ದೇಶೀಯ ಮಹಿಳಾ ಕ್ರಿಕೆಟಿಗರ ವೇತನ ದುಪ್ಪಟ್ಟು!
ನವದೆಹಲಿ: ದೇಶೀಯ ಮಹಿಳಾ ಕ್ರಿಕೆಟಿಗರು (domestic women cricket) ಮತ್ತು ದೇಶೀಯ ಕ್ರಿಕೆಟ್ ಅಂಪೈರ್, ರೆಫ್ರಿಗಳ ವೇತನವನ್ನು ಬಿಸಿಸಿಐ, ದುಪ್ಪಟ್ಟಿಗಿಂತಲೂ ಹೆಚ್ಚು ಏರಿಕೆ ಮಾಡಿದೆ. ಏಕದಿನ ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಮಹಿಳಾ ಕ್ರಿಕೆಟಿಗರಿಗೆ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಸಿಹಿ ಸುದ್ದಿ ನೀಡಲಾಗಿದೆ.
ಸೀನಿಯರ್ ಮಹಿಳಾ ದೇಶೀಯ ಕ್ರಿಕೆಟಿಗರು ಏಕದಿನ ಮತ್ತು ಬಹುದಿನಗಳ ಪಂದ್ಯದ ವೇಳೆ ಇನ್ನು ಪ್ರತಿ ದಿನಕ್ಕೆ 50 ಸಾವಿರ ರೂ. ವೇತನ ಪಡೆಯಲಿದ್ದಾರೆ. ಇದುವರೆಗೆ 20 ಸಾವಿರ ರೂ. ಪಡೆಯುತ್ತಿದ್ದರು. ಇನ್ನು ತಂಡಗಳ ಮೀಸಲು ಆಟಗಾರ್ತಿಯರಿಗೆ ಪ್ರತಿದಿನಕ್ಕೆ 25 ಸಾವಿರ ರೂ. ಸಿಗಲಿದೆ. ಇದುವರೆಗೆ 10 ಸಾವಿರ ರೂ. ಪಡೆಯುತ್ತಿದ್ದರು. ಟಿ20 ಪಂದ್ಯಗಳಿಗೆ 11ರ ಬಳಗದಲ್ಲಿದ್ದರೆ ತಲಾ 25 ಸಾವಿರ ರೂ. ಮತ್ತು ಮೀಸಲು ಬಳಗದಲ್ಲಿದ್ದರೆ 12,500 ರೂ. ಪಡೆಯಲಿದ್ದಾರೆ. ಇದರಿಂದ ಋತುವಿನ ಎಲ್ಲ ಪಂದ್ಯ ಆಡುವ ಆಟಗಾರ್ತಿ 12ರಿಂದ 14 ಲಕ್ಷ ರೂ. ಗಳಿಸಲಿದ್ದಾರೆ.
23, 19 ವಯೋಮಿತಿ ವಿಭಾಗದ ಆಟಗಾರ್ತಿಯರೂ ಇನ್ನು 25 ಸಾವಿರ ರೂ. ಪಡೆಯಲಿದ್ದಾರೆ. ದೇಶೀಯ ಲೀಗ್ ಪಂದ್ಯಗಳ ಅಂಪೈರ್, ರೆಫ್ರಿಗಳ ಪ್ರತಿದಿನದ ವೇತನವನ್ನೂ 40 ಸಾವಿರ ರೂ.ಗೆ ಏರಿಸಲಾಗಿದೆ. ನಾಕೌಟ್ ಪಂದ್ಯಗಳಿಗೆ 50ರಿಂದ 60 ಸಾವಿರ ರೂ. ಪಡೆಯಲಿದ್ದಾರೆ.