ಗುಜರಾತ್ ಟೈಟಾನ್ಸ್ ಸೇರಲು ಬಯಸಿರುವ ಹಾರ್ದಿಕ್ ಪಾಂಡ್ಯ
- ಮುಂಬೈ ಇಂಡಿಯನ್ಸ್ ತೊರೆಯಲು ಮುಂದಾದ ಹಾರ್ದಿಕ್ ಪಾಂಡ್ಯ
- ಗುಜರಾತ್ ಟೈಟಾನ್ಸ್ ಸೇರಲು ಬಯಸಿರುವ ಮಾಜಿ ನಾಯಕ
- ಹಾರ್ದಿಕ್ ತಂಡಕ್ಕೆ ಮರಳಿದರೆ ಸಂತೋಷ: ಶುಭಮನ್ ಗಿಲ್
ಮುಂಬೈ: ಭಾರತದಲ್ಲಿ ಕ್ರಿಕೆಟ್ ಅನ್ನು ಕೇವಲ ಒಂದು ಕ್ರೀಡೆಯನ್ನಾಗಲ್ಲ, ಬದಲಿಗೆ ಒಂದು ಎಮೊಷನ್ ರೀತಿಯಲ್ಲಿ ನೋಡಲಾಗುತ್ತದೆ. ಕ್ರಿಕೆಟ್ ಆಟಗಾರರನ್ನು ತಮ್ಮ ಮನೆ ಮಗ, ಆರಾಧ್ಯ ದೈವವೆಂಬಂತೆ ಬಿಂಬಿಸಲಾಗುತ್ತದೆ. ಅದರಲ್ಲೂ ಈ ಐಪಿಎಲ್ ಎಂದರೆ ಭಾರತದಲ್ಲಿ ನಡೆಯುವ ಕ್ರಿಕೆಟ್ ಉತ್ಸವವೆಂದೇ ಬಣ್ಣಿಸಲಾಗುತ್ತದೆ.
2027 ರಲ್ಲಿ ನಡೆಯಲಿರುವ 20 ನೇ ಆವೃತ್ತಿಯ ಐಪಿಎಲ್ ಪ್ರಾರಂಭಕ್ಕೆ ಇನ್ನೂ ಬಹಳ ಸಮಯವಿದ್ದರೂ ಕೂಡ ಈಗಲೇ ಆಟಗಾರರ ಅದಲಿ-ಬದಲಿ ಬಗ್ಗೆ ಸುದ್ದಿ ಜೋರಾಗಿದೆ. ಅದರಲ್ಲೂ 2026 ರ ಐಪಿಎಲ್ ಮುಗಿದ ದಿನದಿಂದಲೇ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಅವರ ಚರ್ಚೆ ಸ್ವಲ್ಪ ಮಟ್ಟಿಗೆ ಹೆಚ್ಚೆ ಸೌಂಡ್ ಮಾಡುತ್ತಿದೆ.
ಗುಜರಾತ್ ಮರಳಲಿದ್ದಾರಾ ಹಾರ್ದಿಕ್?
2026 ರ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದ ಹಾರ್ದಿಕ್, ನಾಯಕನಾಗಿ ತಂಡವನ್ನು ಮುನ್ನಡೆಸುವಲ್ಲಿ ವಿಫಲವಾಗಿದ್ದರು. ಇದು ತಂಡದ ಆಟಗಾರರ ಜೊತೆಗೆ ಅಭಿಮಾನಿಗಳಿಗೆ ಕೂಡ ಬೇಸರ ತರಿಸಿತ್ತು. ಹೀಗಾಗಿ 2027 ರಲ್ಲಿ ಪಾಂಡ್ಯ ಮುಂಬೈ ತೊರೆಯಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.
ಈಗ ಈ ವದಂತಿ ಸಾಲಿಗೆ ಇನ್ನೊಂದು ತಂಡ ಸೇರ್ಪಡೆಯಗಿದ್ದು, ಈ ಹಿಂದೆ ಯಾವ ತಂಡಕ್ಕೆ ಚೊಚ್ಚಲ ಐಪಿಎಲ್ ಟ್ರೋಫಿ ತಂದುಕೊಟ್ಟಿದ್ದನೋ ಅದೇ ತಂಡಕ್ಕೆ ಹಾರ್ದಿಕ್ ಮರಳಲಿದ್ದಾರೆ ಎಂದು ಹೇಳಲಾಗುತ್ತಿದೆ. 2022 ರಲ್ಲಿ ಗುಜರಾತ್ ಟೈಟಾನ್ಸ್ ತಂಡ ಸೇರ್ಪಡೆಯಾದಾಗ ಹಾರ್ದಿಕ್ ಪಾಂಡ್ಯ ಈ ತಂಡದ ನಾಯಕತ್ವ ನಿರ್ವಹಿಸಿ ಮೊದಲ ಸೀಸನ್ನಲ್ಲಿಯೇ ಕಪ್ ಎತ್ತಿದ್ದರು.
ಈಗ, ಮುಂಬೈ ತಂಡವನ್ನು ಬಿಟ್ಟು ಬೇರೆಡೆ ಹೋಗಲು ಮುಂದಾದರೆ ಗುಜರಾತ್ ಟೈಟನ್ಸ್ ಪಾಂಡ್ಯನ ಮೊದಲ ಆದ್ಯತೆ ಆಗಿರಲಿದೆ ಎಂದು ಹೇಳಲಾಗುತ್ತಿದೆ.
ಗಿಲ್ ಹೇಳಿಕೆ ವೈರಲ್!
ಸದ್ಯ ಟೀಂ ಇಂಡಿಯಾದ ಏಕದಿನ ತಂಡದ ನಾಯಕ ಹಾಗೂ ಹಾಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿರುವ ಶುಭಮನ್ ಗಿಲ್ ಕೂಡ, ಹಾರ್ದಿಕ್ ನಮ್ಮ ತಂಡವನ್ನು ಸೇರಿದ್ದರೆ ಚೆನ್ನಾಗಿರುತ್ತದೆ. ಅವರು ತಮ್ಮ ಹಳೆಯ ತಂಡಕ್ಕೆ ಮರಳಿದರೆ ಯಾರಿಗೂ ಏನು ತೊಂದರೆಯಿಲ್ಲ ಎಂದು ಹೇಳಿದ್ದಾರೆಂದು ಗುಪ್ತ ಮಾಹಿತಿ ಲಭ್ಯವಾಗಿದೆ.
ಹಾರ್ದಿಕ್ ಪಡೆಯಲು ಹರಸಾಹಸ!
ಹಾರ್ದಿಕ್ ತಂಡದ ನಾಯಕತ್ವ ವಹಿಸಿಕೊಂಡ ವರ್ಷದಿಂದ ಮುಂಬೈ ತಂಡದ ಪ್ರದರ್ಶನ ಕಳಪೆಯಾಗುತ್ತಿರುವುದು ಇದಕ್ಕೆ ಮೂಲ ಕಾರಣ ಎಂದು ಹೇಳಲಾಗುತ್ತಿದೆ. ಆದ್ದರಿಂದ 2027 ರ ಐಪಿಎಲ್ನಲ್ಲಿ ಹಾರ್ದಿಕ್ ಪಾಂಡ್ಯ ಬೇರೆ ತಂಡವನ್ನು ಸೇರಲಿದ್ದಾರೆಂದು ಹೇಳಲಾಗುತ್ತಿದೆ.
ಮಾಹಿತಿ ಪ್ರಕಾರ, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್, ರಾಜಸ್ಥಾನ್ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಹಾರ್ದಿಕ್ನನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಯೋಜನೆ ರೂಪಿಸುತ್ತಿವೆ ಎಂದು ತಿಳಿದು ಬಂದಿದೆ.
ಯಾರ್ಯಾರ ಆಫರ್ ಏನಿದೆ?
ಮಾಹಿತಿ ಪ್ರಕಾರ, ಹಾರ್ದಿಕ್ ಪಾಂಡ್ಯನನ್ನು ಹರಾಜಿನಲ್ಲಿ ಖರೀದಿಸಲು ಮುಂದಾದರೆ ಭಾರಿ ಮೊತ್ತ ಖರ್ಚಾಗುವ ಕಾರಣ ತಮ್ಮಲ್ಲಿರುವ ಒಬ್ಬ ಆಟಗಾರನನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ಕೊಟ್ಟು, ಅಲ್ಲಿಂದ ಹಾರ್ದಿಕ್ನನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಕೆಲ ತಂಡಗಳು ಮುಂದಾಗಿವೆ ಎಂದು ಹೇಳಲಾಗುತ್ತಿದೆ.
ಮೊದಲಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ತಮ್ಮ ತಂಡದಲ್ಲಿರುವ ಆಲ್-ರೌಂಡರ್ ಆಟಗಾರ ಅಕ್ಷರ್ ಪಟೇಲ್ನನ್ನು ಎಂಐ ಗೆ ನೀಡಿ ಹಾರ್ದಿಕ್ನನ್ನು ಪಡೆಯಲು ಮುಂದಾದರೆ, ಲಕ್ನೋ ತಂಡ ನಿಕೊಲಸ್ ಪೂರನ್ ಬದಲಿಗೆ ಹಾರ್ದಿಕ್ನನ್ನು ಪಡೆಯಲು ಯೋಜನೆ ರೂಪಿಸುತ್ತಿದ್ದರೆ, ಕೆಕೆಆರ್ ಕೆಮರಾನ್ ಗ್ರಿನ್ನನ್ನು ಮುಂಬೈಗೆ ನೀಡಿ ಪಾಂಡ್ಯನನ್ನು ಪಡೆಯಲು ಪ್ಲಾನ್ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸಿಎಸ್ಕೆ ಮತ್ತು ರಾಜಸ್ಥಾನ್ ತಂಡಗಳು ಕೂಡ ಇದೇ ತಂತ್ರಕ್ಕೆ ಮುಂದಾಗಿದ್ದು, ಚೆನ್ನೈ ಶಿವಂ ದುಬೆ, ಆಯುಶ್ ಮಾತ್ರೆ ಹಾಗೂ ಬ್ರೆವಿಸ್ ಈ ಮೂವರಲ್ಲಿ ಒಬ್ಬರನ್ನು ಮುಂಬೈಗೆ ನೀಡಲು ಮುಂದಾಗಿದ್ದರೆ, ರಾಜಸ್ಥಾನ್ ತನ್ನ ತಂಡದ ಓಪನರ್ ಯಶಸ್ವಿ ಜೈಸ್ವಾಲ್ನನ್ನು ಮುಂಬೈ ತಂಡಕ್ಕೆ ನೀಡಿ ಹಾರ್ದಿಕ್ನನ್ನು ತನ್ನದಾಗಿಸಿಕೊಳ್ಳಲು ಮ್ಯಾನೆಜ್ಮೆಂಟ್ ಜೊತೆ ಚರ್ಚೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್).