ಕೊಹ್ಲಿ, ಟಿಮ್​ ಡೇವಿಡ್​, ಭುವಿ ಅಲ್ಲವೇ ಅಲ್ಲ... ಒತ್ತಡದಲ್ಲಿದ್ದಾಗಲೆಲ್ಲ ರಜತ್​ ನಂಬೋದು ಈ ಓರ್ವ ಆಟಗಾರನನ್ನ! Rajat Patidar  
ಕ್ರಿಕೆಟ್

ಕೊಹ್ಲಿ, ಟಿಮ್​ ಡೇವಿಡ್​, ಭುವಿ ಅಲ್ಲವೇ ಅಲ್ಲ... ಒತ್ತಡದಲ್ಲಿದ್ದಾಗಲೆಲ್ಲ ರಜತ್​ ನಂಬೋದು ಈ ಓರ್ವ ಆಟಗಾರನನ್ನ! Rajat Patidar

ಪ್ರಮುಖ ಮುಖ್ಯಾಂಶಗಳು

  • ಹಾಲಿ ಚಾಂಪಿಯನ್​ ಆಗಿ ಎಂಟ್ರಿ ಕೊಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡ ಸಖತ್​ ಫಾರ್ಮ್‌ನಲ್ಲಿದೆ
  • ಈ ಬಾರಿಯ ಉದ್ಘಾಟನಾ ಪಂದ್ಯದಲ್ಲಿ ಸನ್​ ರೈಸರ್ಸ್​ ಹೈದರಾಬಾದ್​ ತಂಡವನ್ನು ಬಗ್ಗುಬಡಿದ ಆರ್​ಸಿಬಿ
  • ನಿನ್ನೆ ನಡೆದ ಹೈವೋಲ್ಟೇಜ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ನೀರು ಕುಡಿಸಿದ ಆರ್​ಸಿಬಿ
  • ಈ ಸೀಸನ್​ನಲ್ಲಿ ಸತತ 2ನೇ ಪಂದ್ಯವನ್ನು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿತ
Rajat Patidar : ಕಳೆದ ವರ್ಷ ಐಪಿಎಲ್​ ಟ್ರೋಫಿ ಮುಡಿಗೇರಿಸಿಕೊಂಡು ಹಾಲಿ ಚಾಂಪಿಯನ್​ ಆಗಿ ಪ್ರಸಕ್ತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್​ ಟೂರ್ನಿಗೆ ಹಾಲಿ ಚಾಂಪಿಯನ್​ ಆಗಿ ಎಂಟ್ರಿ ಕೊಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡ ಸಖತ್​ ಫಾರ್ಮ್‌ನಲ್ಲಿದೆ. ಈ ಬಾರಿಯ ಉದ್ಘಾಟನಾ ಪಂದ್ಯದಲ್ಲಿ ಸನ್​ ರೈಸರ್ಸ್​ ಹೈದರಾಬಾದ್​ ತಂಡವನ್ನು ಬಗ್ಗುಬಡಿದ ಆರ್​ಸಿಬಿ, ನಿನ್ನೆ ನಡೆದ ಹೈವೋಲ್ಟೇಜ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ನೀರು ಕುಡಿಸಿತು. ಈ ಮೂಲಕ ಈ ಸೀಸನ್​ನಲ್ಲಿ ಸತತ ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ.
ಈ ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ಆರ್‌ಸಿಬಿ ನಾಯಕ ರಜತ್ ಪಟಿದಾರ್ ಸಂತೋಷ ವ್ಯಕ್ತಪಡಿಸಿದರು. ಈ ಗೆಲುವು ಅದ್ಭುತವೆನಿಸುತ್ತದೆ ಎಂದರು. ಉತ್ತಮ ಕ್ರಿಕೆಟ್ ಆಡಿ ಇಂತಹ ಗೆಲುವುಗಳನ್ನು ಸಾಧಿಸಿದಾಗ ತಂಡದಲ್ಲಿ ಸಾಕಷ್ಟು ತೃಪ್ತಿ ಇರುತ್ತದೆ ಎಂದು ಖುಷಿ ವ್ಯಕ್ತಪಡಿಸಿದರು. ಇನ್ನಿಂಗ್ಸ್ ಆರಂಭದಲ್ಲಿ ಚೆಂಡು ಸ್ವಲ್ಪ ನಿಧಾನಗತಿಯಲ್ಲಿತ್ತು ಮತ್ತು ಆ ಸಮಯದಲ್ಲಿ ಆರಂಭಿಕರಾದ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಆಡಿದ ರೀತಿ ತುಂಬಾ ಅದ್ಭುತವಾಗಿತ್ತು. ಆ ನಂತರ ಟಿಮ್ ಡೇವಿಡ್ ಆಡಿದ ರೀತಿ ಮುಂದಿನ ಹಂತವಾಗಿತ್ತು ಎಂದು ರಜತ್​ ಪಟಿದಾರ್​ ಹೇಳಿದರು.
ನಾನ್-ಸ್ಟ್ರೈಕಿಂಗ್ ಎಂಡ್​ನಿಂದ ಡೇವಿಡ್​ ಅವರು ಹೊಡೆದ ಸಿಕ್ಸರ್​ಗಳನ್ನು ನೋಡಿ ನಾನು ಆನಂದಿಸಿದೆ. ಅವರು ಅತ್ಯುತ್ತಮ ಫಿನಿಷರ್​ಗಳಲ್ಲಿ ಒಬ್ಬರು. ಕಳೆದ ವರ್ಷವೂ ಅವರು ಹೀಗೆಯೇ ಆಡಿದರು ಮತ್ತು ಈಗಲೂ ಅದೇ ರೀತಿ ಆಡುತ್ತಿದ್ದಾರೆ. ನಿಜಕ್ಕೂ ಇದು ತುಂಬಾ ಸಂತೋಷವನ್ನು ನೀಡುತ್ತದೆ ಎಂದು ಪಟಿದಾರ್​ ಕೊಂಡಾಡಿದರು.
ಇದೇ ಸಮಯದಲ್ಲಿ ಟಿಮ್​ ಡೇವಿಡ್ ಹೊಡೆದ 106 ಮೀಟರ್ ಸಿಕ್ಸರ್​ ಬಗ್ಗೆ ಮಾತನಾಡಿದ ರಜತ್​, ಡೇವಿಡ್​ ಅವರು ಆ ಚೆಂಡನ್ನು ನೋಡುತ್ತಲೇ ಇದ್ದರು ಮತ್ತು ಅದು ಮಾಯವಾದಂತೆ ಕಾಣುತ್ತಿತ್ತು ಎಂದರು. ಇದೇ ವೇಳೆ ತಮ್ಮ ಬ್ಯಾಟಿಂಗ್ ಬಗ್ಗೆ ಮಾತನಾಡುತ್ತಾ, ಕ್ರೀಸ್​ನಲ್ಲಿ ಇರುವವರೆಗೂ ಬೌಲರ್​ಗಳ ಮೇಲೆ ಒತ್ತಡ ಹೇರುವುದು ನನ್ನ ಗುರಿ ಎಂದು ಹೇಳಿದರು.
ನಮ್ಮ ಬೌಲಿಂಗ್ ವಿಭಾಗ ತುಂಬಾ ಚೆನ್ನಾಗಿದೆ. ಡಫಿ ಅವರು ತಮ್ಮ ಔಟ್-ಸ್ವಿಂಗರ್‌ಗಳಿಂದ ಪ್ರಮುಖ ವಿಕೆಟ್‌ಗಳನ್ನು ಕಬಳಿಸಿ ಪಂದ್ಯವನ್ನು ನಮ್ಮ ಪರವಾಗಿ ತಿರುಗಿಸಿದರು. ಇದಾದ ನಂತರ ಕೃನಾಲ್ ಪಾಂಡ್ಯ ಅವರು ನಿರ್ಣಾಯಕ ಸರ್ಫರಾಜ್ ಖಾನ್ ಅವರ ವಿಕೆಟ್ ಪಡೆದು ಅದ್ಭುತ ಪ್ರದರ್ಶನ ನೀಡಿದರು. ಡೆತ್ ಬೌಲಿಂಗ್​ನಲ್ಲಿ ಭುವಿಯ ಯಾರ್ಕರ್ ಅದ್ಭುತವಾಗಿದೆ. ನಾನು ಒತ್ತಡದಲ್ಲಿದ್ದಾಗಲೆಲ್ಲಾ ಯಾವಾಗಲೂ ಕೃನಾಲ್ ಕಡೆಗೆ ನೋಡುತ್ತೇನೆ. ಅವರ ಮೇಲೆ ನನಗೆ ಅಪಾರ ನಂಬಿಕೆ ಇದೆ ಎಂದು ಅವರು ಹೇಳಿದರು. ಮುಂದಿನ ಪಂದ್ಯವನ್ನು ಹೆಚ್ಚಿನ ಆಸಕ್ತಿಯಿಂದ ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದರು.
ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 250 ರನ್​ಗಳ ಬೃಹತ್​ ಮೊತ್ತವನ್ನು ಕಲೆಹಾಕಿತು. ಆರ್‌ಸಿಬಿ ಪರ ಟಿಮ್ ಡೇವಿಡ್ (ಅಜೇಯ 70 ರನ್​, 25 ಎಸೆತ, 3 ಬೌಂಡರಿ, 8 ಸಿಕ್ಸರ್) ಮತ್ತು ದೇವದತ್ ಪಡಿಕ್ಕಲ್ (50 ರನ್​, 29 ಎಸೆತ, 5 ಬೌಂಡರಿ, 2 ಸಿಕ್ಸರ್) ಮಿಂಚಿನ ಅರ್ಧಶತಕಗಳನ್ನು ಗಳಿಸಿದರು. ನಾಯಕ ರಜತ್ ಪಾಟಿದಾರ್ (ಅಜೇಯ 48 ರನ್​, 19 ಎಸೆತ, 1 ಬೌಂಡರಿ, 6 ಸಿಕ್ಸರ್) ಮತ್ತು ಫಿಲ್ ಸಾಲ್ಟ್ (46 ರನ್​, 30 ಎಸೆತ, 3 ಬೌಂಡರಿ, 2 ಸಿಕ್ಸರ್) ವೇಗವಾಗಿ ಆಡಿದರು. ಸಿಎಸ್‌ಕೆ ಬೌಲರ್‌ಗಳಲ್ಲಿ ಅನ್ಶುಲ್ ಕಾಂಬೋಜ್, ಜೇಮಿ ಓವರ್ಟನ್ ಮತ್ತು ಶಿವಂ ದುಬೆ ತಲಾ ಒಂದು ವಿಕೆಟ್ ಪಡೆದರು.
ಆರ್​ಸಿಬಿ ನೀಡಿದ 251 ರನ್​ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 207 ರನ್​ಗಳಿಗೆ ಆಲೌಟ್ ಆಯಿತು. ಸಿಎಸ್​ಕೆ ಪರ ಸರ್ಫರಾಜ್ ಖಾನ್ (50 ರನ್​, 25 ಎಸೆತ, 8 ಬೌಂಡರಿ, 2 ಸಿಕ್ಸರ್) ಅರ್ಧಶತಕ ಗಳಿಸಿದರು. ಪ್ರಶಾಂತ್ ವೀರ್ (43 ರನ್​, 29 ಎಸೆತ, 6 ಬೌಂಡರಿ, 1 ಸಿಕ್ಸರ್) ಮತ್ತು ಜೇಮೀ ಓವರ್ಟನ್ (37 ರನ್​, 16 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್) ಉತ್ತಮ ಪ್ರದರ್ಶನ ನೀಡಿದರು. ಆರ್​ಸಿಬಿ ಪರ ಭುವನೇಶ್ವರ್ ಕುಮಾರ್ ಮೂರು ವಿಕೆಟ್ ಪಡೆದರು. ಜಾಕೋಬ್ ಡಫಿ, ಅಭಿನಂದನ್ ಸಿಂಗ್ ಮತ್ತು ಕೃನಾಲ್ ಪಾಂಡ್ಯ ತಲಾ ಎರಡು ವಿಕೆಟ್ ಪಡೆದರೆ, ಸುಯಾಶ್ ಶರ್ಮಾ ಒಂದು ವಿಕೆಟ್ ಪಡೆದರು. (ಏಜೆನ್ಸೀಸ್​)|