- ಮುಂಬೈ ಇಂಡಿಯನ್ಸ್ಗೆ ಬ್ಯಾಕ್ ಟು ಬ್ಯಾಕ್ ಸೋಲು
- ತಂಡದ ಸರಣಿ ಸೋಲಿನ ಬೆನ್ನಲ್ಲೇ ಹಾರ್ದಿಕ್ ಕ್ಯಾಪ್ಟನ್ಸಿ ಮೇಲೆ ಕಣ್ಣು
- ಮುಂಬೈ ಇಂಡಿಯನ್ಸ್ ನಾಯಕತ್ವವನ್ನು ರೋಹಿತ್ಗೆ ವಾಪಾಸ್ ಕೊಡು ಎಂದ ಮಾಜಿ ಕ್ರಿಕೆಟಿಗ
Mumbai Indians: ನಿನ್ನೆ (ಏ.16) ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 19ನೇ ಆವೃತ್ತಿಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು 7 ವಿಕೆಟ್ಗಳ ಹೀನಾಯ ಸೋಲುಂಡ ಮುಂಬೈ ಇಂಡಿಯನ್ಸ್ಗೆ ಸದ್ಯ ಕ್ರಿಕೆಟ್ ಪ್ರಿಯರಿಂದ ಭಾರೀ ಟೀಕೆಗಳು ಹರಿದುಬರುತ್ತಿವೆ.
ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಗೆಲುವು ಸಾಧಿಸಲು ತೀರ ಹೆಣಗಾಡುತ್ತಿರುವ ತಂಡ, ಆಡಿರುವ ಐದು ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ ಒಂದೇ ಒಂದು ಮ್ಯಾಚ್. ಸರಣಿ ಸೋಲಿಗೆ ಮುಖ್ಯವಾಗಿ, ತಂಡದಲ್ಲಿನ ಒಡಕು ಅಥವಾ ಮನಸ್ತಾಪಗಳೇ ಕಾರಣ ಎಂಬ ಮಾತುಗಳು ಸದ್ಯ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿವೆ. ಈ ಮಧ್ಯೆ, ಎಂಐ ತಂಡದ ಜವಾಬ್ದಾರಿಯನ್ನು ವಾಪಾಸ್ ರೋಹಿತ್ ಶರ್ಮಗೆ ಹಸ್ತಾಂತರಿಸುವಂತೆ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಹೇಳಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಐದು ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿರುವ ತಂಡ ಈಗ ಒಂದೇ ಒಂದು ಗೆಲುವಿಗೆ ಇಷ್ಟೊಂದು ಕಷ್ಟಪಡುತ್ತಿರುವುದನ್ನು ನೋಡಲು ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. ಪಂಜಾಬ್ ಕಿಂಗ್ಸ್ ಎದುರು ತನ್ನ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ಯುವಲ್ಲಿ ಎಡವಿದ ಹಾರ್ದಿಕ್, ಯಾರನ್ನು ಯಾವ ಹಂತದಲ್ಲಿ, ಸಮಯದಲ್ಲಿ ಆಡಿಸಬೇಕೆಂಬ ವಿಷಯದಲ್ಲಿ ಮಾಡಿದ ಮಿಸ್ಟೇಕ್ಗಳಿಗೆ ತಿವಾರಿ ಕಿಡಿಕಾರಿದ್ದಾರೆ.
ಈ ಕುರಿತು ಕ್ರಿಕ್ ಬಜ್ ಜೊತೆ ಮಾತನಾಡಿದ ಮನೋಜ್ ತಿವಾರಿ, ಫ್ರಾಂಚೈಸಿಯ ನಾಯಕತ್ವವನ್ನು ಆಲ್ರೌಂಡರ್ ವಹಿಸಿಕೊಂಡಾಗಿನಿಂದ ಉತ್ತಮ ಪ್ರದರ್ಶನ ಬಂದಿಲ್ಲ. ನೀವು ಹೇಗೆ ಆಡುತ್ತಿದ್ದೀರಿ ಎಂಬುದನ್ನು ಒಮ್ಮೆ ಗಮನಿಸಬೇಕು. ತಂಡದ ಹಿನ್ನೆಲೆ ಕೂಡ ಗಮನಿಸಬೇಕು. 2015ರಿಂದ 2023, ರೋಹಿತ್ ಶರ್ಮ ತಮ್ಮ ತಂಡಕ್ಕೆ ಹಲವು ಟ್ರೋಫಿಗಳನ್ನು ತಂದುಕೊಟ್ಟಿದ್ದಾರೆ ಎಂದರು.
"2023ರಲ್ಲಿ, ಟ್ರೋಫಿ ಸಿಗಲಿಲ್ಲ. ಅದೇ 2024ರಲ್ಲಿಯೂ ಚಾಂಪಿಯನ್ಸ್ ಪಟ್ಟ ಲಭಿಸಲಿಲ್ಲ. ಇನ್ನು ಈ ವರ್ಷವೂ ಅದೇ ನಡೆಯುವ ಸಾಧ್ಯತೆಗಳು ಹೆಚ್ಚಿವೆ. ಇಲ್ಲಿ ಆಗಿರುವುದು ನಾಯಕತ್ವದಲ್ಲಿನ ದುರ್ಬಲತೆ ಎಂಬುದು ನನ್ನ ಭಾವನೆ. ಒಬ್ಬ ಕ್ಯಾಪ್ಟನ್ ಪೂರ್ವಭಾವಿಯಾಗಿರುವುದು ಬಹಳ ಮುಖ್ಯ. ಪರಿಹಾರದ ಅಗತ್ಯವಿದ್ದರೆ, ಖಂಡಿತ ಹಾರ್ದಿಕ್ ನಾಯಕತ್ವದಿಂದ ಹಿಂದೆ ಸರಿದು, ಆ ಜವಾಬ್ದಾರಿಯನ್ನು ಮತ್ತೆ ರೋಹಿತ್ಗೆ ಹಸ್ತಾಂತರಿಸಿ. ಇದೇ ನೀವು ರೋಹಿತ್ ಅವರನ್ನು ತೆಗೆದುಹಾಕಿದಾಗ, ಅವರಿಗೆ ಅನ್ಯಾಯ ಮಾಡಿದ್ದೀರಿ" ಎಂದು ಹೇಳಿದ್ದಾರೆ,(ಏಜೆನ್ಸೀಸ್).