ಮುಂಬೈ ತೊರೆದ ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಬೆಂಗಳೂರಿಗೆ ಶಿಫ್ಟ್!
ನವದೆಹಲಿ: ಮುಂದಿನ 5ರಿಂದ 6 ವರ್ಷ ರಾಷ್ಟ್ರೀಯ ತಂಡದಲ್ಲಿ ಕಾಯಂ ಆಟಗಾರನಾಗಿ ಸ್ಥಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತನ್ನ ವಾಸ ಸ್ಥಳ ಹಾಗೂ ತರಬೇತಿ ಕೇಂದ್ರವನ್ನು ಮುಂಬೈನಿಂದ ಬೆಂಗಳೂರಿಗೆ (Bengaluru) ಬದಲಾಯಿಸಿಕೊಂಡಿದ್ದಾರೆ.
ಪದೇ ಪದೆ ಗಾಯದ ಸಮಸ್ಯೆಗೆ ತುತ್ತಾಗುತ್ತಿರುವ 32 ವರ್ಷದ ಹಾರ್ದಿಕ್, ಪುನಶ್ಚೇತನಕ್ಕೆ ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರಕ್ಕೆ (ಸಿಒಇ) ಆಗಮಿಸಬೇಕಾಗುತ್ತದೆ. ಆದ್ದರಿಂದ ಬಿಸಿಸಿಐ ಸಿಒಇಯನ್ನು ತರಬೇತಿ ಕೇಂದ್ರವನ್ನಾಗಿ ಆಯ್ಕೆ ಮಾಡಿಕೊಂಡಿರುವ ಅವರು ಮುಂದಿನ ಕೆಲ ವರ್ಷ ಬೆಂಗಳೂರಿನಲ್ಲಿ ನೆಲೆಸಲಿದ್ದು, ಬಿಸಿಸಿಐ ಸಿಒಇಯನ್ನು ತರಬೇತಿ ಕೇಂದ್ರವನ್ನಾಗಿಸಿಕೊಂಡ ಭಾರತದ ಮೊದಲ ಕ್ರಿಕೆಟಿಗ ಎನಿಸಿದ್ದಾರೆ. ಮೂಲತ ಗುಜರಾತ್‌ನ ಬರೋಡದವರಾಗಿರುವ ಹಾರ್ದಿಕ್ ಕಳೆದ 10 ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದು, ಅಭ್ಯಾಸಕ್ಕಾಗಿ ಮುಂಬೈ ಇಂಡಿಯನ್ಸ್ ಅಕಾಡೆಮಿಯ ಸೌಲಭ್ಯ ಬಳಸಿಕೊಳ್ಳುತ್ತಿದ್ದರು.
ತರಬೇತಿಗಾಗಿ ತನ್ನ ಲೋವರ್ ಪರೇಲ್ ನಿವಾಸದಿಂದ ಪ್ರತಿದಿನ ಪ್ರಯಾಣಿಸುವುದು ಸಮಸ್ಯೆಯಾಗಿದ್ದರಿಂದ ಹಾರ್ದಿಕ್ ಮುಂಬೈ ತೊರೆಯಲು ನಿರ್ಧರಿಸಿದ್ದಾರೆ. ಕೇಂದ್ರೀಯ ಗುತ್ತಿಗೆ ಹೊಂದಿರುವ ಕ್ರಿಕೆಟಿಗರು, ಗಾಯ ಸಮಸ್ಯೆ ನಿರ್ವಹಣೆಯಿಂದ ಕೌಶಲ ತರಬೇತಿಯವರೆಗೆ ಸಿಒಇನಲ್ಲಿರುವ ಸೌಲಭ್ಯ ಬಳಸಿಕೊಳ್ಳಲು ಮುಕ್ತ ಅವಕಾಶ ಹೊಂದಿರಲಿದ್ದಾರೆ. ಆದ್ದರಿಂದ,ಕಳೆದ ಆರು ತಿಂಗಳಿನಿಂದ ಸಿಒಇಯಲ್ಲಿದ್ದ ಹಾರ್ದಿಕ್, ಈಗಾಗಲೇ ಬೆಂಗಳೂರಿನ ಹೊರವಲಯದಲ್ಲಿ ಜಾಗವನ್ನು ಬಾಡಿಗೆಗೆ ಪಡೆದುಕೊಂಡಿದ್ದಾರೆ. ತನ್ನದೇ ಸ್ವಂತ ಖರ್ಚಿನೊಂದಿಗೆ ಕೆಲ ಸಿಬ್ಬಂದಿಯನ್ನು ನೇಮಿಸಿಕೊಂಡಿರುವ ಹಾರ್ದಿಕ್ ತನ್ನ ತರಬೇತಿ ಅವಧಿಯಲ್ಲಿ ನೆರವಾಗಲಿರುವ ಸಿಒಇ ನೆಟ್ ಬೌಲರ್‌ಗಳಿಗೂ ಸ್ವಂತ ಜೇಬಿನಿಂದ ಹಣ ಪಾವತಿಸಲಿದ್ದಾರೆ.