೇ ಬೇರೆ... ರಜತ್ ಪಾಟೀದಾರ್ ಅಚ್ಚರಿ ಹೇಳಿಕೆ! Rajat Patidar

ಪ್ರಮುಖ ಮುಖ್ಯಾಂಶಗಳು

  • ವಾಂಖೆಡೆಯಲ್ಲಿ ಮುಂಬೈ ವಿರುದ್ಧ ಭರ್ಜರಿ ಜಯಭೇರಿ ಬಾರಿಸಿದ ಆರ್​ಸಿಬಿ
  • ಆರ್​ಸಿಬಿ ನೀಡಿದ 241 ರನ್‌ಗಳ ಗುರಿ ತಲುಪಲಾಗದೆ 222ಕ್ಕೆ ಮುಗ್ಗರಿಸಿದ ಮುಂಬೈ
  • ಸಾಲ್ಟ್, ಕೊಹ್ಲಿ ಮತ್ತು ಪಾಟೀದಾರ್ ಆಕ್ರಮಣಕಾರಿ ಆಟದಿಂದ ತಂಡಕ್ಕೆ ಆನೆಬಲ
  • ರೂಥರ್‌ಫೋರ್ಡ್ ಹೋರಾಟದ ನಡುವೆಯೂ ಸತತ ಸೋಲು ಕಂಡ ಮುಂಬೈ ಇಂಡಿಯನ್ಸ್
Rajat Patidar : ನಿನ್ನೆ ರಾತ್ರಿ (ಏಪ್ರಿಲ್ 12) ನಡೆದ 19ನೇ ಆವೃತ್ತಿಯ 20ನೇ ಐಪಿಎಲ್ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ( RCB ) ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಅವರ ತವರು ಮೈದಾನ ವಾಂಖೆಡೆಯಲ್ಲಿ ಸೋಲಿಸಿತು. ಫಿಲ್ ಸಾಲ್ಟ್ (78), ವಿರಾಟ್ ಕೊಹ್ಲಿ (50), ರಜತ್ ಪಾಟೀದಾರ್ (53), ಮತ್ತು ಟಿಮ್ ಡೇವಿಡ್ (ಔಟಾಗದೆ 34) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದಾಗಿ ಆರ್‌ಸಿಬಿ ಬೃಹತ್ ಮೊತ್ತವನ್ನು ದಾಖಲಿಸಲು ಸಹಾಯ ಮಾಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ತುಂಬಾ ಕಷ್ಟಪಟ್ಟ ಮುಂಬೈ ತಂಡ ಕೇವಲ 19 ರನ್‌ಗಳ ಅಂತರದಲ್ಲಿ ಸೋಲುಂಡಿತು.
ಗೆಲುವಿನ ನಂತರ, ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ತಮ್ಮ ತಂಡದ ಪ್ರದರ್ಶನ ಮತ್ತು ವೈಯಕ್ತಿಕ ಪ್ರದರ್ಶನದ ಬಗ್ಗೆ ಪಾಟೀದಾರ್​ ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದರು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಡುವುದನ್ನು ಒಂದು ಉತ್ತಮ ಭಾವನೆ ಎಂದು ಕರೆದರು. ಇದೇ ವೇಳೆ ವಿರಾಟ್ ಗಾಯದ ಬಗ್ಗೆ ಅಪ್​ಡೇಟ್​ ನೀಡಿದರು. ಒಟ್ಟಾರೆ ತಂಡದ ಪ್ರದರ್ಶನದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.
ರಜತ್ ಅವರ ಮಾತಿನಲ್ಲಿ ಹೇಳುವುದಾದರೆ, ಮುಂಬೈನಲ್ಲಿ, ವಿಶೇಷವಾಗಿ ವಾಂಖೆಡೆ ಕ್ರೀಡಾಂಗಣದಲ್ಲಿ ಆಡುವುದು ಯಾವಾಗಲೂ ವಿಶೇಷ ಅನುಭವ. ಇಲ್ಲಿನ ಅಭಿಮಾನಿಗಳು, ವಾತಾವರಣ ಮತ್ತು ತುಂಬಿ ತುಳುಕುವ ಕ್ರೀಡಾಂಗಣದಲ್ಲಿ ಆಡುವುದು ವಿಭಿನ್ನ ಭಾವನೆಯನ್ನು ನೀಡುತ್ತದೆ. ಈ ಪಂದ್ಯದಲ್ಲಿ ತಂಡದ ಪ್ರದರ್ಶನ ತೃಪ್ತಿಕರವಾಗಿತ್ತು. ವಿರಾಟ್ ಭಾಯ್ ಮತ್ತು ಫಿಲ್ ಸಾಲ್ಟ್ ನಮಗೆ ಉತ್ತಮ ಆರಂಭವನ್ನು ನೀಡಿದರು. ಅದರಿಂದಾಗಿಯೇ ನಾನು ಮತ್ತು ಟಿಮ್ ಮುಕ್ತವಾಗಿ ಶಾಟ್‌ಗಳನ್ನು ಆಡಲು ಸಾಧ್ಯವಾಯಿತು. ಇದು ಸಂಪೂರ್ಣ ತಂಡದ ಪ್ರಯತ್ನವಾಗಿತ್ತು ಎಂದು ಪಾಟೀದಾರ್​ ಹೇಳಿದರು.
ನಾನು ಸ್ಪಿನ್ ಬೌಲಿಂಗ್ ಅನ್ನು ಚೆನ್ನಾಗಿ ಆಡಬಲ್ಲೆ ಎಂದು ಹಲವರು ಭಾವಿಸುತ್ತಾರೆ. ಆದರೆ, ವಾಸ್ತವವಾಗಿ ನನಗೆ ವೇಗದ ಬೌಲಿಂಗ್ ಆಡಲು ತುಂಬಾ ಇಷ್ಟ. ಅಲ್ಲಿ ನಾನು ಆರಾಮವಾಗಿ ಆಡಬಲ್ಲೆ. ಈ ಪಿಚ್‌ನಲ್ಲಿ ವೇಗಿಗಳನ್ನು ಎದುರಿಸುವುದು ಅದ್ಭುತವಾಗಿದೆ ಎನ್ನುವ ಮೂಲಕ ಎಲ್ಲರ ಹುಬ್ಬೇರಿಸಿದರು. ವಾಸ್ತವವಾಗಿ ರಜತ್​, ಸ್ಪಿನ್ನರ್​ಗಳಿಗೆ ಉತ್ತಮ ಬ್ಯಾಟ್ಸ್​ಮನ್​ ಎಂದು ಕ್ರಿಕೆಟ್​ ಪಂಡಿತರು ಹೇಳುತ್ತಾರೆ. ಆದರೆ, ಅವರ ಪ್ರಕಾರ ತಾವು ವೇಗಿಗಳಿಗೆ ಒಳ್ಳೆಯ ಬಾಟ್ಸ್​ಮನ್​ ಅಂತೆ. ರಜತ್ ಅವರ ಮಾತುಗಳನ್ನು ನೋಡಿದರೆ, ತಂಡದ ಪ್ರದರ್ಶನದ ಬಗ್ಗೆ ಅವರಿಗೆ ತುಂಬಾ ತೃಪ್ತಿ ಇದೆ. ಅವರು ತಂಡವನ್ನು ಭಯವಿಲ್ಲದೆ ಬ್ಯಾಟಿಂಗ್ ಮಾಡಲು ಪ್ರೋತ್ಸಾಹಿಸುತ್ತಿದ್ದಾರೆ.
ಪಂದ್ಯದ ಸಾರಾಂಶ
ನಿನ್ನೆ (ಏಪ್ರಿಲ್​ 12) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 20ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 18 ರನ್‌ಗಳ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಫಿಲಿಪ್ ಸಾಲ್ಟ್ (78 ರನ್) ಮತ್ತು ರಜತ್ ಪಾಟಿದಾರ್ ( 53) ಅವರ ಆಕ್ರಮಣಕಾರಿ ಬ್ಯಾಟಿಂಗ್‌ನ ನೆರವಿನಿಂದ 4 ವಿಕೆಟ್ ಕಳೆದು 240 ರನ್‌ಗಳ ಭಾರೀ ಮೊತ್ತ ಕಲೆಹಾಕಿತು. ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಸೂರ್ಯಕುಮಾರ್ ಯಾದವ್, ರಿಕಲ್ಟನ್​ ಅವರ ಆರಂಭಿಕ ಆಘಾತದ ನಂತರ ಶೆರ್ಫೇನ್ ರೂಥರ್‌ಫೋರ್ಡ್ ಅವರ ಕ್ಯಾಮಿಯೋ (71 ರನ್) ಸಹಾಯದಿಂದ 5 ವಿಕೆಟ್ ಕಳೆದು 222 ರನ್‌ಗಳಿಗೆ ಸೀಮಿತಗೊಂಡಿತು. ಆರ್‌ಸಿಬಿ ಸ್ಪಿನ್ನರ್‌ಗಳು ಮುಂಬೈ ಬ್ಯಾಟಿಂಗ್‌ ಆರ್ಭಟವನ್ನು ತಡೆಹಿಡಿದು ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಸೋಲಿನೊಂದಿಗೆ ಮುಂಬೈ ಇಂಡಿಯನ್ಸ್ ಮೂರನೇ ಸೋಲು ಕಂಡಿತು, (ಏಜೆನ್ಸೀಸ್​).