- ನಿನ್ನೆ (ಜ.22) ನಡೆದ ಬೆಂಗಾಲ್ ಮತ್ತು ಸರ್ವಿಸಸ್ ನಡುವಿನ ರಣಜಿ ಟ್ರೋಫಿ ಪಂದ್ಯ
- ಬೆಂಗಾಲ್ ಪರ ಕ್ಯಾಪ್ಟನ್ ಅಭಿಮನ್ಯು ಈಶ್ವರನ್ ವಿಚಿತ್ರ ರನ್ ಔಟ್
- ಡ್ರಿಂಕ್ಸ್ ಬ್ರೇಕ್ಗೆಂದು ಕ್ರೀಸ್ ಬಿಟ್ಟಿದ್ದೇ ತಪ್ಪಾಯ್ತು
ನವದೆಹಲಿ: ನಿನ್ನೆ (ಜ.22) ಕಲ್ಯಾಣಿ ಕ್ರೀಡಾಂಗಣದಲ್ಲಿ ನಡೆದ ಬೆಂಗಾಲ್ ಮತ್ತು ಸರ್ವಿಸಸ್ ನಡುವಿನ ರಣಜಿ ಟ್ರೋಫಿ ಪಂದ್ಯದಲ್ಲಿ ಅಭಿಮನ್ಯು ಈಶ್ವರನ್ ವಿಚಿತ್ರ ರೀತಿಯಲ್ಲಿ ಪೆವಿಲಿಯನ್ ಸೇರಿದ್ದು ಸದ್ಯ ಹಲವರ ಅಚ್ಚರಿ ಹಾಗೂ ಗೊಂದಲಕ್ಕೆ ಕಾರಣವಾಗಿದೆ.
ಪಂದ್ಯದ ನಡುವೆ ಡ್ರಿಂಕ್ಸ್ ಸೇವಿಸಲು ಕ್ರೀಸ್‌ನಿಂದ ಹೊರಹೋದ ಅಭಿಮನ್ಯು ಈಶ್ವರನ್ ಅವರನ್ನು ರನ್ಔಟ್ ಎಂದು ಘೋಷಿಸಲಾಯಿತು. ಇದರಿಂದ ಅಚ್ಚರಿಗೆ ಒಳಗಾದ ಬೆಂಗಾಲ್ ಪಡೆಯ ಬ್ಯಾಟರ್, ಒಂದು ನಿಮಿಷ ಏನಾಗ್ತಿದೆ ಎಂಬುದನ್ನು ಅರ್ಥೈಸಿಕೊಳ್ಳಲು ಕೆಲ ಸಮಯ ತೆಗೆದುಕೊಂಡರು. ಬಂಗಾಳ ತಂಡವು ಬ್ಯಾಟಿಂಗ್ ಮಾಡುವಾಗ 41ನೇ ಓವರ್‌ನ ಕೊನೆಯ ಎಸೆತದಲ್ಲಿ ನಾಯಕ ಈಶ್ವರನ್ 81 ರನ್ ಗಳಿಸಿ, ಶತಕ ಬಾರಿಸುವತ್ತ ಮುಂದಾಗಿದ್ದರು. ಆದರೆ, ಅವರೇ ಮಾಡಿಕೊಂಡ ಸಣ್ಣ ಎಡವಟ್ಟಿನಿಂದ ರನ್ ಔಟ್ ಆಗಬೇಕಾಯಿತು.
ನಾನ್-ಸ್ಟ್ರೈಕ್‌ನಲ್ಲಿ ಬಾಲ್ ಡೆಡ್ ಆಯಿತು ಮತ್ತು ಓವರ್ ಕೂಡ ಮುಗಿಯಿತು ಎಂದು ಭಾವಿಸಿದ ಈಶ್ವರನ್ಗೆ ಚೆಂಡು ಬೌಲರ್ ಆದಿತ್ಯ ಕುಮಾರ್ ಅವರ ಕೈಗೆ ತಗುಲಿ ಸ್ಟಂಪ್ ಆಗಿದೆ ಎಂಬುದೇ ಗೊತ್ತಾಗಿಲ್ಲ. ಅದಾಗಲೇ ಕ್ರೀಸ್‌ನಿಂದ ಹೊರಬಂದಿದ್ದ ಈಶ್ವರನ್ ಔಟ್ ಎಂದು ಅಂಪೈರ್ನತ್ತ ಅಪೀಲ್ ಮಾಡಿದ ಸರ್ವಿಸಸ್ ತಂಡ, ಇದು ಖಚಿತ ರನ್ ಔಟ್ ಎಂದು ಒತ್ತಿ ಹೇಳಿತು. ಕಡೆಗೂ ಆನ್ಫೀಲ್ಡ್ ಅಂಪೈರ್ ಇದನ್ನು ಔಟ್ ಎಂದೇ ಘೋಷಿಸಿದರು.
"ಇನ್ನಿಂಗ್ಸ್ ತುಂಬಾ ಚೆನ್ನಾಗಿ ನಡೆಯುತ್ತಿತ್ತು. ಆದರೆ, ನಾನು ಮಾಡಿದ ಅದೊಂದು ಎಡವಟ್ಟು ನನಗೆ ಆಶ್ಚರ್ಯವನ್ನುಂಟು ಮಾಡಿತು. ಕೆಲವರು ಆಟದ ಉತ್ಸಾಹದಲ್ಲಿ ಆಗಿರಬಹುದು, ಎದುರಾಳಿ ತಂಡ ನನ್ನನ್ನು ಕ್ರೀಸ್ಗೆ ವಾಪಾಸ್ ಕರೆಸುತ್ತಾರೆ ಎಂದೇ ಭಾವಿಸಿದರು. ಆದರೆ ಅದರ ಬಗ್ಗೆ ಯಾವುದೇ ಪ್ರಶ್ನೆ ನನ್ನಲ್ಲಿ ಇರಲಿಲ್ಲ. ಇಲ್ಲಿ ಸಂಪೂರ್ಣ ತಪ್ಪು ನನ್ನದೇ ಆಗಿತ್ತು" ಎಂದರು ಹೇಳಿದರು,(ಏಜೆನ್ಸೀಸ್).