ಕ್ರಿಕೆಟ್

ನಮ್ಮ ಪ್ಲಾನ್ ಪ್ರಕಾರ 18ನೇ ಓವರ್‌ನಲ್ಲೇ ಮ್ಯಾಚ್​ ಮುಗಿಬೇಕಿತ್ತು, ಆದ್ರೆ.. ಗೆಲುವಿನ ಶ್ರೇಯಸ್ಸು ಮತ್ತೊಬ್ಬ ಆಟಗಾರನಿಗೆ ಹಂಚಿದ ತಿಲಕ್ ವರ್ಮಾ!| Tilak Varma

Tilak Varma: ಶನಿವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದ್ದು, ಇದರೊಂದಿಗೆ ಐದು ಪಂದ್ಯಗಳ ರೋಚಕ ಟಿ20 ಸರಣಿಯಲ್ಲಿ 2-0 ಮುನ್ನಡೆ ಕಾಯ್ದುಕೊಂಡಿದೆ.

Tilak Varma: ಶನಿವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದ್ದು, ಇದರೊಂದಿಗೆ ಐದು ಪಂದ್ಯಗಳ ರೋಚಕ ಟಿ20 ಸರಣಿಯಲ್ಲಿ 2-0 ಮುನ್ನಡೆ ಕಾಯ್ದುಕೊಂಡಿದೆ. ನ್ಯೂಜಿಲೆಂಡ್ ತಂಡವು ನೀಡಿದ್ದ 181 ರನ್‌ಗಳ ಸವಾಲಿನ ಗುರಿಯನ್ನು ಬೆನ್ನತ್ತಿದ ಶ್ರೇಯಸ್​ ಐಯ್ಯರ್​​ ಬಳಗ ಆರಂಭಿಕ ಆಘಾತದಿಂದ ಚೇತರಿಸಿಕೊಂಡು ಅಂತಿಮ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿತು. ಉಪನಾಯಕ ತಿಲಕ್ ವರ್ಮಾ ಅವರ ಜವಾಬ್ದಾರಿಯುತ ಅಜೇಯ ಅರ್ಧಶತಕ ಹಾಗೂ ನಿತೀಶ್ ಕುಮಾರ್ ರೆಡ್ಡಿ, ನಮನ್​ ಧೀರ್​ ಸಾಥ್​ ಈ ಗೆಲುವಿನಲ್ಲಿ ಹೈಲೈಟ್​​.

181 ರನ್‌ಗಳ ಗುರಿ ಬೆನ್ನತ್ತಿದ ಆರಂಭ ಕಳಪೆಯಾಗಿತ್ತು. ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್ ಅವರ ಮಾರಕ ಸ್ಪಿನ್ ದಾಳಿಗೆ ಭಾರತದ ಪ್ರಮುಖ ಬ್ಯಾಟರ್‌ಗಳು ತತ್ತರಿಸಿದರು. ಸ್ಯಾಂಟ್ನರ್ ಕೇವಲ 21 ರನ್ ನೀಡಿ ಪ್ರಮುಖ 4 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಟೀಮ್ ಇಂಡಿಯಾ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಇದರಿಂದಾಗಿ ಕೇವಲ 70 ರನ್‌ಗಳಿಗೆ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡು ಹೀನಾಯ ಸೋಲಿನ ದವಡೆಗೆ ಸಿಲುಕಿತ್ತು. ಕಿವೀಸ್ ಬೌಲರ್‌ಗಳ ದಾಳಿ ಎದುರು ಭಾರತ ಗೆಲ್ಲುವುದು ಕಷ್ಟದ ಮಾತು ಎಂಬ ವಾತಾವರಣ ನಿರ್ಮಾಣವಾಗಿತ್ತು.

ಮುಂಬೈ ಇಂಡಿಯನ್ಸ್ ಜೋಡಿ ಆಟ!

ಈ ಸಂಕಷ್ಟದ ಸಮಯದಲ್ಲಿ ಕ್ರೀಸ್‌ಗೆ ಬಂದ ತಿಲಕ್ ವರ್ಮಾ ಯಾವುದೇ ಆತಂಕಕ್ಕೆ ಒಳಗಾಗದೆ ಅತ್ಯಂತ ಜವಾಬ್ದಾರಿಯುತ ಹಾಗೂ ತಾಳ್ಮೆಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಅವರಿಗೆ ಸಾಥ್ ನೀಡಿದ ನಮನ್ ಧೀರ್ (31 ರನ್, 17 ಎಸೆತ) ಅತ್ಯಂತ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಪಿಚ್ ನಿಧಾನವಾಗಿದ್ದರಿಂದ ಸ್ಪಿನ್ನರ್‌ಗಳ ವಿರುದ್ಧ ಅತಿಯಾದ ರಿಸ್ಕ್ ತೆಗೆದುಕೊಳ್ಳದೆ, ಸಿಂಗಲ್ಸ್ ಮತ್ತು ಡಬಲ್ಸ್ ಓಡುವ ಮೂಲಕ ಸ್ಕೋರ್ ಬೋರ್ಡ್​​ನಲ್ಲಿ ಕಮ್ಮಿ ಆಗದಂತೆ ನೋಡಿಕೊಂಡರು. ಇವರಿಬ್ಬರ ಉತ್ತಮ ಜೊತೆಯಾಟದಿಂದ ತಂಡ ಸೋಲಿನ ಸುಳಿಯಿಂದ ನಿಧಾನವಾಗಿ ಚೇತರಿಕೆಯ ಹಾದಿ ಹಿಡಿಯಿತು. ನಮನ್ ಧೀರ್ ತಮ್ಮ ವಿಕೆಟ್ ಒಪ್ಪಿಸಿದರೂ, ತಂಡಕ್ಕೆ ಬೇಕಿದ್ದ ಭದ್ರವಾದ ಬುನಾದಿಯನ್ನು ಹಾಕಿಹೋದರು.

ಇದನ್ನೂ ಓದಿ:ಮ್ಯಾಚ್ ಮುಗಿಸೋಕೆ ನಾವು ಆಗ್ಲೇ ಆ ಪ್ಲ್ಯಾನ್ ಮಾಡಿದ್ವಿ!....ಗೆಲುವಿನ ಗುಟ್ಟು ಬಹಿರಂಗಪಡಿಸಿದ ಸಂಜು | Sanju Samson

ಹೈದ್ರಾಬಾದ್​ ಹುಡುಗರ ಕಮಾಲ್​

ನಮನ್ ಧೀರ್ ಔಟಾದ ಬಳಿಕ ಕ್ರೀಸ್‌ಗೆ ಬಂದ ನಿತೀಶ್ ಕುಮಾರ್ ರೆಡ್ಡಿ ಪಂದ್ಯದ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಾಯಿಸಿದರು. ಕೊನೆಯ ಹಂತದಲ್ಲಿ ತಿಲಕ್ ವರ್ಮಾ ಜತೆಗೂಡಿದ ನಿತೀಶ್ ಕೇವಲ 13 ಎಸೆತಗಳನ್ನು ಎದುರಿಸಿದ ಅಜೇಯ 26 ರನ್ ಸಿಡಿಸಿ ತಂಡವನ್ನು ಗೆಲುವಿನಂಚಿಗೆ ಕೊಂಡೊಯ್ದರು. ಈ ಹೈದರಾಬಾದ್ ಜೋಡಿಯು ಕೇವಲ 30 ಎಸೆತಗಳಲ್ಲಿ 69 ರನ್‌ಗಳ ಅಮೂಲ್ಯ ಜೊತೆಯಾಟವಾಡಿ ತಂಡವನ್ನು ವಿಜಯಶಾಲಿಯನ್ನಾಗಿಸಿತು. ತಿಲಕ್ ವರ್ಮಾ 26 ಎಸೆತಗಳಲ್ಲಿ 6 ಭರ್ಜರಿ ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 51 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಭಾರತ ತಂಡವು 1 ಎಸೆತ ಬಾಕಿ ಇರುವಂತೆಯೇ 6 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿ ಗುರಿ ಮುಟ್ಟಿತು.

ಕೋಚ್‌ಗಳ ಬೆಂಬಲವೇ ಗೆಲುವಿಗೆ ಸ್ಪೂರ್ತಿ: ತಿಲಕ್ ವರ್ಮಾ

ಗೆಲುವಿನ ಬಳಿಕ ಮಾತನಾಡಿದ ತಿಲಕ್ ವರ್ಮಾ, ಹೆಡ್ ಕೋಚ್ ಗೌತಮ್ ಗಂಭೀರ್ ಹಾಗೂ ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ತಮ್ಮ ಮೇಲೆ ಇಟ್ಟಿದ್ದ ಅಚಲ ನಂಬಿಕೆಯೇ ತಮ್ಮ ಈ ಯಶಸ್ಸಿಗೆ ಮುಖ್ಯ ಕಾರಣ ಎಂದು ಭಾವುಕರಾಗಿ ನುಡಿದರು. ಕೊನೆಯವರೆಗೂ ನಿಂತು ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯ ನಿನ್ನಲ್ಲಿದೆ ಎಂದು ಗೌತಮ್ ಸರ್ ಮತ್ತು ಸೀತಾಂಶು ಸರ್ ನನಗೆ ಮುಂಚಿತವಾಗಿ ಧೈರ್ಯ ತುಂಬಿದ್ದರು. ಇಡೀ ಭಾರತ ದೇಶವೇ ನಿನ್ನನ್ನು ನಂಬಿದೆ ಎಂದು ಹೇಳಿದ್ದರು. ಅವರ ಆ ಮಾತುಗಳು ನನ್ನ ಮನಸ್ಸಿನಲ್ಲಿ ಆಳವಾಗಿ ಉಳಿದಿದ್ದವು. ಆ ನಂಬಿಕೆಯನ್ನು ಉಳಿಸಿಕೊಂಡು ಜಯ ತಂದುಕೊಟ್ಟಿರುವುದಕ್ಕೆ ನನಗೆ ತುಂಬಾ ಹೆಮ್ಮೆಯಿದೆ ಎಂದು ತಿಲಕ್ ತಿಳಿಸಿದರು.

ಮುಂದುವರೆದು ಮಾತನಾಡಿದ ತಿಲಕ್, ನಾನು ನಮನ್ ಜೊತೆ ಮಾತನಾಡುತ್ತಿದ್ದೆ, ಕ್ರೀಸ್‌ನಲ್ಲಿ ಕೊನೆಯವರೆಗೂ ನಿಲ್ಲಬೇಕು ಎಂದುಕೊಂಡಿದ್ದೆವು. ಕಳೆದ ಪಂದ್ಯಕ್ಕೆ ಹೋಲಿಸಿದರೆ ಈ ಪಿಚ್ ನಿಧಾನವಾಗಿತ್ತು. ಹಾಗಾಗಿ, ವಿಶೇಷವಾಗಿ ಸ್ಪಿನ್ನರ್‌ಗಳು ಬೌಲಿಂಗ್ ಮಾಡುವಾಗ ನಾವು ಸಿಂಗಲ್, ಡಬಲ್​ ಓಡಬೇಕು ಎಂದುಕೊಂಡಿದ್ದೆವು. ಅದೇ ನಮ್ಮ ಮುಖ್ಯ ಯೋಜನೆಯಾಗಿತ್ತು, ಅದನ್ನು ಅಂದುಕೊಂಡಂತೆಯೇ ಮಾಡಿ ಮುಗಿಸಿದ್ದೇವೆ ಎಂದು ಹೇಳಿದ್ದಾರೆ.

ನಮನ್ ಧೀರ್ (31 ರನ್) ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿ ತಂಡಕ್ಕೆ ಬಲ ತುಂಬಿದರು ಎಂದು ಶ್ಲಾಘಿಸಿರುವ ತಿಲಕ್, ಅವರು ಬೇಗ ಔಟಾಗದೆ ಇದ್ದಿದ್ದರೆ ಪಂದ್ಯ ಇನ್ನೂ ಬೇಗ ಮುಗಿಯುತ್ತಿತ್ತು ಎಂದಿದ್ದಾರೆ. ದುರದೃಷ್ಟವಶಾತ್ ನಮನ್ ಅವರು ಮಿಚೆಲ್ ಸ್ಯಾಂಟ್ನರ್ ಅವರ ಕೊನೆಯ ಓವರ್‌ನಲ್ಲಿ ಔಟಾದರು. ಇಲ್ಲದಿದ್ದರೆ, ನಾವು 18ನೇ ಓವರ್‌ನಲ್ಲೇ ಪಂದ್ಯವನ್ನು ಮುಗಿಸಬಹುದಿತ್ತು ಎಂದು ನಾನು ಭಾವಿಸುತ್ತೇನೆ. ಆ ರೀತಿಯಲ್ಲಿ ಬ್ಯಾಟಿಂಗ್ ಮಾಡಿದ ನಮನ್​ಗೂ ಇದರ ಶ್ರೇಯ ಸಲ್ಲಬೇಕು ಎಂದು ಪಂಜಾಬ್​ ಹುಡುಗನನ್ನು ತಿಲಕ್ ಮುಕ್ತಕಂಠದಿಂದ ಕೊಂಡಾಡಿದ್ದಾರೆ.

ಕಿವೀಸ್​ ಬ್ಯಾಟಿಂಗ್​

ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು ಗ್ಲೆನ್ ಫಿಲಿಪ್ಸ್ (70 ರನ್, 43 ಎಸೆತ) ಮತ್ತು ಬೆವನ್ ಜಾಕೋಬ್ಸ್ (58 ರನ್, 46 ಎಸೆತ) ಅವರ ಅತ್ಯುತ್ತಮ ಅರ್ಧಶತಕಗಳ ಬಲದಿಂದ ನಿಗದಿತ ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 180 ರನ್ ಕಲೆಹಾಕಿತ್ತು. ಭಾರತದ ಪರವಾಗಿ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ಅರ್ಷದೀಪ್ ಸಿಂಗ್ 2 ವಿಕೆಟ್ ಪಡೆದರೆ, ಪ್ರಿನ್ಸ್ ಯಾದವ್ ಮತ್ತು ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಪಡೆದರು(ಏಜೆನ್ಸೀಸ್​).