WPL: ಆರ್ಭಟಿಸಿದ ಗ್ರೇಸ್​ ಹ್ಯಾರಿಸ್​; ಆರ್​ಸಿಬಿ ಮಹಿಳೆಯರಿಗೆ ಸತತ 2ನೇ ಗೆಲುವು 
ಕ್ರಿಕೆಟ್

WPL: ಆರ್ಭಟಿಸಿದ ಗ್ರೇಸ್​ ಹ್ಯಾರಿಸ್​; ಆರ್​ಸಿಬಿ ಮಹಿಳೆಯರಿಗೆ ಸತತ 2ನೇ ಗೆಲುವು

ಮುಂಬೈ: ಬಿಗಿ ಬೌಲಿಂಗ್​ ದಾಳಿ ಮತ್ತು ಗ್ರೇಸ್​ ಹ್ಯಾರಿಸ್​ (85 ರನ್​, 40 ಎಸೆತ, 10 ಬೌಂಡರಿ, 5 ಸಿಕ್ಸರ್​) ಸ್ಫೋಟಕ ಬ್ಯಾಟಿಂಗ್​ ನೆರವಿನಿಂದ ಆರ್​ಸಿಬಿ (RCB) ತಂಡ ಡಬ್ಲ್ಯುಪಿಎಲ್ (Women''s Premier League)​ 4ನೇ ಆವೃತ್ತಿಯಲ್ಲಿ ಯುಪಿ ವಾರಿಯರ್ಸ್ (UP Warriorz)​ ತಂಡವನ್ನು 9 ವಿಕೆಟ್​ಗಳಿಂದ ಮಣಿಸಿದೆ. ಇದರೊಂದಿಗೆ ಸ್ಮೃತಿ ಮಂದನಾ ಬಳಗ ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ನವಿ ಮುಂಬೈನ ಡಾ. ಡಿವೈ ಪಾಟೀಲ್​ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಟೂರ್ನಿಯ 5ನೇ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಯುಪಿ ವಾರಿಯರ್ಸ್​ ತಂಡ ಒಂದು ಹಂತದಲ್ಲಿ 50 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡು ತತ್ತರಿಸಿತು. ಬಳಿಕ ದೀಪ್ತಿ ಶರ್ಮ (45*ರನ್​, 35 ಎಸೆತ, 5 ಬೌಂಡರಿ, 1 ಸಿಕ್ಸರ್​) ಮತ್ತು ಡಿಯೇಂಡ್ರಾ ಡಾಟಿನ್​ (40*ರನ್​, 37 ಎಸೆತ, 3 ಬೌಂಡರಿ, 1 ಸಿಕ್ಸರ್​) ಆಸರೆಯಲ್ಲಿ 5 ವಿಕೆಟ್​ಗೆ 143 ರನ್​ಗಳ ಗೌರವಯುತ ಮೊತ್ತ ಕಲೆಹಾಕಿತು. ದೀಪ್ತಿ-ಡಾಟಿನ್​ ಮುರಿಯದ 6ನೇ ವಿಕೆಟ್​ಗೆ 72 ಎಸೆತಗಳಲ್ಲಿ 93 ರನ್​ ಜತೆಯಾಟವಾಡಿದರು.

ಪ್ರತಿಯಾಗಿ ಆರ್​ಸಿಬಿ 12.1 ಓವರ್​ಗಳಲ್ಲೇ 1 ವಿಕೆಟ್​ಗೆ 145 ರನ್​ ಗಳಿಸಿ ಜಯ ಸಾಧಿಸಿತು. ಹ್ಯಾರಿಸ್​ ಮತ್ತು ನಾಯಕಿ ಸ್ಮೃತಿ ಮಂದನಾ (47*ರನ್​, 32 ಎಸೆತ, 9 ಬೌಂಡರಿ) ಮೊದಲ ವಿಕೆಟ್​ಗೆ 71 ಎಸೆತಗಳಲ್ಲೇ 137 ರನ್​ ಜತೆಯಾಟವಾಡಿ ಗೆಲುವಿನ ಹಾದಿ ಸುಗಮಗೊಳಿಸಿದರು. ಗ್ರೇಸ್​ ಹ್ಯಾರಿಸ್​ 22 ಎಸೆತಗಳಲ್ಲೇ ಅರ್ಧಶತಕ ಪೂರೈಸಿದರು.

ಯುಪಿ ವಾರಿಯರ್ಸ್​: 5 ವಿಕೆಟ್​ಗೆ 143 (ಲ್ಯಾನಿಂಗ್​ 14, ಹರ್ಲೀನ್​ 11, ಲಿಚ್​ಫೀಲ್ಡ್​ 20, ದೀಪ್ತಿ 45*, ಡಾಟಿನ್​ 40*, ಶ್ರೇಯಾಂಕಾ 50ಕ್ಕೆ 2, ನಾಡಿನ್​ 28ಕ್ಕೆ 2). ಆರ್​ಸಿಬಿ: 12.1 ಓವರ್​ಗಳಲ್ಲಿ 1 ವಿಕೆಟ್​ಗೆ 145 (ಹ್ಯಾರಿಸ್​ 85, ಸ್ಮೃತಿ 47*, ರಿಚಾ 4*, ಶಿಖಾ 28ಕ್ಕೆ 1).