ಹಾರ್ದಿಕ್ ಪಾಂಡ್ಯ ಮತ್ತು ಮಹಿಕಾ ಶರ್ಮ ಜೋಡಿ
- 19ನೇ ಐಪಿಎಲ್ ಆವೃತ್ತಿಯಿಂದ ಮುಂಬೈ ಇಂಡಿಯನ್ಸ್ ಹೊರೆಗೆ
- ಆಡಿದ ಅಷ್ಟೂ ಪಂದ್ಯಗಳಲ್ಲಿ ಅತ್ಯಂತ ಕಳಪೆ ಪ್ರದರ್ಶನ ಮತ್ತು ನಾಯಕತ್ವ ತೋರಿದ ಹಾರ್ದಿಕ್ ಪಾಂಡ್ಯ
- ಕ್ಯಾಪ್ಟನ್ಸಿ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದರೂ ಪಾಂಡ್ಯ ಗಮನವೆಲ್ಲ ಮೇ.22ರ ಮೇಲಿದೆ?
Hardik Pandya: ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಮತ್ತು ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಸದ್ಯ ಸಾಲು ಸಾಲು ಟೀಕೆ, ವ್ಯಂಗ್ಯಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಈ ವರ್ಷದ ಐಪಿಎಲ್ನಲ್ಲಿ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ಯುವಲ್ಲಿ ಅಕ್ಷರಶಃ ಫ್ಲಾಪ್ ಆದ ಪಾಂಡ್ಯ, ತಾವು ಕೂಡ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದು ಫ್ರಾಂಚೈಸಿ ಅಭಿಮಾನಿಗಳು ಮತ್ತು ಮ್ಯಾನೇಜ್ಮೆಂಟ್ಗೆ ಭಾರೀ ಬೇಸರ ತಂದಿದೆ.
ಅವಕಾಶಗಳು ಸಿಕ್ಕರೂ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸದ ಹಾರ್ದಿಕ್, ಸತತ ಸೋಲಿಗಳ ಬಳಿಕವೂ ತಮ್ಮ ಗೆಳತಿ ಮಹಿಕಾ ಶರ್ಮಾ ಜೊತೆಗಿನ ಸುತ್ತಾಟ, ಅಪ್ಪಿಕೊಳ್ಳುವ ಮೂಲಕವೇ ಹೆಚ್ಚು ಸದ್ದು ಮಾಡುತ್ತಿದ್ದರು. ಇದು ಫ್ರಾಂಚೈಸಿ ಅಭಿಮಾನಿಗಳಲ್ಲಿ ತೀರ ಅಸಮಾಧಾನ, ಇರಿಸು-ಮುರಿಸು ಉಂಟುಮಾಡಿತು. ಸಂಪೂರ್ಣವಾಗಿ ಫೋಕಸ್ ಕಳೆದುಕೊಂಡ ಹಾರ್ದಿಕ್, ಮುಂಬರುವ ಪಂದ್ಯಗಳಲ್ಲಿ ಕಮ್ಬ್ಯಾಕ್ ಮಾಡುತ್ತಾರೆ ಎಂದೇ ನಿರೀಕ್ಷಿಸುತ್ತಿದ್ದ ಫ್ಯಾನ್ಸ್ ಕಡೆಗೂ ಆಗಿದ್ದು ನಿರಾಶೆ.
ಅಲ್ಲಿಂದಲೂ ಅದೇ ಮಿಸ್ಟೇಕ್!
ಈ ವರ್ಷ ಭಾರತ ಟಿ20 ವಿಶ್ವಕಪ್ ಗೆದ್ದು ಬೀಗಿದ್ದು ಕ್ರಿಕೆಟ್ ಲೋಕದಲ್ಲಿ ಹೊಸ ಇತಿಹಾಸಕ್ಕೆ ಸಾಕ್ಷಿಯಾಯಿತು. ಟೀಮ್ ಇಂಡಿಯಾ ಪರ ಉತ್ತಮ ಆಲ್ರೌಂಡ್ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ, ಗೆದ್ದ ಖುಷಿಯಲ್ಲಿ ಮೈದಾನದಲ್ಲಿ ಎಲ್ಲರ ಮುಂದೆಯೇ ಮಹಿಕಾ ಜೊತೆಗೆ ಓಡಾಡಿ, ಪೋಡಿಯಂ ಮೇಲೆ ಅಪ್ಪಿಕೊಂಡು ಕುಳಿತ ದೃಶ್ಯಗಳು ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಟೀಕೆಗೆ ಗುರಿಯಾಯಿತು. ಇದಕ್ಕೆ ನೆಟ್ಟಿಗರು ಕೂಡ ಕಿಡಿಕಾರಿದರು.
ಇಷ್ಟಾದರೂ ತಮ್ಮ ಪ್ರೀತಿ-ಪ್ರೇಮವನ್ನು ಎಲ್ಲರ ಮುಂದೆ ಬಹಿರಂಗ ಪಡಿಸುತ್ತಾ, ನೆಟ್ಟಿಗರ ಕಣ್ಣಿಗೆ ಬೀಳುವಂತೆ ಮುಂದುವರಿಸಿಕೊಂಡು ಹೋಗಿದ್ದು ಪಾಂಡ್ಯ ಅವರ ಬಿಗ್ ಮಿಸ್ಟೇಕ್. ಇದು ಪ್ರಸಕ್ತ ನಡೆಯುತ್ತಿರುವ ಐಪಿಎಲ್ನಲ್ಲಿ ಮುಂದುವರೆದಿದ್ದು, ಎಲ್ಲೋ ಒಂದು ಕಡೆ ಮುಂಬೈ ಇಂಡಿಯನ್ಸ್ ತಂಡದ ಹೀನಾಯ ಸೋಲಿಗೆ ಕಾರಣವಾಯ್ತು ಎಂಬ ಅಭಿಪ್ರಾಯಗಳಿವೆ. ಹಾರ್ದಿಕ್ ತಮ್ಮ ಗಮನವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದರು ಎಂದು ಅಭಿಮಾನಿಗಳು ಜಾಲತಾಣಗಳಲ್ಲಿ ಅಭಿಪ್ರಾಯಿಸಿದ್ದಾರೆ.
ಮೇ.22 ಏನು?
ಗೆಳತಿ ಮಹಿಕಾ ಜೊತೆಗೆ ಎರಡನೇ ಬಾರಿ ವಿವಾಹಕ್ಕೆ ಹಾರ್ದಿಕ್ ಸಜ್ಜಾಗಿದ್ದಾರೆ ಎನ್ನಲಾಗಿದೆ. ಇದೇ ಮೇ.22ರಂದು ರಾಜಸ್ಥಾನದ ಉದಯಪುರದಲ್ಲಿ ಈ ಜೋಡಿಯ ವಿವಾಹ ನಡೆಯಲಿದೆ ಮತ್ತು ಸಮಾರಂಭವು ಕೆಲವೇ ಜನರ ಸಮ್ಮುಖದಲ್ಲಿ ನಡೆಯಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಆದರೆ, ಯಾವುದೇ ಅಧಿಕೃತ ಮೂಲಗಳಿಂದ ಇದು ನಿಜ ಎಂಬುದು ಇನ್ನೂ ತಿಳಿದುಬಂದಿಲ್ಲ.
ಮುಂಬೈನ ಕೊನೆಯ ಎರಡು ಪಂದ್ಯಗಳಿಂದ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ, ಸದ್ಯ ಇಂಜುರಿಯಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ಮಧ್ಯೆ, ಮಹಿಕಾ ಜೊತೆಗೆ ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ವದಂತಿಗಳು ಬಹುತೇಕ ಸುಳ್ಳು ಎಂದೇ ಹೇಳಲಾಗುತ್ತಿದೆ ಎಂಬುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್)