ಯಾವುದನ್ನೂ ನಂಬಬೇಡಿ ನಾನು ಆ ರೀತಿ ಹೇಳೇ ಇಲ್ಲ... ಆಕ್ರೋಶ ಹೊರಹಾಕಿದ ಸೂರ್ಯಕುಮಾರ್ ಯಾದವ್! Surya Kumar Yadav
- ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ನಕಲಿ ಸ್ಟೇಟ್‌ಮೆಂಟ್‌ಗೆ ಸೂರ್ಯ ಬ್ರೇಕ್
- ಸಿಗಬೇಕಾದ ಗೌರವ ಸಿಗಲಿಲ್ಲ ಅನ್ನೋದು ಸಂಪೂರ್ಣ ಸುಳ್ಳು ಎಂದ ಟಿ20 ತಂಡದ ಮಾಜಿ ನಾಯಕ
- ಟೀಮ್ ಇಂಡಿಯಾ ಮತ್ತು ನನ್ನ ಸಹ ಆಟಗಾರರಿಗೆ ನನ್ನ ಬೆಂಬಲ ಸದಾ ಇರುತ್ತೆ ಎಂದ ಸೂರ್ಯ
- ಇತಿಹಾಸ ಸೃಷ್ಟಿಸಿದ ಕಿರಿಯ ಆಟಗಾರ ವೈಭವ್ ಸೂರ್ಯವಂಶಿ ಬೆನ್ನು ತಟ್ಟಿದ ಸೂರ್ಯಕುಮಾರ್ ಯಾದವ್
Surya Kumar Yadav : ಟೀಮ್ ಇಂಡಿಯಾವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಬೆನ್ನಲ್ಲೇ ನಾಯಕತ್ವ ಕಳೆದುಕೊಂಡು ತಂಡದಿಂದ ಹೊರಬಿದ್ದಿರುವ ಸ್ಟಾರ್ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್, ತಮ್ಮ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ತಮ್ಮ ನಾಯಕತ್ವದಲ್ಲೇ ಭಾರತಕ್ಕೆ 2026ರ ಟಿ20 ವಿಶ್ವಕಪ್ ಟ್ರೋಫಿ ತಂದುಕೊಟ್ಟಿದ್ದರೂ, ತದನಂತರದ ದಿನಗಳಲ್ಲಿ ಆಯ್ಕೆಗಾರರು ಇವರನ್ನು ದಿಢೀರ್ ಕೈಬಿಟ್ಟು ಶ್ರೇಯಸ್ ಅಯ್ಯರ್‌ಗೆ ನಾಯಕತ್ವದ ಪಟ್ಟ ಕಟ್ಟಿದ್ದರು. ಸದ್ಯ ಭಾರತ ಟಿ20 ತಂಡದಲ್ಲಿ ಸ್ಥಾನ ವಂಚಿತರಾಗಿದ್ದರೂ ಸಹ, ಟೀಮ್ ಇಂಡಿಯಾ ಮೇಲಿನ ತಮ್ಮ ಅಪಾರ ಪ್ರೀತಿಯನ್ನು ವ್ಯಕ್ತಪಡಿಸಿರುವ ಸೂರ್ಯಕುಮಾರ್, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಸರಿನಲ್ಲಿ ವೈರಲ್ ಆಗುತ್ತಿರುವ ಯಾವುದೇ ನಕಲಿ ಜಾಹೀರಾತುಗಳು ಹಾಗೂ ಸುಳ್ಳು ಪ್ರಚಾರಗಳನ್ನು ಸಾರ್ವಜನಿಕರು ನಂಬದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ತಮ್ಮ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಜಾಹೀರಾತಿನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸ್ಟಾರ್ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್, ಈ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಅಧಿಕೃತ ಸ್ಪಷ್ಟನೆ ನೀಡಿದ್ದಾರೆ. ನನ್ನ ಹೆಸರನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ ಜಾಹೀರಾತೊಂದನ್ನು ಹಂಚಿಕೊಳ್ಳಲಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ, ಆದರೆ ಅದು ಸಂಪೂರ್ಣವಾಗಿ ಸುಳ್ಳು ಮತ್ತು ನಿರಾಧಾರವಾಗಿದೆ. ನಾನು ಅಂತಹ ಯಾವುದೇ ಹೇಳಿಕೆ ಅಥವಾ ಕಮೆಂಟ್‌ಗಳನ್ನು ಮಾಡಿಲ್ಲ. ಸಾರ್ವಜನಿಕರು ಹಾಗೂ ಅಭಿಮಾನಿಗಳು ಇಂತಹ ಯಾವುದೇ ಪರಿಶೀಲಿಸದ ಸುಳ್ಳು ಮಾಹಿತಿಯನ್ನು ನಂಬಬೇಡಿ ಮತ್ತು ಶೇರ್ ಮಾಡಬೇಡಿ ಎಂದು ಸೂರ್ಯ ವಿನಂತಿಸಿಕೊಂಡಿದ್ದಾರೆ.
ಇದೇ ವೇಳೆ ಸದ್ಯ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದರೂ ಸಹ ತಂಡದ ಮೇಲಿನ ತಮ್ಮ ನಿಷ್ಠೆಯನ್ನು ಮೆರೆದಿರುವ ಅವರು, ಭಾರತೀಯ ಕ್ರಿಕೆಟ್ ಹಾಗೂ ನನ್ನ ಸಹ ಆಟಗಾರರಿಗೆ ನನ್ನ ಬೆಂಬಲ ಮತ್ತು ಪ್ರೀತಿ ಯಾವಾಗಲೂ ಇದ್ದೇ ಇರುತ್ತದೆ ಎಂದು ಭಾವುಕರಾಗಿ ನುಡಿದಿದ್ದಾರೆ. ಪ್ರಸ್ತುತ ಭಾರತೀಯ ತಂಡದಲ್ಲಿರುವ ಆಟಗಾರರು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ ಎಂದು ಶ್ಲಾಘಿಸಿರುವ ಸೂರ್ಯಕುಮಾರ್, ಮೈದಾನದಲ್ಲಿ ದೇಶಕ್ಕಾಗಿ ಆಡುತ್ತಿರುವ ತಂಡಕ್ಕೆ ತಮ್ಮ ಸಂಪೂರ್ಣ ಬೆಂಬಲ ಸದಾ ಇರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ವಿಶ್ವಕಪ್ ಗೆದ್ದರೂ ತಮಗೆ ಟಿ20 ತಂಡದಲ್ಲಿ ಸ್ಥಾನ ನೀಡದ ಕಾರಣ ಸೂರ್ಯಕುಮಾರ್ ಯಾದವ್ ಅಸಮಾಧಾನಗೊಂಡಿದ್ದಾರೆ ಎಂಬರ್ಥದಲ್ಲಿ ಕೆಲವು ಇನ್‌ಸ್ಟಾಗ್ರಾಮ್ ಪೇಜ್‌ಗಳು ಸುಳ್ಳು ಸುದ್ದಿಯೊಂದನ್ನು ಸೃಷ್ಟಿಸಿ ಹರಿಬಿಟ್ಟಿದ್ದವು. ವಿಶ್ವಕಪ್ ಗೆದ್ದ ನಂತರ ನಾನೇ ನಾಯಕನಾಗಿ ಮುಂದುವರಿಯಲಿದ್ದೇನೆ ಎಂದು ಆಯ್ಕೆಗಾರರು ಹೇಳಿದ್ದರು, ಆದರೆ ಕೊನೆಯ ಕ್ಷಣದಲ್ಲಿ ತಂಡದಲ್ಲಿ ನನ್ನ ಹೆಸರೇ ಇಲ್ಲದಿರುವುದು ನನಗೆ ತಿಳಿಯಿತು. ಕನಿಷ್ಠ ನನ್ನ ಭವಿಷ್ಯದ ಬಗ್ಗೆಯೂ ನನಗೆ ಸ್ಪಷ್ಟತೆ ನೀಡಲಿಲ್ಲ. ನನಗೆ ಸಿಗಬೇಕಾದ ಗೌರವ ಸಿಗಲಿಲ್ಲ ಎಂದು ಸೂರ್ಯಕುಮಾರ್ ಹೇಳಿಕೆ ನೀಡಿದ್ದಾರೆಂಬ ಸುಳ್ಳು ಪೋಸ್ಟ್ ಭಾರಿ ವೈರಲ್ ಆಗಿತ್ತು, ಆದರೆ, ಸೂರ್ಯಕುಮಾರ್ ಯಾದವ್ ಈ ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ.
ಇದೇ ಎಕ್ಸ್ (ಟ್ವಿಟರ್) ಪೋಸ್ಟ್‌ನಲ್ಲಿ ಸೂರ್ಯಕುಮಾರ್ ಯಾದವ್ ಅವರು ಟೀಮ್ ಇಂಡಿಯಾದ 15 ವರ್ಷದ ಯುವ ಆಶಾಕಿರಣ ವೈಭವ್ ಸೂರ್ಯವಂಶಿ ಅವರನ್ನು ಪ್ರತ್ಯೇಕವಾಗಿ ಶ್ಲಾಘಿಸಿ, ಅಭಿನಂದಿಸಿದ್ದಾರೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ಪ್ರವಾಸದ ವೇಳೆ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ವೈಭವ್, ಭಾರತದ ಪರ ಅತ್ಯಂತ ಕಿರಿಯ ವಯಸ್ಸಿನಲ್ಲಿ ಚೊಚ್ಚಲ ಪಂದ್ಯ ಆಡಿದ ಆಟಗಾರ ಎಂಬ ಐತಿಹಾಸಿಕ ದಾಖಲೆ ಬರೆದಿದ್ದಾರೆ. ವೈಭವ್ ಅವರ ವೃತ್ತಿಜೀವನ ಅದ್ಭುತವಾಗಿ ಮೂಡಿಬರಲಿ ಹಾಗೂ ದೇಶ ಹೆಮ್ಮೆಪಡುವಂತೆ ಅವರು ಕ್ರಿಕೆಟ್‌ನಲ್ಲಿ ಮಿಂಚಲಿ ಎಂದು ಸೂರ್ಯ ಶುಭ ಹಾರೈಸಿದ್ದಾರೆ.
ಮತ್ತೊಂದೆಡೆ, ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡ ತೀವ್ರ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಅಯ್ಯರ್ ನಾಯಕತ್ವ ವಹಿಸಿಕೊಂಡ ನಂತರ ಭಾರತ ತಂಡ ಆಡಿರುವ ನಾಲ್ಕೂ ಪಂದ್ಯಗಳಲ್ಲಿ ಒಂದರಲ್ಲೂ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಇದಕ್ಕೂ ಮುನ್ನ ಐರ್ಲೆಂಡ್ ವಿರುದ್ಧ ನಡೆದಿದ್ದ ಎರಡು ಪಂದ್ಯಗಳ ಟಿ20 ಸರಣಿಯಲ್ಲೂ ಭಾರತ ಕ್ಲೀನ್ ಸ್ವೀಪ್ ಮುಖಭಂಗ ಅನುಭವಿಸಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.
ಒಟ್ಟಾರೆಯಾಗಿ, ತಮ್ಮ ಹೆಸರಿನಲ್ಲಿ ಹರಡುತ್ತಿರುವ ಸುಳ್ಳು ಪ್ರಚಾರಗಳಿಗೆ ತೆರೆ ಎಳೆದಿರುವ ಸೂರ್ಯಕುಮಾರ್, ಪ್ರಸ್ತುತ ಸರಣಿಗಳಲ್ಲಿ ಕಠಿಣ ಸವಾಲು ಎದುರಿಸುತ್ತಿರುವ ಟೀಮ್ ಇಂಡಿಯಾ ಮತ್ತು ತಂಡದ ಯುವ ಆಟಗಾರರ ಬೆನ್ನೆಲುಬಾಗಿ ತಾವು ಸದಾ ನಿಲ್ಲುವುದಾಗಿ ಸಾರುವ ಮೂಲಕ ತಮ್ಮ ಕ್ರೀಡಾ ಮನೋಭಾವವನ್ನು ಮೆರೆದಿದ್ದಾರೆ, (ಏಜೆನ್ಸೀಸ್).