15ನೇ ವಯಸ್ಸಿನಲ್ಲೇ ವೈಭವ್ಗೆ ಉಪನಾಯಕನ ಪಟ್ಟ: ಆಯ್ಕೆ ಮಾಡಿದವರಿಗೆ ಹರ್ಷ ಭೋಗ್ಲೆ ಖಡಕ್ ಪ್ರಶ್ನೆ! Vaibhav Sooryavanshi
- ದುಲೀಪ್ ಟ್ರೋಫಿ ಈಸ್ಟ್ ಜೋನ್ ತಂಡದ ಉಪನಾಯಕನಾಗಿ ವೈಭವ್ ಸೂರ್ಯವಂಶಿ ನೇಮಕ
- ವೈಭವ್ ಸೂರ್ಯವಂಶಿಗೆ ಉಪನಾಯಕನ ಜವಾಬ್ದಾರಿ ನೀಡಿದ್ದನ್ನು ಪ್ರಶ್ನಿಸಿದ ಹರ್ಷ ಬೋಗ್ಲೆ
- ದೇಶೀಯ ಕ್ರಿಕೆಟ್‌ನಲ್ಲಿ ಕಡಿಮೆ ಅನುಭವವಿದ್ದರೂ ಹದಿಹರೆಯದ ತಾರೆಗೆ ದೊಡ್ಡ ಗೌರವ
- ಹಿರಿಯರ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ವೈಭವ್ ಇನ್ನೂ ಕಲಿಯಬೇಕಿದೆ ಎಂದ ಕಾಮೆಂಟೇಟರ್
ಮುಂಬೈ: ಕ್ರಿಕೆಟ್ ಜಗತ್ತಿನ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ( Vaibhav Sooryavanshi ) ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಇಂಗ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ವೈಫಲ್ಯ ಕಂಡರೂ ಜಿಂಬಾಬ್ವೆ ವಿರುದ್ಧ ಸರಣಿಯಲ್ಲಿ ಎಂದಿನಂತೆ ತಮ್ಮ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ, ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಆದಾಗ್ಯೂ, ಈ 15 ವರ್ಷದ ಆಟಗಾರನಿಗೆ ದೇಶೀಯ ಕ್ರಿಕೆಟ್‌ನಲ್ಲಿ ಹೆಚ್ಚಿನ ಅನುಭವವಿಲ್ಲ. ಹಾಗಿದ್ದರೂ, 2026-27ನೇ ಸಾಲಿನ ದುಲೀಪ್ ಟ್ರೋಫಿಗಾಗಿ ಪ್ರಕಟಿಸಲಾದ ಈಸ್ಟ್ ಜೋನ್ ತಂಡಕ್ಕೆ ವೈಭವ್ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದ್ದು, ಇದು ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ.
ಭಾರತದ ಖ್ಯಾತ ಕ್ರಿಕೆಟ್ ಕಾಮೆಂಟೇಟರ್ ಹರ್ಷ ಭೋಗ್ಲೆ ಈ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಈಸ್ಟ್ ಜೋನ್ ತಂಡದಲ್ಲಿ ಸ್ಥಾನ ಪಡೆಯುವುದು ಯಾವುದೇ ಆಟಗಾರನಿಗೆ ಒಂದು ದೊಡ್ಡ ವಿಷಯವಾಗಿದೆ. ವೈಭವ್ ಇನ್ನೂ ಕ್ರಿಕೆಟ್ ಕಲಿಯುತ್ತಿರುವ ಆಟಗಾರ. ಹಿರಿಯರ ರೆಡ್ ಬಾಲ್ ತಂಡದ ಉಪನಾಯಕನಾಗಿ ಸೂರ್ಯವಂಶಿಯನ್ನು ಆಯ್ಕೆ ಮಾಡಲು ಕಾರಣ ಏನೆಂಬುದು ನನಗೆ ಅಚ್ಚರಿ ತಂದಿದೆ. ವೈಭವ್ ಕೇವಲ 12 ಇನಿಂಗ್ಸ್‌ಗಳಲ್ಲಿ 17.25 ರ ಸರಾಸರಿಯಲ್ಲಿ 207 ರನ್ ಮಾತ್ರ ಗಳಿಸಿದ್ದಾರೆ. ಅವರ ಪ್ರತಿಭೆ ಅಸಾಧಾರಣವಾಗಿದೆ. ಆದರೆ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಅವರು ಇನ್ನೂ ಬಹಳಷ್ಟು ಕಲಿಯಬೇಕಿದೆ ಎಂದು ಹರ್ಷ ಬೋಗ್ಲೆ ಹೇಳಿದ್ದಾರೆ.
ಅಂದಹಾಗೆ, ಕೇವಲ 15ನೇ ವಯಸ್ಸಿನಲ್ಲಿಯೇ ತನ್ನ ಅಸಾಧಾರಣ ಆತ್ಮವಿಶ್ವಾಸದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಯುವ ಕ್ರಿಕೆಟ್ ಸಂಚಲನ ವೈಭವ್ ಸೂರ್ಯವಂಶಿ, ಮುಂಬರುವ ದುಲೀಪ್ ಟ್ರೋಫಿ ಟೂರ್ನಿಗೆ ಈಸ್ಟ್ ಜೋನ್ ತಂಡದ ಉಪನಾಯಕನಾಗಿ ಆಯ್ಕೆಯಾಗುವ ಮೂಲಕ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದ್ದಾರೆ. ಇಶಾನ್ ಕಿಶನ್ ನಾಯಕತ್ವದ ಈ ಬಲಶಾಲಿ ತಂಡದಲ್ಲಿ ಕೇವಲ 15 ವರ್ಷದ ಯುವ ಆಟಗಾರನಿಗೆ ಈ ಜವಾಬ್ದಾರಿ ನೀಡಿರುವುದು ವಿಶೇಷ ದಾಖಲೆಯಾಗಿದೆ.
ಬಂಗಾಳ ಮತ್ತು ಜಾರ್ಖಂಡ್ ಆಟಗಾರರ ಪ್ರಾಬಲ್ಯವಿರುವ ಈ ತಂಡದಲ್ಲಿ ಬಿಹಾರದಿಂದ ಆಯ್ಕೆಯಾದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸೂರ್ಯವಂಶಿ, ರೆಡ್-ಬಾಲ್ ಟೂರ್ನಿಯಲ್ಲಿ ತಮ್ಮ ಚೊಚ್ಚಲ ಅವಕಾಶದಲ್ಲೇ ಉಪನಾಯಕನಾಗಿ ನೇಮಕಗೊಂಡಿರುವುದು ಅವರನ್ನು ಭವಿಷ್ಯದ ಎಲ್ಲಾ ಮಾದರಿಯ ಸ್ಟಾರ್ ಆಟಗಾರನನ್ನಾಗಿ ರೂಪಿಸುತ್ತಿರುವುದರ ಸ್ಪಷ್ಟ ಸೂಚಿಯಾಗಿದೆ. ಕೋಲ್ಕತದ ಈಡನ್ ಗಾರ್ಡನ್‌ನಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಈಸ್ಟ್ ಜೋನ್ ತಂಡದಲ್ಲಿ ಅನುಭವಿ ವೇಗಿ ಮೊಹಮ್ಮದ್ ಶಮಿ, ಅಂತಾರಾಷ್ಟ್ರೀಯ ಆಟಗಾರರಾದ ಮುಖೇಶ್ ಕುಮಾರ್, ಶಹಬಾಜ್ ಅಹ್ಮದ್ ಮತ್ತು ಮಾಜಿ ಇಂಡಿಯಾ ಎ ನಾಯಕ ಅಭಿಮನ್ಯು ಈಶ್ವರನ್ ಅವರಂತಹ ದಿಗ್ಗಜ್ಜರ ದೊಡ್ಡ ದಂಡೇ ಇದ್ದು, ನಾಯಕ ಇಶಾನ್ ಕಿಶನ್ ಜೊತೆಗೆ ಕುಮಾರ್ ಕುಶಾಗ್ರ ಹಾಗೂ ಅನುಕುಲ್ ರಾಯ್ ಕೂಡ ಸ್ಥಾನ ಪಡೆದಿದ್ದಾರೆ. ಇಂತಹ ಹಿರಿಯ ಆಟಗಾರರಿರುವ ತಂಡಕ್ಕೆ ಹದಿಹರೆಯದ ವೈಭವ್ ಉಪನಾಯಕನಾಗಿರುವುದು ನಿಜಕ್ಕೂ ಒಂದು ಸಾಧನೆಯಾಗಿದೆ.
ಬಿಹಾರ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಹರ್ಷವರ್ಧನ್ ಮಾತನಾಡಿ, ಇಷ್ಟು ಚಿಕ್ಕ ವಯಸ್ಸಿನಲ್ಲಿ ವೈಭವ್ ಈಸ್ಟ್ ಜೋನ್ ತಂಡದ ಉಪನಾಯಕನಾಗಿರುವುದು ಬಿಹಾರ ಕ್ರಿಕೆಟ್‌ಗೆ ಹೆಮ್ಮೆಯ ವಿಷಯ ಎಂದಿದ್ದಾರೆ. ಆಗಸ್ಟ್ 23 ರಿಂದ ಸೆಪ್ಟೆಂಬರ್ 6 ರವರೆಗೆ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆಯಲಿರುವ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಸೂರ್ಯವಂಶಿ ತಮ್ಮ ಅದ್ಭುತ ಆಟ ಮುಂದುವರಿಸಲು ಸಜ್ಜಾಗಿದ್ದಾರೆ, (ಏಜೆನ್ಸೀಸ್).