ಟಿ20 ವಿಶ್ವಕಪ್: ಭಾನುವಾರ ಭಾರತ-ವೆಸ್ಟ್ ಇಂಡೀಸ್ ಕ್ವಾರ್ಟರ್ಫೈನಲ್! ಮಳೆ ಬಂದರೆ ವಿಂಡೀಸ್ಗೆ ಲಾಭ!
ನವದೆಹಲಿ: ಟಿ20 ವಿಶ್ವಕಪ್ನಲ್ಲಿ (T20 World Cup) ಗುರುವಾರದ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡದ ಸೋಲು ಮತ್ತು ಭಾರತ ತಂಡದ ಗೆಲುವಿನಿಂದ, ಭಾನುವಾರ ಕೋಲ್ಕತದಲ್ಲಿ ನಡೆಯಲಿರುವ ಉಭಯ ತಂಡಗಳ ನಡುವಿನ ಸೂಪರ್-8 ಹಂತದ ಕೊನೇ ಪಂದ್ಯ "ಕ್ವಾರ್ಟರ್ಫೈನಲ್' ಆಗಿ ಮಾರ್ಪಟ್ಟಿದೆ. ಯಾವುದೇ ರನ್ರೇಟ್ ಲೆಕ್ಕಾಚಾರದ ಅಗತ್ಯವಿಲ್ಲದೆ ಈಡನ್ ಗಾರ್ಡನ್ಸ್ನಲ್ಲಿ ಗೆದ್ದ ತಂಡ ಸೆಮಿಫೈನಲ್ (semifinal) ಪ್ರವೇಶಿಸಲಿದೆ. ಇದರಿಂದ ಭಾರತ-ವಿಂಡೀಸ್ ಪೈಕಿ ಭಾನುವಾರ ಒಂದು ತಂಡ ಮಾತ್ರ 3ನೇ ಬಾರಿ ಪ್ರಶಸ್ತಿ ಗೆಲ್ಲುವ ಆಸೆಯನ್ನು ಜೀವಂತ ಉಳಿಸಿಕೊಳ್ಳಲಿದೆ.
ಭಾರತ-ವಿಂಡೀಸ್ ಪಂದ್ಯ ಮಳೆ ಅಥವಾ ಬೇರಾವುದೇ ಕಾರಣದಿಂದ ರದ್ದುಗೊಂಡರೆ, ಹಾಲಿ ರನ್ರೇಟ್ ಪ್ರಕಾರ ವಿಂಡೀಸ್ ತಂಡವೇ ಸೆಮಿಫೈನಲ್ಗೇರಲಿದೆ. ಜಿಂಬಾಬ್ವೆ ವಿರುದ್ಧ ಭಾರತ 108 ರನ್ಗಳಿಂದ ಗೆದ್ದರಷ್ಟೇ ರನ್ರೇಟ್ನಲ್ಲಿ ವಿಂಡೀಸ್ ತಂಡವನ್ನು ಹಿಂದಿಕ್ಕಬಹುದಾಗಿತ್ತು.
ಭಾರತ ತಂಡ ಜಿಂಬಾಬ್ವೆ ವಿರುದ್ಧ ಗೆಲುವು ಸಾಧಿಸುವುದರೊಂದಿಗೆ ದಕ್ಷಿಣ ಆಫ್ರಿಕಾ ತಂಡ ಸೂಪರ್-8ರ ಗ್ರೂಪ್-1ರಿಂದ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶ ಖಚಿತಪಡಿಸಿಕೊಂಡಿದೆ. ದಕ್ಷಿಣ ಆಫ್ರಿಕಾ ಭಾನುವಾರ ಜಿಂಬಾಬ್ವೆ ವಿರುದ್ಧ ಸೂಪರ್-8 ಹಂತದ ತನ್ನ ಕೊನೇ ಪಂದ್ಯ ಆಡಲಿರುವುದರಿಂದ ಗ್ರೂಪ್-1ರಲ್ಲಿ ಅಗ್ರಸ್ಥಾನವನ್ನೂ ಗಳಿಸುವುದು ಬಹುತೇಕ ಖಚಿತವೆನಿಸಿದೆ. ಇದರಿಂದ ಭಾರತ-ವಿಂಡೀಸ್ ನಡುವಿನ ಪಂದ್ಯದಲ್ಲಿ ಗೆದ್ದ ತಂಡ ಗ್ರೂಪ್-1ರ 2ನೇ ತಂಡವಾಗಿ ಸೆಮಿಫೈನಲ್ಗೇರಲಿದೆ.
ಅತ್ತ ಗ್ರೂಪ್-2ರಲ್ಲಿ ಇಂಗ್ಲೆಂಡ್ ಅಗ್ರಸ್ಥಾನ ಗಳಿಸುವ ನೆಚ್ಚಿನ ತಂಡವೆನಿಸಿದೆ. ಶುಕ್ರವಾರ ನ್ಯೂಜಿಲೆಂಡ್ ವಿರುದ್ಧ ಸೋತರಷ್ಟೇ ಇಂಗ್ಲೆಂಡ್ 2ನೇ ಸ್ಥಾನಕ್ಕೆ ಕುಸಿಯಲಿದೆ. ಹೀಗಾಗಿ ಭಾರತ ಉಪಾಂತ್ಯಕ್ಕೇರಿದರೆ ಇಂಗ್ಲೆಂಡ್ ಎದುರಾಳಿಯಾಗುವ ಸಾಧ್ಯತೆ ಹೆಚ್ಚಿದೆ. ಭಾರತ ಸೆಮಿಫೈನಲ್ಗೇರಿದರೆ ಮಾರ್ಚ್ 5ಕ್ಕೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಡಲಿದೆ. ಪಾಕ್-ಲಂಕಾ ಉಪಾಂತ್ಯಕ್ಕೇರುವುದು ಅನುಮಾನ ಎನಿಸಿರುವುದರಿಂದ, ಮೊದಲ ಸೆಮಿಫೈನಲ್ ಪಂದ್ಯ ಮಾರ್ಚ್ 4ಕ್ಕೆ ಕೋಲ್ಕತದ ಈಡನ್ ಗಾರ್ಡನ್ಸ್ನಲ್ಲಿ ನಡೆಯುವುದು ಬಹುತೇಕ ಖಚಿತವೆನಿಸಿದೆ.