- 3ನೇ ಟಿ20 ಪಂದ್ಯದಲ್ಲಿ ಮೈಲಿಗಲ್ಲು ತಲುಪಲು ಹಾರ್ದಿಕ್ ಪಾಂಡ್ಯ ಕಣ್ಣು
- ಧರ್ಮಶಾಲಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20
- ಟಿ20 ಸರಣಿಯಲ್ಲಿ ಮುನ್ನಡೆ ಸಾಧಿಸಲು ಟೀಮ್ ಇಂಡಿಯಾ ತವಕ
ನವದೆಹಲಿ: ಪ್ರಸಕ್ತ, ತವರಿನಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯ ನಾಳೆ (ಡಿ.14) ಧರ್ಮಶಾಲಾದಲ್ಲಿ ನಡೆಯಲಿದೆ. ಮೊದಲ ಟಿ20 ಭಾರತ ಗೆದ್ದರೆ, ಎರಡನೇ ಪಂದ್ಯವನ್ನು ಹರಿಣರ ಪಡೆ ಗೆದ್ದು ಬೀಗಿತು. ಸರಣಿಯಲ್ಲಿ ಮುನ್ನಡೆ ಸಾಧಿಸಲು ಎರಡೂ ತಂಡಗಳು ಭಾರೀ ಪೈಪೋಟಿಗಿಳಿದಿದ್ದು, ಮೂರನೇ ಟಿ20 ಮೇಲೆ ಸದ್ಯ ಕ್ರಿಕೆಟ್ ಪ್ರಿಯರ ಕುತೂಹಲ ಮೂಡಿದೆ.
ಈ ಸಂದರ್ಭದಲ್ಲಿ, ಮ್ಯಾಚ್ ಅತ್ಯಂತ ರೋಮಾಂಚಕಾರಿ ಪಂದ್ಯವಾಗುವ ಎಲ್ಲ ಸಾಧ್ಯತೆಗಳಿವೆ. ಮೊದಲ ಪಂದ್ಯದಿಂದಲೂ ಎರಡು ತಂಡಗಳು ಉತ್ತಮ ಪ್ರದರ್ಶನ ನೀಡುತ್ತಿರುವುದು ಇದೀಗ ಕ್ರೀಡಾಭಿಮಾನಿಗಳ ಲೆಕ್ಕಾಚಾರಗಳನ್ನೇ ಗೊಂದಲಕ್ಕೆ ದೂಡಿದೆ. ಕಾರಣ, ದಕ್ಷಿಣ ಆಫ್ರಿಕಾ ಮತ್ತು ಟೀಮ್ ಇಂಡಿಯಾ ತಂಡಗಳ ಬಲಿಷ್ಠ ಪೈಪೋಟಿ. ಸರಣಿಯಲ್ಲಿ ಮುನ್ನಡೆ ಸಾಧಿಸಿ, ಸರಣಿ ಗೆಲ್ಲುವ ತವಕ ಎರಡು ತಂಡಗಳಿಗಿದ್ದರೆ, ಅತ್ತ 3ನೇ ಟಿ20 ಮ್ಯಾಚ್ನಲ್ಲಿ ಹೊಸ ಮೈಲಿಗಲ್ಲು ತಲುಪಲು ಹಾರ್ದಿಕ್ ಪಾಂಡ್ಯ ಎದುರುನೋಡುತ್ತಿದ್ದಾರೆ.
ಈ ಪಂದ್ಯಕ್ಕೂ ಮುನ್ನ, ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮೈಲಿಗಲ್ಲನ್ನು ಸಂಭ್ರಮಿಸುವ ಹಾದಿಯಲ್ಲಿದ್ದಾರೆ. 3ನೇ ಪಂದ್ಯದಲ್ಲಿ ಹಾರ್ದಿಕ್ ಒಂದೇ ಒಂದು ವಿಕೆಟ್ ಪಡೆದರೆ, ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 100 ವಿಕೆಟ್‌ಗಳ ಮೈಲಿಗಲ್ಲನ್ನು ತಲುಪುತ್ತಾರೆ. ಅದೇ ರೀತಿ, ಪಾಂಡ್ಯ ಟೀಮ್ ಇಂಡಿಯಾ ಪರ ಟಿ20ಯಲ್ಲಿ 100 ವಿಕೆಟ್ ಪಡೆದ ಮೂರನೇ ಬೌಲರ್ ಆಗಿ ಹೊರಹೊಮ್ಮಲಿದ್ದಾರೆ. ಇದುವರೆಗೆ ಅರ್ಷ್ದೀಪ್ ಸಿಂಗ್ ಮತ್ತು ಜಸ್‌ಪ್ರೀತ್ ಬುಮ್ರಾ ಮಾತ್ರ ಈ ಸಾಧನೆಗೈದಿದ್ದಾರೆ ಎಂಬುದು ಗಮನಾರ್ಹ.
ಇದುವರೆಗೆ ಹಾರ್ದಿಕ್, 122 ಟಿ20 ಪಂದ್ಯಗಳನ್ನಾಡಿದ್ದಾರೆ. ಅವರು 99 ವಿಕೆಟ್‌ಗಳನ್ನು ಪಡೆದಿದ್ದು, ಮೂರು ಬಾರಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್‌ಗಳು ಯಾರೆಲ್ಲ? ಈ ಪಟ್ಟಿಯಲ್ಲಿ ಹಾರ್ದಿಕ್ ಯಾವ ಸ್ಥಾನದಲ್ಲಿದ್ದಾರೆ? ಎಂಬ ಮಾಹಿತಿ ಹೀಗಿದೆ ನೋಡಿ.
ಅರ್ಷ್ದೀಪ್ ಸಿಂಗ್ - 107 ವಿಕೆಟ್
ಜಸ್ಪ್ರೀತ್ ಬುಮ್ರಾ - 79 ವಿಕೆಟ್
ಹಾರ್ದಿಕ್ ಪಾಂಡ್ಯ - 99 ವಿಕೆಟ್
ಯುಜ್ವೇಂದ್ರ ಚಾಹಲ್ - 96 ವಿಕೆಟ್
ಭುವನೇಶ್ವರ್ ಕುಮಾರ್ - 90 ವಿಕೆಟ್