ಭಾರತೀಯ ಮಹಿಳಾ ತಂಡ 
ಕ್ರಿಕೆಟ್

ಟೀಮ್ ಇಂಡಿಯಾ ಮಹಿಳಾ ವಿಶ್ವಕಪ್​ ಗೆದ್ದರೆ 125 ಕೋಟಿ ರೂ. ಕೊಡಲು ಬಿಸಿಸಿಐ ರೆಡಿ!? ಹೀಗಿದೆ ವರದಿ | BCCI

ಪ್ರಮುಖ ಮುಖ್ಯಾಂಶಗಳು

  • ದಕ್ಷಿಣ ಆಫ್ರಿಕಾ ತಂಡದೊಂದಿಗೆ ಟ್ರೋಫಿಗಾಗಿ ಅಂತಿಮ ಹಣಾಹಣಿ ನಡೆಸಲಿದೆ
  • ಬಿಸಿಸಿಐ ಬರೋಬ್ಬರಿ 125 ಕೋಟಿ ರೂ. ಹಣವನ್ನು ಬಹುಮಾನ ರೂಪದಲ್ಲಿ ನೀಡಲು ಚಿಂತಿಸಿದೆ
  • ಸಮಾನ ವೇತನ ಕೊಡಲು ನಿರ್ಧಾರ
ನವದೆಹಲಿ: ಅ.30ರಂದು ಆಸೀಸ್ ವಿರುದ್ಧದ ಮಹಿಳಾ ಏಕದಿನ ವಿಶ್ವಕಪ್​ ಟೂರ್ನಿಯ ಸೆಮಿಫೈನಲ್​ ಪಂದ್ಯದಲ್ಲಿ 339 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ಟೀಮ್ ಇಂಡಿಯಾ, ಐದು ವಿಕೆಟ್​ಗಳಿಂದ ರೋಚಕ ಜಯ ಸಾಧಿಸಿತು. ನಿರ್ಣಾಯಕ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ ಹರ್ಮನ್​ಪ್ರೀತ್ ಕೌರ್​ ಪಡೆ, ನಾಳೆ (ನ.02) ನವಿಮುಂಬೈನ ಡಿವೈ ಪಾಟೀಲ್​ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ತಂಡದೊಂದಿಗೆ ಟ್ರೋಫಿಗಾಗಿ ಅಂತಿಮ ಹಣಾಹಣಿ ನಡೆಸಲಿದೆ.
ಇನ್ನು ಟೂರ್ನಿಯಲ್ಲಿ ಗೆಲುವು-ಸೋಲಿನ ರುಚಿಯನ್ನು ಸಮವಾಗಿ ನೋಡಿರುವ ಟೀಮ್ ಇಂಡಿಯಾ, 2025ರ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯನ್ನು ಗೆದ್ದು ಬರಲಿ ಎಂದು ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಆಶಿಸಿದ್ದಾರೆ. ಈ ಮಧ್ಯೆ, ಹೊಸ ಸುದ್ದಿಯೊಂದು ನೆಟ್ಟಿಗರ ಕುತೂಹಲ ಕೆರಳಿಸಿದ್ದು, ಫೈನಲ್​ ಪಂದ್ಯದಲ್ಲಿ ಮಹಿಳೆಯರ ತಂಡ ಗೆಲುವು ಸಾಧಿಸಿದರೆ, ಅವರಿಗೆ ಬಿಸಿಸಿಐ ಬರೋಬ್ಬರಿ 125 ಕೋಟಿ ರೂ. ಹಣವನ್ನು ಬಹುಮಾನ ರೂಪದಲ್ಲಿ ನೀಡಲು ಚಿಂತಿಸಿದೆ ಎಂದು ಕ್ರಿಕೆಟ್​ ವರದಿಗಳು ಉಲ್ಲೇಖಿಸಿವೆ.

ಸಮಾನ ವೇತನ

ಬಿಸಿಸಿಐ ಕಾರ್ಯದರ್ಶಿ ಮತ್ತು ಈಗಿನ ಐಸಿಸಿ ಅಧ್ಯಕ್ಷರಾಗಿರುವ ಜಯ್ ಶಾ ಪ್ರತಿಪಾದಿಸಿದ ಸಮಾನ ವೇತನ ನೀತಿ ಅಡಿಯಲ್ಲಿ, ಕಳೆದ ವರ್ಷ ನಡೆದ ಟಿ20 ವಿಶ್ವಕಪ್ ಗೆದ್ದ ರೋಹಿತ್ ಶರ್ಮ ನೇತೃತ್ವದ ತಂಡಕ್ಕೆ ನೀಡಿದ ಬಹುಮಾನ ಮೊತ್ತವನ್ನೇ ಮಹಿಳೆಯರ ತಂಡಕ್ಕೂ ಕೊಡುವ ಬಗ್ಗೆ ಉನ್ನತ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. 2024ರಲ್ಲಿ ಇದೇ ದಕ್ಷಿಣ ಆಫ್ರಿಕಾ ಪುರುಷರ ತಂಡವನ್ನು ಟಿ20 ವಿಶ್ವಕಪ್​ ಫೈನಲ್​ನಲ್ಲಿ ಮಣಿಸಿದ ರೋಹಿತ್ ಶರ್ಮ ನೇತೃತ್ವದ ಭಾರತ ತಂಡಕ್ಕೆ ಮತ್ತು ಸಹಾಯಕ ಸಿಬ್ಬಂದಿ ವರ್ಗಕ್ಕೆ 125 ಕೋಟಿ ರೂ. ಬಹುಮಾನ ಹಣವನ್ನು ಬಿಸಿಸಿಐ ಘೋಷಿಸಿತ್ತು,(ಏಜೆನ್ಸೀಸ್).