17 ಕೆಜಿ ತೂಕ ಇಳಿಸಿಕೊಂಡ ಸ್ಟೈಲಿಶ್​ ಸ್ಟಾರ್​ ಸರ್ಫರಾಜ್​ ಖಾನ್​ 
ಕ್ರಿಕೆಟ್

ಗೌತಿ ವಿರುದ್ಧ ಸಿಟ್ಟಿಗೆದ್ದ ಸರ್ಫರಾಜ್​ ಖಾನ್​ಗೆ ಕಡೆಗೂ ತಂಡದಲ್ಲಿ ಅವಕಾಶ! 17 ಕೆಜಿ ತೂಕ ಇಳಿಕೆ ಹಿಂದಿದೆ ನೋವಿನ ಕಥೆ

ಪ್ರಮುಖ ಮುಖ್ಯಾಂಶಗಳು

  • ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಕಡೆಗೂ ಸರ್ಫರಾಜ್ ಖಾನ್​ ಆಯ್ಕೆ
  • ಗೌತಮ್ ಗಂಭೀರ್​ ಮತ್ತು ಮ್ಯಾನೇಜ್​ಮೆಂಟ್​ ಕೈಬಿಟ್ಟ ಬಗ್ಗೆ ಅಸಮಾಧಾನ
  • ಸಾಯಿ ಸುದರ್ಶನ್ ಜಾಗಕ್ಕೆ ಸರ್ಫರಾಜ್​ಗೆ ತಂಡದಲ್ಲಿ ಚಾನ್ಸ್
Sarfaraz Khan: ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ತನ್ನನ್ನು ಕೈಬಿಟ್ಟ ಟೀಮ್ ಇಂಡಿಯಾ ನಡೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಖಂಡಿಸಿದ್ದ ಸ್ಟಾರ್​ ಬ್ಯಾಟ್ಸ್​ಮನ್​ ಸರ್ಫರಾಜ್ ಖಾನ್​ಗೆ ಕಡೆಗೂ ತಂಡದಲ್ಲಿ ಅವಕಾಶ ಸಿಕ್ಕಿದೆ.
ಗಾಯಗೊಂಡ ಸಾಯಿ ಸುದರ್ಶನ್ ಅವರ ಬದಲಿಗೆ ಸರ್ಫರಾಜ್​ಗೆ ಅವಕಾಶ ಕೊಟ್ಟಿರುವ ಬಿಸಿಸಿಐ,  ಪ್ರಸ್ತುತ ಬಲಗೈ ಹೆಬ್ಬೆರಳಿನ ಇಂಜುರಿಯಿಂದ ಸುಧಾರಿಸಿಕೊಳ್ಳುತ್ತಿರುವ ಸಾಯಿ, ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡ ಅವರ ಆರೋಗ್ಯ ಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದು, ಅವರ ಸ್ಥಾನದಲ್ಲಿ ತಂಡದ ಪರ ಸರ್ಫರಾಜ್​ ಆಡಲಿದ್ದಾರೆ ಎಂದು ಸ್ಪಷ್ಟಪಡಿಸಿದೆ. 
ಆಗಸ್ಟ್ 15ರಿಂದ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಸರ್ಫರಾಜ್ ಖಾನ್ ಕೊಲಂಬೊದಲ್ಲಿ ಟೀಮ್ ಇಂಡಿಯಾವನ್ನು ಸೇರಲಿದ್ದಾರೆ. ಇಲ್ಲಿಯವರೆಗೆ 6 ಟೆಸ್ಟ್‌ಗಳ 11 ಇನ್ನಿಂಗ್ಸ್‌ಗಳಲ್ಲಿ 37 ಸರಾಸರಿಯಲ್ಲಿ 371 ರನ್ ಗಳಿಸಿರುವ ಸರ್ಫರಾಜ್​, ಶ್ರೀಲಂಕಾ ಸರಣಿಗೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ ಶತಕ ಗಳಿಸಿದ ಬೆನ್ನಲ್ಲೇ ಉತ್ತಮ ಫಾರ್ಮ್‌ನಲ್ಲಿರುವ ದೇವದತ್ ಪಡಿಕ್ಕಲ್ ಜತೆಗೆ ಅಂತಿಮ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಾರೆಯೇ ಎಂಬುದು ಮತ್ತೊಂದು ಸವಾಲಾಗಿ ಪರಿಣಮಿಸಿದೆ. 
ದಡೂತಿ ದೇಹವನ್ನು ಹೊಂದಿದ್ದಾರೆ ಎಂಬ ಒಂದೇ ಒಂದು ಕಾರಣಕ್ಕೆ ಅವರ ಅದ್ಭುತ ಪ್ರದರ್ಶನವನ್ನು ಕಡೆಗಣಿಸಿ, ತಂಡದಿಂದ ಕೈಬಿಟ್ಟಿದ್ದ ಟೀಮ್ ಇಂಡಿಯಾ ಮ್ಯಾನೇಜ್​ಮೆಂಟ್​ ವಿರುದ್ಧ ಭಾರಿ ಅಸಮಾಧಾನ ಹೊರಹಾಕಿದ್ದರು. ಇಲ್ಲಿಗೆ ಸುಮ್ಮನಾಗದ ಸರ್ಫರಾಜ್​, ಮೊದಲಿಗೆ ನಿರಂತರ ಹಾಗೂ ಕಠಿಣ ಪರಿಶ್ರಮ ಮತ್ತು ದೃಢ ಸಂಕಲ್ಪದಿಂದ 10 ಕೆಜಿ ತೂಕ ಇಳಿಸಿಕೊಂಡರು. ಆದರೂ, ಇಂಗ್ಲೆಂಡ್​ ಸರಣಿ ಅಥವಾ ಇನ್ನುಳಿದ ಯಾವುದೇ ಟೆಸ್ಟ್ ಸರಣಿಗೂ ಅವರನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ಇದರಿಂದ ಮತ್ತೆ ಅವಕಾಶದಿಂದ ವಂಚಿತರಾದ ಅವರು, ಈಗ ಇಳಿಸಿಕೊಂಡಿರುವುದು ಬರೋಬ್ಬರಿ 17 ಕೆಜಿ. 
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ತಾನು ಫಿಟ್‌ ಇಲ್ಲ ಎಂಬ ಟೀಕೆಗಳನ್ನು ಹತ್ತಿಕ್ಕಲು ಸರ್ಫರಾಜ್, ಕಳೆದ ಒಂದೂವರೆ ವರ್ಷದಲ್ಲಿ 17 ಕೆಜಿ ತೂಕ ಇಳಿಸಿಕೊಂಡಿರುವುದು ಗಮನಾರ್ಹ. ಅಧಿಕ ತೂಕ ಎಂಬ ಲೇವಡಿಗಳ ಮಧ್ಯೆ, ಟೀಮ್ ಇಂಡಿಯಾದ ದಿಗ್ಗಜ, ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಖಾನ್​ ಬೆನ್ನಿಗೆ ನಿಂತಿದ್ದರು. ದೇಹದ ತೂಕಕ್ಕಿಂತ ಆಟಗಾರನ ಪ್ರದರ್ಶನ ಮತ್ತು ಕ್ರಿಕೆಟ್ ಫಿಟ್ನೆಸ್​ ತುಂಬಾ ಮುಖ್ಯ ಎಂದು ಬ್ಯಾಟ್​ ಬೀಸಿದ್ದರು. ರಣಜಿ ಟ್ರೋಫಿಯಲ್ಲಿ ಮೂರು ಸೆಂಚುರಿ ಬಾರಿಸಿದ್ದರೂ ತೂಕದ ಸಮಸ್ಯೆಯಿಂದ ದೂರ ಸರಿದಿದ್ದ ಈ ಆಟಗಾರ, ಈಗ ಸಖತ್ ಸ್ಟೈಲಿಶ್​ ಆಗಿ ಕಮ್​ಬ್ಯಾಕ್​ ಮಾಡಿರುವುದು ಮ್ಯಾನೇಜ್​ಮೆಂಟ್​ನವರ ಗಮನ ಸೆಳೆದಿದೆ,(ಏಜೆನ್ಸೀಸ್).