WPL: ಮುಂಬೈ ಇಂಡಿಯನ್ಸ್ ಜಯಭೇರಿ; ಗುಜರಾತ್ ಜೈಂಟ್ಸ್ಗೆ ಮೊದಲ ಸೋಲು
ಮುಂಬೈ: ನಾಯಕಿ ಹರ್ಮಾನ್ಪ್ರೀತ್ ಕೌರ್ (71*ರನ್, 43 ಎಸೆತ, 7 ಬೌಂಡರಿ, 2 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ ಬಲದಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians) ತಂಡ ಡಬ್ಲ್ಯುಪಿಎಲ್ (Women''s Premier League) 4ನೇ ಆವೃತ್ತಿಯಲ್ಲಿ ಗುಜರಾತ್ ಜೈಂಟ್ಸ್ (Gujarat Giants) ಎದುರು 7 ವಿಕೆಟ್ಗಳಿಂದ ಗೆಲುವು ಸಾಧಿಸಿದೆ. ಗುಜರಾತ್ಗೆ ಇದು ಟೂರ್ನಿಯಲ್ಲಿ ಮೊದಲ ಸೋಲಾಗಿದೆ.
ನವಿ ಮುಂಬೈನ ಡಾ. ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಟೂರ್ನಿಯ 6ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಗುಜರಾತ್, ಜಾರ್ಜಿಯಾ ವರೆಹ್ಯಾಂ (43*ರನ್, 33 ಎಸೆತ, 4 ಬೌಂಡರಿ, 1 ಸಿಕ್ಸರ್) ಮತ್ತು ಭಾರತಿ ಫುಲ್ಮಲಿ (36*ರನ್, 15 ಎಸೆತ, 3 ಬೌಂಡರಿ, 3 ಸಿಕ್ಸರ್) ದಿಟ್ಟ ಬ್ಯಾಟಿಂಗ್ ನಿರ್ವಹಣೆಯ ನೆರವಿನಿಂದ 5 ವಿಕೆಟ್ಗೆ 192 ರನ್ ಪೇರಿಸಿತು. ಸತತ 3ನೇ ಪಂದ್ಯದಲ್ಲಿ 200 ಪ್ಲಸ್ ಮೊತ್ತ ಪೇರಿಸುವ ಅವಕಾಶದಿಂದ ಗುಜರಾತ್ ಕೇವಲ 8 ರನ್ಗಳಿಂದ ವಂಚಿತವಾಯಿತು. ಬೆತ್ ಮೂನಿ (33 ರನ್, 26 ಎಸೆತ, 3 ಬೌಂಡರಿ, 1 ಸಿಕ್ಸರ್) ಮತ್ತು ಕನಿಕಾ ಅಹುಜಾ (35 ರನ್, 18 ಎಸೆತ, 4 ಬೌಂಡರಿ, 2 ಸಿಕ್ಸರ್) ಗುಜರಾತ್ಗೆ ಉಪಯುಕ್ತ ಕೊಡುಗೆ ನೀಡಿದರು. ಜಾರ್ಜಿಯಾ-ಭಾರತಿ ಮುರಿಯದ 6ನೇ ವಿಕೆಟ್ಗೆ 24 ಎಸೆತಗಳಲ್ಲೇ 56 ರನ್ ಕಸಿಯುವ ಮೂಲಕ ಮೊತ್ತವನ್ನು 200ರ ಸನಿಹ ಕೊಂಡೊಯ್ದರು.
ಪ್ರತಿಯಾಗಿ ಮುಂಬೈ ಆರಂಭಿಕ ಆಘಾತದ ಬಳಿಕ ಅಮನ್ಜೋತ್ ಕೌರ್ (40) ಮತ್ತು ಹರ್ಮಾನ್ಪ್ರೀತ್ ಹೋರಾಟದಿಂದ ಚೇತರಿಕೆ ಕಂಡಿತು. ಅಂತಿಮವಾಗಿ ಮುಂಬೈ 19.2 ಓವರ್ಗಳಲ್ಲಿ 3 ವಿಕೆಟ್ಗೆ 193 ರನ್ ಗಳಿಸಿ ಜಯಭೇರಿ ಬಾರಿಸಿತು. ಕೊನೆಯಲ್ಲಿ ಹರ್ಮಾನ್ಪ್ರೀತ್ಗೆ ನಿಕೋಲ ಕ್ಯಾರಿ (38*) ಉತ್ತಮ ಬೆಂಬಲ ಒದಗಿಸಿದರು.
ಮುಂಬೈ ಪರ ನ್ಯಾಟ್ ಸೀವರ್ ಬ್ರಂಟ್ ಬದಲಿಗೆ ಹ್ಯಾಲಿ ಮ್ಯಾಥ್ಯೂಸ್ ಕಣಕ್ಕಿಳಿದರು. ನ್ಯಾಟ್ ಸೀವರ್ ಅನಾರೋಗ್ಯದಿಂದಾಗಿ ಪಂದ್ಯ ತಪ್ಪಿಸಿಕೊಂಡರು.
ಗುಜರಾತ್ ಜೈಂಟ್ಸ್: 5 ವಿಕೆಟ್ಗೆ 192 (ಮೂನಿ 33, ಡಿವೈನ್ 8, ಕನಿಕಾ 35, ಗಾರ್ಡ್ನರ್ 20, ಜಾರ್ಜಿಯಾ 43*, ಭಾರತಿ 36*, ಶಬ್ನಿಮ್ 25ಕ್ಕೆ 1, ಅಮೆಲಿಯಾ 40ಕ್ಕೆ 1, ಮ್ಯಾಥ್ಯೂಸ್ 34ಕ್ಕೆ 1). ಮುಂಬೈ ಇಂಡಿಯನ್ಸ್: 19.2 ಓವರ್ಗಳಲ್ಲಿ 3 ವಿಕೆಟ್ಗೆ 193 (ಕಮಲಿನಿ 13, ಮ್ಯಾಥ್ಯೂಸ್ 22, ಅಮನ್ಜೋತ್ 40, ಹರ್ಮಾನ್ಪ್ರೀತ್ 71*, ನಿಕೋಲ ಕ್ಯಾರಿ 38*, ಡಿವೈನ್ 29ಕ್ಕೆ 1, ಕಾಶ್ವಿ 33ಕ್ಕೆ 1).