ನೀವು ಇದುವರೆಗೂ ನೋಡಿರದ ರನೌಟ್ ಇದು... ಆಟಗಾರರೇ ಶಾಕ್​, ಡಿಪಿಎಲ್​ನಲ್ಲಿ ವಿಚಿತ್ರ ಔಟ್​! ವಿಡಿಯೋ ವೈರಲ್​...DPL 
ಕ್ರಿಕೆಟ್

ನೀವು ಇದುವರೆಗೂ ನೋಡಿರದ ರನೌಟ್ ಇದು... ಆಟಗಾರರೇ ಶಾಕ್​, ಡಿಪಿಎಲ್​ನಲ್ಲಿ ವಿಚಿತ್ರ ಔಟ್​! ವಿಡಿಯೋ ವೈರಲ್​...DPL

ಪ್ರಮುಖ ಮುಖ್ಯಾಂಶಗಳು

  • ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ವಿಚಿತ್ರ ರನ್-ಔಟ್ ವೈರಲ್
  • ಕೊನೆಯ ಎಸೆತದಲ್ಲಿ ಒದೆತದ ಮೂಲಕ ವಿಕೆಟ್ ಪಡೆದ ಹಿಮ್ಮತ್ ಸಿಂಗ್
  • ಸೂಪರ್ ಓವರ್‌ಗೆ ತಿರುಗಿದ ರೋಚಕ ಪಂದ್ಯದಲ್ಲಿ ಗೆದ್ದ ಔಟರ್ ದೆಹಲಿ ವಾರಿಯರ್ಸ್
  • ಸೂಪರ್ ಓವರ್‌ನಲ್ಲಿ ನ್ಯೂಡೆಲ್ಲಿ ಟೈಗರ್ಸ್ ತಂಡಕ್ಕೆ ಸೋಲು
ನವದೆಹಲಿ: ಕ್ರಿಕೆಟ್ ಲೋಕದಲ್ಲಿ ಕೆಲವೊಮ್ಮೆ ಯಾರೂ ನಿರೀಕ್ಷಿಸದಂತಹ ವಿಚಿತ್ರ ಹಾಗೂ ರೋಚಕ ಘಟನೆಗಳು ನಡೆಯುತ್ತಲೇ ಇರುತ್ತವೆ ಮತ್ತು ಅದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಲೇ ಇರುತ್ತವೆ. ಅದೇ ರೀತಿ ದೆಹಲಿ ಪ್ರೀಮಿಯರ್ ಲೀಗ್ ( DPL ) ಟೂರ್ನಿಯಲ್ಲಿ ನ್ಯೂಡೆಲ್ಲಿ ಟೈಗರ್ಸ್ ಮತ್ತು ಔಟರ್ ದೆಹಲಿ ವಾರಿಯರ್ಸ್ ನಡುವಿನ ಲೀಗ್ ಪಂದ್ಯದಲ್ಲಿ ಇಂತಹದ್ದೇ ಒಂದು ಅಪರೂಪದ ಹಾಗೂ ಅಚ್ಚರಿಯ ಘಟನೆ ( Run Out ) ನಡೆದಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
156 ರನ್‌ಗಳ ಗುರಿ ಬೆನ್ನಟ್ಟಿದ ಔಟರ್ ದೆಹಲಿ ವಾರಿಯರ್ಸ್ ತಂಡಕ್ಕೆ ಗೆಲ್ಲಲು ಕೊನೆಯ ಎಸೆತದಲ್ಲಿ ಕೇವಲ ಒಂದು ರನ್ ಅಗತ್ಯವಿತ್ತು. ಬ್ಯಾಟ್ಸ್‌ಮನ್ ಪ್ರಥಮ್ ಸಲುಜಾ ಅವರು ಮಿಡ್-ಆನ್ ಕಡೆಗೆ ಹೊಡೆದು ರನ್‌ಗಾಗಿ ಓಡಿದರು. ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಹಿಮ್ಮತ್ ಸಿಂಗ್ ಚೆಂಡನ್ನು ಸರಿಯಾಗಿ ಹಿಡಿಯಲು ವಿಫಲರಾದರು. ಇದರಿಂದ ಕೋಪಗೊಂಡ ಅವರು ಹತಾಶೆಯಿಂದ ಚೆಂಡನ್ನು ಕಾಲಿನಿಂದ ಒದ್ದರು.

ಅಚ್ಚರಿಯೆಂದರೆ, ಆ ಕಾಲಿನ ಒದೆಗೆ ಚೆಂಡು ನೇರವಾಗಿ ಹೋಗಿ ವಿಕೆಟ್‌ಗೆ ಅಪ್ಪಳಿಸಿತು. ಅಷ್ಟರಲ್ಲಿ ಬ್ಯಾಟ್ಸ್‌ಮನ್ ಕ್ರೀಸ್ ತಲುಪಿರಲಿಲ್ಲವಾದ್ದರಿಂದ ಅದು ರನ್-ಔಟ್ ಆಯಿತು. ಈ ರೋಚಕ ಘಟನೆಯಿಂದಾಗಿ ಸ್ಕೋರ್ ಟೈ ಆಗಿ (155/9) ಪಂದ್ಯವು ಸೂಪರ್ ಓವರ್‌ಗೆ ತಿರುಗಿತು. ವಿಶೇಷವೆಂದರೆ, ಕೊನೆಯ ಎರಡು ಎಸೆತಗಳಲ್ಲಿ ಔಟರ್ ದೆಹಲಿ ವಾರಿಯರ್ಸ್ ತಂಡ ಸತತ ಎರಡು ರನ್-ಔಟ್‌ಗಳನ್ನು ಕಂಡಿತು.

ನಂತರ ನಡೆದ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಔಟರ್ ದೆಹಲಿ ವಾರಿಯರ್ಸ್ 1 ಓವರ್‌ನಲ್ಲಿ 1 ವಿಕೆಟ್ ನಷ್ಟಕ್ಕೆ 20 ರನ್‌ಗಳ ಬೃಹತ್ ಗುರಿ ನೀಡಿತು. 21 ರನ್‌ಗಳ ಗುರಿ ಬೆನ್ನಟ್ಟಿದ ನ್ಯೂಡೆಲ್ಲಿ ಟೈಗರ್ಸ್ ಆರಂಭದಲ್ಲೇ ಆಘಾತ ಅನುಭವಿಸಿತು. ನಾಯಕ ಹಿಮ್ಮತ್ ಸಿಂಗ್ ಎರಡು ಎಸೆತಗಳಲ್ಲಿ ಸಿಕ್ಸರ್ ಸೇರಿದಂತೆ 6 ರನ್ ಗಳಿಸಿ ಔಟಾದರು.
ನಂತರ ಬಂದ ಹೃತಿಕ್ ಶೋಕಿನ್ ಕೂಡ ಖಾತೆ ತೆರೆಯದೆ ಪೆವಿಲಿಯನ್ ಸೇರಿದರು. ಪರಿಣಾಮವಾಗಿ ನ್ಯೂಡೆಲ್ಲಿ ಟೈಗರ್ಸ್ ಕೇವಲ 0.3 ಓವರ್‌ಗಳಲ್ಲಿ 6 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು. ಇದರೊಂದಿಗೆ ಔಟರ್ ದೆಹಲಿ ವಾರಿಯರ್ಸ್ ತಂಡವು ಅತ್ಯಂತ ರೋಚಕ ರೀತಿಯಲ್ಲಿ ಜಯ ಸಾಧಿಸಿತು, (ಏಜೆನ್ಸೀಸ್​).