ಮುಂಬೈ ಇಂಡಿಯನ್ಸ್ ತೊರೆಯಲಿದ್ದಾರಾ ಹಾರ್ದಿಕ್ ಪಾಂಡ್ಯ?
- ಮುಂಬೈ ಇಂಡಿಯನ್ಸ್ ತೊರೆಯಲಿದ್ದಾರಾ ಹಾರ್ದಿಕ್ ಪಾಂಡ್ಯ?
- ಕೆಕೆಆರ್ ಸೇರಲಿದ್ದಾರೆ ಎಂಬ ವದಂತಿಗೆ ಕಾರಣವಾದ ಪೋಸ್ಟ್
- ಹೆಚ್ಪಿ ಬರೆದು ನೇರಳೆ ಹಾರ್ಟ್ ಚಿತ್ರವಿರುವ ಪೋಸ್ಟ್
ಕ್ರಿಕೆಟ್: ಐಪಿಎಲ್ನ 20 ನೇ ಸಿಸನ್ ಅಂದರೆ 2027 ನೇ ಇಸವಿ (ಮುಂದಿನ ವರ್ಷ) ಯ ಟೂರ್ನಿಗೆ ಇನ್ನೂ ಬಹಳ ಸಮಯವಿದೆ. ಆದರೆ ಈ ವರ್ಷ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ವಿಫಲನಾದ ಹಾರ್ದಿಕ್ ಪಾಂಡ್ಯ (Hardik Pandya) ಕುರಿತಾದ ಚರ್ಚೆಗಳು ಈಗಲೇ ಆರಂಭವಾಗಿದೆ.
2026 ರಲ್ಲಿ ನಡೆದ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಕಳಪೆ ಪ್ರದರ್ಶನ ನೀಡಿದ್ದ ಹಿನ್ನಲೆ, ಮ್ಯಾನೇಜ್ಮೆಂಟ್ ಪಾಂಡ್ಯಾನ ಮೇಲೆ ಕುಪಿತವಾಗಿದೆ, ಹಾಗೆಯೇ ಪಾಂಡ್ಯ ಕೂಡ ಮುಂದಿನ ವರ್ಷ ಬೇರೆ ತಂಡವನ್ನು ಸೇರಲಿದ್ದಾರೆ ಎಂಬ ವದಂತಿ ಕ್ರಿಕೆಟ್ ದುನಿಯಾನಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದೆ.
ಕೆಲ ದಿನಗಳ ಹಿಂದೆ ಖ್ಯಾತ ಕ್ರೀಡಾ ಪತ್ರಕರ್ತರೊಬ್ಬರು ಮಾಡಿರುವ ಪೋಸ್ಟ್ವೊಂದು ಸೋಷಿಯಲ್ ಮೀಡಿಯಾನಲ್ಲಿ ಸಕ್ಕತ್ ವೈರಲ್ ಆಗುತ್ತಿದ್ದು, ಅದನ್ನು ನೋಡಿರುವ ಪಾಂಡ್ಯ ಫ್ಯಾನ್ಸ್ ಬೆರಗಾಗಿದ್ದಾರೆ.
ಆ ಪೋಸ್ಟ್ನಲ್ಲೇನಿದೆ?
ಪ್ರಸಿದ್ಧ ಕ್ರೀಡಾ ಪತ್ರಕರ್ತ ರೋಹಿತ್ ಜುಗ್ಲಾನ್, ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಖಾತೆಯಲ್ಲಿ ಹಂಚಿಕೊಂಡ ಒಂದು ರಹಸ್ಯ ಪೋಸ್ಟ್ ಈ ಎಲ್ಲಾ ಊಹಾಪೋಹಗಳಿಗೆ ಕಾರಣವಾಗಿದೆ. ನೇರಳೆ ಬಣ್ಣದ ಹಾರ್ಟ್ ಎಮೋಜಿ ಜೊತೆಗೆ "HP" ಎಂಬ ಅಕ್ಷರಗಳನ್ನು ಹಾಕಿ ಅವರು ಪೋಸ್ಟ್ ಮಾಡಿದ್ದರು.
ಈ ಪೋಸ್ಟ್ನ್ನು ನೋಡಿರುವ ಕ್ರೀಡಾಭಿಮಾನಿಗಳು, HP ಎಂದರೆ ಹಾರ್ದಿಕ್ ಪಾಂಡ್ಯ, ನೇರಳೆ ಬಣ್ಣ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಬಣ್ಣವಾಗಿದ್ದು, ಪಾಂಡ್ಯ ಮುಂದಿನ ಸೀಸನ್ ಕೆಕೆಆರ್ ಪರ ಆಡಲಿದ್ದಾರೆಂದು ವದಂತಿ ಹಬ್ಬಿಸುತ್ತಿದ್ದಾರೆ.
ಮುಂಬೈ ಇಂಡಿಯನ್ಸ್ ಜೊತೆಗಿನ ಅತೃಪ್ತಿ!
ಗುಜರಾತ್ ಟೈಟಾನ್ಸ್ ತಂಡದಿಂದ ಮುಂಬೈ ಇಂಡಿಯನ್ಸ್‌ಗೆ ಮರಳಿದ ಬಳಿಕ ಹಾರ್ದಿಕ್ ಪಾಂಡ್ಯ ರೋಹಿತ್ ಶರ್ಮಾ ಬದಲಿಗೆ ಮುಂಬೈ ತಂಡದ ನಾಯಕನಾಗಿ ಜವಾಬ್ದಾರಿ ತೆಗೆದುಕೊಂಡಿದ್ದರು.
ಆದರೆ, ಕಳೆದ ಕೆಲವು ಸೀಸನ್‌ಗಳಲ್ಲಿ ಮುಂಬೈ ಇಂಡಿಯನ್ಸ್ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಮೈದಾನದಲ್ಲಿ ಅಭಿಮಾನಿಗಳ ಆಕ್ರೋಶ ಹಾಗೂ ತಂಡದೊಳಗಿನ ಬದಲಾವಣೆಗಳಿಂದಾಗಿ ಹಾರ್ದಿಕ್ ಪಾಂಡ್ಯ ಮುಂಬೈ ಫ್ರಾಂಚೈಸಿಯನ್ನು ತೊರೆಯಲು ಬಯಸಿದ್ದಾರೆ ಎಂಬ ಮಾತುಗಳು ಕ್ರಿಕೆಟ್ ಕಾರಿಡಾರ್‌ನಲ್ಲಿ ಕೇಳಿಬರುತ್ತಿವೆ.
ಇನ್ನು ಅಧಿಕೃತ ಹೇಳಿಕೆ ಹೊರಬಂದಿಲ್ಲ!
2026 ರ ಐಪಿಎಲ್ ಮುಗಿದ ಮಾರನೇ ದಿನದಿಂದ ಹಾರ್ದಿಕ್ ಪಾಂಡ್ಯ, ಮುಂಬೈ ಇಂಡಿಯನ್ಸ್‌ಗೆ ಗುಡ್ ಬೈ ಹೇಳಲಿದ್ದಾರೆಂದು ಹೇಳಲಾಗುತ್ತಿದೆ. ಕೆಲ ತಿಂಗಳುಗಳ ಹಿಂದೆ ಪಾಂಡ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಲಿದ್ದಾರೆ, ಈ ಕುರಿತು ಅವರು ಎಂ.ಎಸ್.ಧೋನಿ ಜತೆ ಚರ್ಚೆ ನಡೆಸುತ್ತಿದ್ದಾರೆಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈಗ ಪಾಂಡ್ಯ ಕೆಕೆಆರ್ ಸೇರಲಿದ್ದಾರೆಂದು ಹೇಳಲಾಗುತ್ತಿದೆ.
ಆದರೆ ಈ ಕುರಿತು, ಹಾರ್ದಿಕ್ ಪಾಂಡ್ಯ ಆಗಲೀ, ಮುಂಬೈ ಇಂಡಿಯನ್ಸ್ ಆಗಲೀ ಅಥವಾ ಅವರ ಹೆಸರು ತಳುಕು ಹಾಕಿಕೊಂಡ ಇತರ ತಂಡಗಳಾಗಲಿ ಇದುವರೆಗೆ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲದ ಕಾರಣ ಇವೆಲ್ಲಾ ಕೇವಲ ವದಂತಿಗಳೆಂದು ಮಾತ್ರ ಭಾವಿಸುವುದು ಉತ್ತಮ, (ಏಜನ್ಸೀಸ್).