ಹಾರ್ದಿಕ್ ಪಾಂಡ್ಯಾಗೆ ಅವಮಾನ ಮಾಡಿದ ಗೆಳತಿ ಮಹಿಕಾ ಶರ್ಮಾ! Hardik Pandya
- ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟಿ20 ವಿಶ್ವಕಪ್ನ ಸೂಪರ್ 8 ಪಂದ್ಯದಲ್ಲಿ ಭಾರತಕ್ಕೆ ಸೋಲು
- ನಿನ್ನೆ ಪಂದ್ಯದ ವೇಳೆ ಟೀಮ್ ಇಂಡಿಯಾ ಹಾರ್ದಿಕ್ ಪಾಂಡ್ಯಗೆ ಮುಜುಗರ
- ಗೆಳತಿ ಮಹಿಕಾ ಶರ್ಮಾ ನಡೆಯಿಂದ ಮುಜುಗರಕ್ಕೀಡಾದ ಸ್ಟಾರ್ ಆಲ್ರೌಂಡರ್
Hardik Pandya : ನಿನ್ನೆ (ಫೆ.22) ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟಿ20 ವಿಶ್ವಕಪ್ನ ಸೂಪರ್ 8 ಪಂದ್ಯದ ವೇಳೆ ಟೀಮ್ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಗೆಳತಿ ಮಹಿಕಾ ಶರ್ಮಾ ನಡೆಯಿಂದ ಮುಜುಗರಕ್ಕೀಡಾದರು.
ನಿನ್ನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಅನುಭವಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಟೀಮ್ ಇಂಡಿಯಾ ಬಾಟ್ಸ್ಮನ್ಗಳು ಸಾಲು ಸಾಲಾಗಿ ವಿಕೆಟ್ ಒಪ್ಪಿಸುತ್ತಿದ್ದರೆ, ಕ್ರೀಡಾಂಗಣದಲ್ಲಿದ್ದ ಮತ್ತು ಟಿವಿ ನೋಡುತ್ತಿದ್ದ ಅಸಂಖ್ಯಾತ ಕ್ರೀಡಾಭಿಮಾನಿಗಳ ಮುಖದಲ್ಲಿ ದುಃಖ ಆವರಿಸಿತ್ತು. ಮಹತ್ವದ ಪಂದ್ಯದಲ್ಲಿ ಸೋಲುಂಡರಲ್ಲ ಅಂತ ಬೇಸರಗೊಂಡರು. ಆದರೆ, ಹಾರ್ದಿಕ್ ಗೆಳತಿ ಮಹಿಕಾ ಶರ್ಮಾ ಮಾತ್ರ ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೆ, ಮಹಿಕಾ ಅವರು ಟ್ರೋಲ್ ಆಗುತ್ತಿದ್ದಾರೆ.
ಅಷ್ಟಕ್ಕೂ ನಡೆದಿದ್ದೇನು ಅಂದರೆ, ದಕ್ಷಿಣ ಆಫ್ರಿಕಾ ನೀಡಿದ 188 ರನ್ಗಳ ಗುರಿ ಬೆನ್ನತ್ತಿದ್ದ ಭಾರತ 14 ಓವರ್ಗೆ 5 ಪ್ರಮುಖ ವಿಕೆಟ್ ಕಳೆದುಕೊಂಡು ಕೇವಲ 86 ರನ್ ಗಳಿಸಿತ್ತು. ಈ ವೇಳೆ ಹಾರ್ದಿಕ್ ಮತ್ತು ದುಬೆ ತಲಾ 18 ರನ್ ಗಳಿಸಿ ಕ್ರೀಸ್ನಲ್ಲಿದ್ದರು. ಈ ಸಂದರ್ಭದಲ್ಲಿ ಆಫ್ರಿಕಾದ ಸ್ಪಿನ್ನರ್ ಕೇಶವ್ ಮಹಾರಾಜ್ 15ನೇ ಓವರ್ ಎಸೆಯಲು ಬಂದರು. ಮೊದಲ ಎಸೆತದಲ್ಲೇ ಹಾರ್ದಿಕ್ ಬಲವಾಗಿ ಬ್ಯಾಟ್ ಬೀಸಿದರು. ಇದರಿಂದ ಚೆಂಡು ಗಾಳಿಯಲ್ಲಿ ಹಾರಿ ಹೋಗಿ, ಇನ್ನೇನು ಬೌಂಡರಿ ಗೆರೆ ದಾಟಬೇಕು ಅಷ್ಟರಲ್ಲಿ ಲಾಂಗ್ ಆನ್ನಲ್ಲಿದ್ದ ಟ್ರಿಸ್ಟನ್ ಸ್ಟಬ್ಸ್ ಅದ್ಭುತವಾಗಿ ಕ್ಯಾಚ್ ಹಿಡಿದರು.
ಚಪ್ಪಾಳೆ ತಟ್ಟಿದ ಮಹಿಕಾ
ಹಾರ್ದಿಕ್ ಅವರು ಕ್ಯಾಚ್ ನೀಡಿ, ಬೇಸರದಿಂದ ಪೆವಲಿಯನ್ ಕಡೆ ಹೆಜ್ಜೆ ಹಾಕಿದರೆ, ಇದೇ ಸಂದರ್ಭದಲ್ಲಿ ಕ್ರೀಡಾಂಗಣದಲ್ಲಿದ್ದ ಮಹಿಕಾ ಶರ್ಮಾ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದ್ದು, ಮಹಿಕಾ ನಡೆಯನ್ನು ನೋಡಿ ಕ್ರೀಡಾಭಿಮಾನಿಗಳು ಶಾಕ್ ಆಗಿದ್ದಾರೆ. ವಿಕೆಟ್ ಬೀಳುತ್ತಿದ್ದರೆ ಚಪ್ಪಾಳೆ ತಟ್ಟಲು ಹೇಗೆ ಮನಸ್ಸು ಬಂತು ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೆ, ಚಪ್ಪಾಳೆ ತಟ್ಟಲು ನಿಮ್ಮ ಬಾಯ್ಫ್ರೆಂಡ್ ಏನೂ ಸಿಕ್ಸರ್ ಬಾರಿಸಿಲ್ಲ, ವಿಕೆಟ್ ನೀಡಿದ್ದಾರೆ. ನಿಮ್ಮ ತಲೆಯಲ್ಲಿ ಸ್ವಲ್ಪವೂ ಮೆದುಳು ಇಲ್ವಾ ಎಂದು ನೆಟ್ಟಿಗರು ಮಹಿಕಾ ಶರ್ಮಾರನ್ನು ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಕೆಲವರು ಮಹಿಕಾ ಪರ ನಿಂತಿದ್ದು, ಅದು ಸಿಕ್ಸರ್ ಎಂದು ಭಾವಿಸಿ, ಚಪ್ಪಾಳೆ ತಟ್ಟಿದ್ದಾರೆ ಎನ್ನುತ್ತಿದ್ದಾರೆ.
ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ (ಫೆ.22) ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 187 ರನ್ ಗಳಿಸಿತು. ಪ್ರೋಟಿಯಸ್ ಬ್ಯಾಟ್ಸ್‌ಮನ್‌ಗಳಲ್ಲಿ ಡೇವಿಡ್ ಮಿಲ್ಲರ್ (63 ರನ್, 35 ಎಸೆತ, 7 ಬೌಂಡರಿ, 3 ಸಿಕ್ಸರ್‌ಗಳು) ಅದ್ಭುತ ಅರ್ಧಶತಕ ಗಳಿಸಿದರು. ಜೂನಿಯರ್ ಎಬಿಡಿ ಎಂದೇ ಖ್ಯಾತಿಯಾಗಿರುವ ಡೆವಾಲ್ಡ್ ಬ್ರೆವಿಸ್ (45 ರನ್, 29 ಎಸೆತ, 3 ಬೌಂಡರಿಗಳು, 3 ಸಿಕ್ಸರ್‌ಗಳು) ಮತ್ತು ಡೆತ್ ಓವರ್‌ಗಳಲ್ಲಿ ಅದ್ಭುತ ಬ್ಯಾಟಿಂಗ್ ಮಾಡುವಲ್ಲಿ ಹೆಸರಾಗಿರುವ ಟ್ರಿಸ್ಟಾನ್ ಸ್ಟಬ್ಸ್ (ಅಜೇಯ 44 ರನ್, 24 ಎಸೆತ, 1 ಬೌಂಡರಿ, 3 ಸಿಕ್ಸರ್‌ಗಳು) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಭಾರತೀಯ ಬೌಲರ್‌ಗಳಲ್ಲಿ ಜಸ್ಪ್ರೀತ್ ಬುಮ್ರಾ ಮೂರು ವಿಕೆಟ್ ಪಡೆದರೆ, ಅರ್ಷದೀಪ್ ಸಿಂಗ್ ಎರಡು ವಿಕೆಟ್ ಪಡೆದರು. ವರುಣ್ ಚಕ್ರವರ್ತಿ ಮತ್ತು ಶಿವಂ ದುಬೆ ತಲಾ ಒಂದು ವಿಕೆಟ್ ಪಡೆದರು.
ಆಫ್ರಿಕಾ ಪಡೆ ನೀಡಿದ ಸವಾಲಿನ ಗುರಿಯನ್ನು ಬೆನ್ನಟ್ಟಿದ ಭಾರತ 18.5 ಓವರ್‌ಗಳಲ್ಲಿ 111 ರನ್‌ಗಳಿಗೆ ಆಲೌಟ್ ಆಯಿತು. ಶಿವಂ ದುಬೆ (42 ರನ್, 37 ಎಸೆತ, 1 ಬೌಂಡರಿ, 3 ಸಿಕ್ಸರ್) ಭಾರತದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ತಂಡದ ಉಳಿದ ಆಟಗಾರರು ಬ್ಯಾಟಿಂಗ್ನಲ್ಲಿ ವಿಫಲರಾದ್ದರಿಂದ ಟೀಮ್ ಇಂಡಿಯಾ ಸೋಲಬೇಕಾಯಿತು. ದಕ್ಷಿಣ ಆಫ್ರಿಕಾದ ಬೌಲರ್‌ಗಳಲ್ಲಿ ಮಾರ್ಕೊ ಜಾನ್ಸೆನ್ ನಾಲ್ಕು ವಿಕೆಟ್ ಪಡೆದರೆ, ಕೇಶವ್ ಮಹಾರಾಜ್ ಮೂರು ವಿಕೆಟ್ ಪಡೆದರು. ಕಾರ್ಬಿನ್ ಬಾಷ್ ಎರಡು ವಿಕೆಟ್ ಪಡೆದರೆ, ಐಡೆನ್ ಮಾರ್ಕ್ರಾಮ್ ಒಂದು ವಿಕೆಟ್ ಪಡೆದರು, (ಏಜೆನ್ಸೀಸ್)