- ಭಾರತ ಕ್ರಿಕೆಟ್ ತಂಡ ಕಂಡ ಅತ್ಯುತ್ತಮ ಆಲ್ರೌಂಡರ್ ಯುವರಾಜ್ ಸಿಂಗ್
- ಕ್ಯಾನ್ಸರ್ ನಡುವೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಆಟಗಾರ
- ನನಗೆ ದೊರೆಯಬೇಕಾದ ಗೌರವ, ಬೆಂಬಲ ಸಿಗದ ಕಾರಣ ಕ್ರಿಕೆಟ್ಗೆ ವಿದಾಯ ಹೇಳಿದೆ: ಯುವಿ
ಕ್ರಿಕೆಟ್: ಭಾರತೀಯ ಪುರುಷ ಕ್ರಿಕೆಟ್ ತಂಡ ಕಂಡ ಅತ್ಯುತ್ತಮ ಆಲ್ರೌಡರ್ ಆಟಗಾರ ಯಾರೆಂದು ಕೇಳಿದರೆ ನೂರರಲ್ಲಿ ಎಂಭತ್ತು ಪ್ರತಿಶತ ಜನ ಯುವರಾಜ್ ಸಿಂಗ್ (Yuvraj Singh) ಹೆಸರೇ ಹೇಳುತ್ತಾರೆ.
ಭಾರತ ತಂಡದ ಪರ ಬಿಳಿ ಚೆಂಡಿನ ಕ್ರಿಕೆಟ್ನಲ್ಲಿ ಆಡಿದ ಶ್ರೇಷ್ಠ ಆಟಗಾರರಲ್ಲಿ ಯುವರಾಜ್ ಒಬ್ಬರೆಂದು ನಿಸಂಶಯವಾಗಿ ಹೇಳಬಹುದು. 2007 ರ ಐಸಿಸಿ ಟಿ20 ವಿಶ್ವಕಪ್ ಮತ್ತು 2011 ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಯುವಿಯದ್ದು ಸಿಂಹಪಾಲು. 2011 ರ ವಿಶ್ವಕಪ್‌ನಲ್ಲಿ ಯುವರಾಜ್ ಪ್ಲೇಯರ್-ಆಫ್-ದಿ-ಟೂರ್ನಮೆಂಟ್ ಪ್ರಶಸ್ತಿಯನ್ನು ಗೆದ್ದು, ಭಾರತವು ತವರಿನಲ್ಲಿ ವಿಶ್ವಕಪ್ ಗೆದ್ದ ಮೊದಲ ತಂಡವಾಯಿತು.
ಯುವರಾಜ್ ಅವರ ಕೊಡುಗೆಯನ್ನು ಇನ್ನಷ್ಟು ಸ್ಮರಣೀಯವಾಗಿಸಿದ ಸಂಗತಿಯೆಂದರೆ, ಆ ಹಂತದಲ್ಲಿ ಅವರು ಕ್ಯಾನ್ಸರ್ ವಿರುದ್ಧ ಮೌನವಾಗಿ ಹೋರಾಡುತ್ತಿದ್ದರು ಎಂಬುದು ಟೂರ್ನಾಮೆಂಟ್ ಮುಗಿದ ನಂತರ ಬಹಿರಂಗವಾಯಿತು. ಇಷ್ಟೇಲ್ಲಾ ಸಾಧನೆ ಮತ್ತು ಕ್ರೀಡಾ ಜೀವನದ ಉತ್ತುಂಗದಲ್ಲಿದ್ದ ಯುವಿ ಕ್ರಿಕೆಟ್ಗೆ ವಿದಾಯ ಹೇಳಲು ಮುಂದಾದರೂ, ಮತ್ತು ಅವರಿಗೆ ಸಿಗಬೇಕಾದ ರೀತಿಯಲ್ಲಿ ವಿದಾಯ ದೊರೆಯಲಿಲ್ಲ ಎನ್ನುವ ಕುರಿತು ಇಂದಿಗೂ ಅವರ ಅಭಿಮಾನಿಗಳಿಗೆ ಬೇಸರವಿದೆ.
ತಮ್ಮ ಕ್ರಿಕೆಟ್ ವಿದಾಯದ ಕುರಿತು ಮೌನ ಮುರಿದಿರುವ ಯುವರಾಜ್ ಸಿಂಗ್, ಸಾನಿಯಾ ಮಿರ್ಜಾ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ನೀಡಿದ ಸಂದರ್ಶನದಲ್ಲಿ, ನಾನು ನನ್ನ ಆಟವನ್ನು ಆನಂದಿಸುತ್ತಿರಲಿಲ್ಲ, ನಾನೇ ನನ್ನ ಆಟವನ್ನು ಮೆಚ್ಚದಿದ್ದಾಗ ಏಕೆ ಆಡಬೇಕು? ಇದರಿಂದಾಗಿ ನನಗೆ ಸರಿಯಾದ ಗೌರವ ಮತ್ತು ಬೆಂಬಲ ದೊರೆಯಲಿಲ್ಲ ಎಂದು ಭಾಸವಾದ ಹಿನ್ನಲೆ ಕ್ರಿಕೆಟ್ಗೆ ವಿದಾಯ ಹೇಳುವುದೇ ಉತ್ತಮವೆನಿಸಿತು ಎಂದು ಹೇಳಿದ್ದಾರೆ.
ನಾನು ಆನಂದಿಸದ ವಿಷಯದಲ್ಲಿ ನಾನು ಏಕೆ ಕಾಲಹರಣ ಮಾಡುತ್ತಿದ್ದೇನೆ? ನಾನು ಏಕೆ ಆಡಬೇಕು? ಏನು ಸಾಬೀತುಪಡಿಸಲು? ನಾನು ಮಾನಸಿಕವಾಗಿ ಅಥವಾ ದೈಹಿಕವಾಗಿ ಇದಕ್ಕಿಂತ ಹೆಚ್ಚಿನದನ್ನು ಮಾಡಲು ಸಾಧ್ಯವಿಲ್ಲ ಎನ್ನುವುದು ನನಗೆ ನೋವುಂಟು ಮಾಡುತ್ತಿತ್ತು ಎಂದು ಅವರು ಹೇಳಿದ್ದಾರೆ.
ಈ ವೇಳೆ ತಮ್ಮ ಬಾಲ್ಯದಲ್ಲಿ ಘಟಿಸಿದ ಘಟನೆಯೊಂದನ್ನು ನೆನಪಿಸಿಕೊಂಡ ಯುವರಾಜ್, ನನಗೆ ಆಗ 13-14 ವಯಸ್ಸು, ಆಗ ಭಾರತ ತಂಡದ ಪರ ಆಡುತ್ತಿದ್ದ ನವಜೋತ್ ಸಿಂಗ್ ಸಿಧು (ಸಿಕ್ಸರ್ ಸಿಧು) ನನ್ನ ಆಟವನ್ನು ತಿರಸ್ಕರಿಸಿದ್ದರು. ನನಗೆ ಈ ಬಗ್ಗೆ ಯಾವುದೇ ಬೇಸರವಿರಲಿಲ್ಲ, ನಾನಿನ್ನೂ ಚಿಕ್ಕ ಹುಡುಗನಿದ್ದ ಕಾರಣ ಕ್ರಿಕೆಟ್ನ್ನು ಕೇವಲ ಮೋಜಿಗಾಗಿ ಆಡುತ್ತಿದ್ದೆ. ಆದರೆ ಈ ಘಟನೆ ನನ್ನ ತಂದೆ ಯೋಗರಾಜ್ ಸಿಂಗ್ಗೆ ಬಹಳ ಕೋಪ ತರಿಸಿತು, ಮತ್ತು ಅವರು ಇದನ್ನು ವೈಯಕ್ತಿಕ ಪ್ರತಿಷ್ಠೆಗೆ ಬಿದ್ದ ಏಟೆಂದು ಭಾವಿಸಿದರು.
ಆಗ ನನ್ನ ತಂದೆ ಚಲ್ ಬೇಟಾ ಮೇ ತುಜೆ ಬಟಾತಾ ಹೂ ಕ್ರಿಕೆಟ್ ಕೈಸೆ ಖೇಲ್ತೆ ಹೈ ( ಬಾ ಮಗನೆ ನಾನು ನಿನಗೆ ಕ್ರಿಕೆಟ್ನ್ನು ಹೇಗೆ ಆಡುವುದು ಎಂದು ಹೇಳಿಕೊಡುತ್ತೇನೆ) ಎಂದು ಹೇಳಿದ್ದರು ಎಂದ ಯುವಿ, ತಮ್ಮ ಕ್ರಿಕೆಟ್ ಪಯಣದ ಮೊದಲ ಹೆಜ್ಜೆ ಕುರಿತು ವಿವರಿಸಿದರು,(ಏಜನ್ಸೀಸ್).