ಆರ್​. ಆಶ್ವಿನ್​, ವೈಭವ್ ಸೂರ್ಯವಂಶಿ  
ಕ್ರಿಕೆಟ್

ಅವನಿನ್ನು ಬೇಬಿ... ವೈಭವ್ ಅವಶ್ಯಕತೆ ಏನಿಲ್ಲ! ​ಮಾಜಿ ಕ್ರಿಕೆಟಿಗರ ಮಾತಿಗೆ ತಿರುಗಿಬಿದ್ದ ಆರ್​. ಆಶ್ವಿನ್ | Vaibhav Sooryavanshi

ಪ್ರಮುಖ ಮುಖ್ಯಾಂಶಗಳು

  • ಟೀಮ್​ ಇಂಡಿಯಾಗೆ ವೈಭವ್ ಸೂರ್ಯವಂಶಿ ಆಡಬೇಕು
  • ಮಾಜಿ ಕ್ರಿಕೆಟಿಗರ ಮಾತಿಗೆ ಆರ್​. ಅಶ್ವಿನ್​ ಕೆಂಡ
Vaibhav Sooryavanshi: ನಿನ್ನೆ (ಮಾ.30) ಅಸ್ಸಾಂನ ಗುವಾಹಟಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ 19ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡ ಭರ್ಜರಿ ಗೆಲುವು ದಾಖಲಿಸಿತು. ಓನ್​ ಸೈಡೆಡ್​ ಆದ ಪಂದ್ಯದಲ್ಲಿ ರಾಜಸ್ಥಾನ ಪರ ಯುವ ಬ್ಯಾಟರ್​ ವೈಭವ್ ಸೂರ್ಯವಂಶಿ ಸ್ಫೋಟಕ ಅರ್ಧಶತಕ ಬಾರಿಸಿದ್ದು, ಮೈದಾನದಲ್ಲಿದ್ದ ಕ್ರಿಕೆಟ್​ ಪ್ರೇಮಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಮತ್ತೊಂದೆಡೆ, ಮಾಜಿ ಕ್ರಿಕೆಟಿಗರ ಭವಿಷ್ಯ ನುಡಿಗಳು ಹೆಚ್ಚಾಯಿತು. 
15 ವರ್ಷದ ವೈಭವ್, 19ನೇ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಪರ ಸಿಕ್ಸರ್​, ಬೌಂಡರಿಗಳನ್ನು ಹರಿಸಿದರು. ಸಿಎಸ್​ಕೆ ವಿರುದ್ಧ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ಐಪಿಎಲ್​ ಇತಿಹಾಸದಲ್ಲಿ ಮೂರನೇ ಅತಿ ವೇಗದ ಅರ್ಧಶತಕ ದಾಖಲಿಸಿದ ಆಟಗಾರ ಎಂಬ ದಾಖಲೆಗೆ ಸಾಕ್ಷಿಯಾದರು. ಐದು ಸಿಕ್ಸರ್‌ ಮತ್ತು ನಾಲ್ಕು ಬೌಂಡರಿಗಳನ್ನು ಬಾರಿಸುವ ಮೂಲಕ 52 ರನ್​ ಗಳಿಸಿದ ವೈಭವ್​ ಅವರ ಅಬ್ಬರದ ಬ್ಯಾಟಿಂಗ್​ ನೋಡಿದ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗರು, ಈ ವರ್ಷವೇ ವೈಭವ್​ಗೆ ಭಾರತ ತಂಡದಲ್ಲಿ ಸ್ಥಾನ ಕೊಡಬೇಕು ಎಂದು ಆಗ್ರಹಿಸಿದ್ದಾರೆ. 
ಮಾಜಿ ಕ್ರಿಕೆಟಿಗರಾದ ಮೊಹಮ್ಮದ್ ಕೈಫ್ ಮತ್ತು ಮೈಕೆಲ್ ವಾಘನ್ ಮಾತನಾಡಿ, ವೈಭವ್ ಅವರ ಆಟವನ್ನು ನೋಡಿದರೆ, ಅವರನ್ನು ಹೆಚ್ಚು ಕಾಯಿಸುವ ಅಗತ್ಯವಿಲ್ಲ. ಶೀಘ್ರವೇ ಬಿಸಿಸಿಐ ಅವರಿಗೆ ಕರೆ ಮಾಡಿ, ತಂಡಕ್ಕೆ ಸೇರಿಸಿಕೊಳ್ಳುವುದು ಖಚಿತ ಎಂದರು. ಇದಕ್ಕೆ ಒಪ್ಪದ ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಈ ವಿಷಯದ ಬಗ್ಗೆ ವ್ಯತಿರಿಕ್ತ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. 
ಈ ಕುರಿತಾಗಿ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಮಾತನಾಡಿದ ಅವರು, "ಇಷ್ಟೊಂದು ಆತುರ ಏಕೆ? ದೊಡ್ಡ ಟಾರ್ಗೆಟ್​ಗಳನ್ನು ಕೊಡಬೇಡಿ. ಅವನೇನು ದೊಡ್ಡ ಮನುಷ್ಯನೇ? ಇನ್ನೂ ಚಿಕ್ಕ ಹುಡುಗ. ಮಹೇಂದ್ರ ಸಿಂಗ್ ಧೋನಿ ಅವರೇ 45 ವರ್ಷಗಳವರೆಗೂ ಆಡ್ತಿದ್ದಾರೆ. ಎಂದರೆ, ಸೂರ್ಯವಂಶಿಗೆ ಇನ್ನೂ ಎರಡೂವರೆ ದಶಕಗಳ ಕಾಲ ಸಮಯವಿದೆ. ಸದ್ಯಕ್ಕೆ ಆತನನ್ನು ಏಕಾಂಗಿಯಾಗಿ ಬಿಟ್ಟುಬಿಡಿ. ಸಮಯ ಬಂದಾಗ ವೈಭವ್​ ತಂಡವನ್ನು ಸೇರುತ್ತಾನೆ. ಟೀಮ್ ಇಂಡಿಯಾಗೆ ಆಡುವಷ್ಟು ಉತ್ತಮ ಏನಲ್ಲ" ಎಂದರು. 
"ಸೂರ್ಯವಂಶಿಗೆ ಈಗ 15 ವರ್ಷ ತುಂಬಿದೆ. ಆದ್ದರಿಂದ, 15 ಎಸೆತಗಳಲ್ಲಿ 50 ರನ್ ಗಳಿಸಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಆತ ತೋರಿಸಿದ್ದು ತನ್ನ ವಯಸ್ಸು. ಇಲ್ಲಿ ನಾನು ಹೇಳಬೇಕೆಂದರೆ, ವೈಭವ್​ ಒಬ್ಬ ಅದ್ಭುತ ಆಟಗಾರ. ಅವರ ಬ್ಯಾಟಿಂಗ್ ವೇಗ ಎಷ್ಟಿತ್ತು ನೋಡಿ. ಸಿಎಸ್‌ಕೆಗೆ ಯಾವುದೇ ಉತ್ತರವಿರಲಿಲ್ಲ. ನಮ್ಮದು ಕೂಡ ಒಂದು ಬಲಿಷ್ಠ ತಂಡ ಎಂಬುದನ್ನು ಆರ್​ಆರ್​ ಈ ಪಂದ್ಯದ ಮೂಲಕ ಸಾಬೀತುಪಡಿಸಿದೆ" ಎಂದು ಹೇಳಿದರು,(ಏಜೆನ್ಸೀಸ್).