ಆರ್ಸಿಬಿ ಕಾಲ್ತುಳಿತ ಸಂದರ್ಭ
- ಕಾಲ್ತುಳಿತ ದುರಂತದಿಂದ ಬೇಡವಾದ ಚಿನ್ನಸ್ವಾಮಿ ಸ್ಡೇಡಿಯಂ
- 18ನೇ ಆವೃತ್ತಿಯಲ್ಲಿ ವಿಜಯ, 11 ದುರಂತ ಸಾವು
IPL 2026: ಮುಂಬರುವ ಟಿ20 ವಿಶ್ವಕಪ್ ಫೈನಲ್ಗೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣವನ್ನು (M Chinnaswamy Stadium) ಆಯ್ಕೆ ಮಾಡಬೇಕಿದ್ದ ಬಿಸಿಸಿಐ, ಇದೀಗ ಬೆಂಗಳೂರನ್ನು ಲೆಕ್ಕಕ್ಕೆ ಪರಿಗಣಿಸದೆ, ಫೈನಲ್ ಆತಿಥ್ಯ ವಹಿಸಲು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣವನ್ನು ಆಯ್ಕೆ ಮಾಡಿಕೊಂಡಿದೆ. ಇದರ ಬೆನ್ನಲ್ಲೇ 2026ರ ಐಪಿಎಲ್ ಪಂದ್ಯಗಳಿಗೂ ಚಿನ್ನಸ್ವಾಮಿ ಸ್ಟೇಡಿಯಂ ಅನ್ನು ಕೈಬಿಡಲು ನಿರ್ಧರಿಸಲಾಗಿದೆ ಎಂದು ಕ್ರಿಕೆಟ್ ವರದಿಗಳು ಸೂಚಿಸಿವೆ.
18ನೇ ಆವೃತ್ತಿ ಗೆದ್ದ ಆರ್ಸಿಬಿ ವಿಜಯೋತ್ಸವದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಯಿತು. ಅಂದಿನಿಂದ ಈ ಸ್ಡೇಡಿಯಂನತ್ತ ತಿರುಗಿ ನೋಡದ ಬಿಸಿಸಿಐ, ಇಲ್ಲಿ ಯಾವುದೇ ಪಂದ್ಯಗಳನ್ನಾಡಿಸಲು ಇಚ್ಛಿಸುತ್ತಿಲ್ಲ. ಇದು ಮುಂಬರುವ ಐಪಿಎಲ್ ಆವೃತ್ತಿಗೂ ಅನ್ವಯವಾಗಿದೆ. ವರದಿಗಳ ಪ್ರಕಾರ, ಕಾಲ್ತುಳಿತ ಸಂಭವಿಸಿದ ಬಳಿಕ ಕೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸಲು ಅಧಿಕಾರಿಗಳಿಂದ ಅನುಮತಿ ಲಭಿಸಿಲ್ಲ. ಈ ಎಲ್ಲ ಬೆಳವಣಿಗೆಗಳ ನಡುವೆ 2026ರ ಐಪಿಎಲ್ ಪಂದ್ಯಗಳಿಗೆ ಅಡ್ಡಿಯಾಗಲು ಪುಷ್ಠಿ ನೀಡಿರುವುದು ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಯಿಂದ ಬೆಂಗಳೂರನ್ನು ಕೈಬಿಟ್ಟಿರುವುದು.
18ನೇ ಆವೃತ್ತಿಯಲ್ಲಿ ವಿಜಯ, 11 ದುರಂತ ಸಾವು
ಪ್ರತಿವರ್ಷ ಐಪಿಎಲ್‌ನಲ್ಲಿ, ಎಂ.ಚಿನ್ನಸ್ವಾಮಿ ಕ್ರೀಡಾಂಗಣವು ತನ್ನ ಫ್ರಾಂಚೈಸಿಯ 7 ಲೀಗ್ ಪಂದ್ಯಗಳನ್ನು ಆಯೋಜಿಸುತ್ತದೆ. ಇದರೊಟ್ಟಿಗೆ 2014 ಮತ್ತು 2016ರಲ್ಲಿ ಐಪಿಎಲ್ ಫೈನಲ್ ಪಂದ್ಯಗಳನ್ನೂ ಆಯೋಜಿಸಿತ್ತು. ಹೀಗಿರುವಾಗ 2025ರ ಜೂನ್ 04ರಂದು ಸಂಭವಿಸಿದ ಕಾಲ್ತುಳಿತ ದುರಂತ ಸದ್ಯ ಬೆಂಗಳೂರು ಸ್ಟೇಡಿಯಂಗೆ ದೊಡ್ಡ ಕಪ್ಪು ಚುಕ್ಕೆಯಾಗಿದೆ. ಈ ಭೀಕರ ದುರಂತದಲ್ಲಿ 11 ಅಭಿಮಾನಿಗಳು ಸಾವಿಗೀಡಾಗಿದ್ದು, ಅತೀವ ದುಃಖಕ್ಕೆ ಕಾರಣವಾಯಿತು. ಇದೊಂದು ದುರ್ಘಟನೆಯಿಂದ ಚಿನ್ನಸ್ವಾಮಿ ಕ್ರೀಡಾಂಗಣವನ್ನು ಆಯ್ಕೆ ಮಾಡದಿರಲು ಅಧಿಕಾರಿಗಳು ನಿರ್ಧರಿಸಿರುವುದು ನಿಜಕ್ಕೂ ಬೇಸರದ ಸಂಗತಿಯೇ.
ಜೂನ್ 04ರಂದು ಆಗಿದ್ದೇನು?
2025ರ ಜೂನ್ 03ರಂದು ಐಪಿಎಲ್ 18ನೇ ಆವೃತ್ತಿಯ ಟ್ರೋಫಿ ಎತ್ತಿಹಿಡಿದ ಆರ್ಸಿಬಿ, ಲೀಗ್ ಇತಿಹಾಸದಲ್ಲಿ ತನ್ನ ಚೊಚ್ಚಲ ಕಪ್ಗೆ ಮುತ್ತಿಟ್ಟಿತು. ಗೆದ್ದ ಮರುದಿನವೇ ಜೂ.04ರಂದು ಬೆಂಗಳೂರಿಗೆ ಆಗಮಿಸಿದ ಫ್ರಾಂಚೈಸಿ ಆಟಗಾರರು, ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮಕ್ಕೆ ಆಗಮಿಸಿ, ದೊಡ್ಡ ಕಾಲ್ತುಳಿತ ಘಟನೆಗೆ ಪರೋಕ್ಷವಾಗಿ ಸಾಕ್ಷಿಯಾಯಿತು. ಈ ಭೀಕರ ಘಟನೆಯಲ್ಲಿ 11 ಅಭಿಮಾನಿಗಳು ಮೃತಪಟ್ಟ ಹಿನ್ನೆಲೆ ಆರ್ಸಿಬಿ ಮಾಲೀಕರು, ಆಯೋಜಕರ ವಿರುದ್ಧ ಕೇಸ್ ದಾಖಲಾಯಿತು. ಪ್ರಕರಣ ಕೋರ್ಟ್ ಮೆಟ್ಟಿಲೇರಿತು. ಈ ಘಟನೆಯಿಂದ ಫ್ರಾಂಚೈಸಿ ಮತ್ತು ಕ್ರೀಡಾಂಗಣಕ್ಕೆ ಒಂದು ಕಪ್ಪುಚುಕ್ಕೆ ಅಂಟಿರುವುದಂತು ಸ್ಪಷ್ಟ ಎಂದೇ ಹೇಳಬಹುದು,(ಏಜೆನ್ಸೀಸ್).