ಭಾರತೀಯ ಕ್ರಿಕೆಟ್ ತಂಡದ ಆಲ್‌ರೌಂಡರ್ Hardik Pandya (ಚಿತ್ರ X) 
ಕ್ರಿಕೆಟ್

ತೆರೆಮರೆಯ ಹೀರೋಗಳಿಗೆ ಹಾರ್ದಿಕ್​ ನಮನ.. ಮೈದಾನದ ಸಿಬ್ಬಂದಿಗೆ ತಲಾ 10 ಲಕ್ಷ ರೂ. ಬಹುಮಾನ ನೀಡಿದ ಪಾಂಡ್ಯ Hardik Pandya

ಪ್ರಮುಖ ಮುಖ್ಯಾಂಶಗಳು

  • ವಾಂಖೆಡೆ ಕ್ರೀಡಾಂಗಣದ ಪ್ರತಿಯೊಬ್ಬ ಗ್ರೌಂಡ್ಸ್‌ಮನ್‌ಗೆ ತಲಾ 10 ಲಕ್ಷ ಬಹುಮಾನ ನೀಡಿದ ಹಾರ್ದಿಕ್​ ಪಾಂಡ್ಯಾ
  • ಪಂದ್ಯಾವಳಿಯ ಸಿದ್ಧತೆಯ ಸಮಯದಲ್ಲಿ, ಪಾಂಡ್ಯ ವಾಂಖೆಡೆ ಕ್ರೀಡಾಂಗಣದಲ್ಲಿ ಹಲವಾರು ರಾತ್ರಿಗಳನ್ನು ಕಳೆದಿದ್ದಾರೆ
  • ಕಠಿಣ ಪರಿಸ್ಥಿತಿಗಳಲ್ಲಿ ತಮ್ಮ ಫಿಟ್ನೆಸ್​, ಬ್ಯಾಟಿಂಗ್​ ಮತ್ತು ಬೌಲಿಂಗ್​ ಅನ್ನು ಸುಧಾರಿಸಿಕೊಳ್ಳಲು ಕೆಲಸ ಮಾಡಿದರು
  • ಗೆಲುವಿನ ಹಿಂದೆ ಕೇವಲ ಆಟಗಾರರ ಶ್ರಮ ಮಾತ್ರವಲ್ಲದೇ, ಮೈದಾನವನ್ನು ಹದಗೊಳಿಸುವ ಸಿಬ್ಬಂದಿಗಳ ಬೆವರಿನ ಹನಿಗಳೂ ಇರುತ್ತವೆ
ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಕೇವಲ ಮೈದಾನದ ಉತ್ತಮ ಪ್ರದರ್ಶನದಿಂದ ಮಾತ್ರವಲ್ಲ, ತಮ್ಮ ದೊಡ್ಡ ಗುಣದಿಂದಲೂ ಅಭಿಮಾನಿಗಳ ಹೃದಯ ಗೆಲ್ಲುತ್ತಿದ್ದಾರೆ. ಇತ್ತೀಚೆಗೆ ವಾಂಖೆಡೆ ಕ್ರೀಡಾಂಗಣದ ಪ್ರತಿಯೊಬ್ಬ ಗ್ರೌಂಡ್ಸ್‌ಮನ್‌ಗೆ ತಲಾ 10 ಲಕ್ಷ ಬಹುಮಾನ ನೀಡುವ ಮೂಲಕ ಟಿ20 ಸಮಯದಲ್ಲಿ ಅವರು ನೀಡಿದ್ದ ಭರವಸೆಯನ್ನು ಈಡೇರಿಸಿದ್ದಾರೆ.
ಪಂದ್ಯಾವಳಿಯ ಸಿದ್ಧತೆಯ ಸಮಯದಲ್ಲಿ, ಪಾಂಡ್ಯ ವಾಂಖೆಡೆ ಕ್ರೀಡಾಂಗಣದಲ್ಲಿ ಹಲವಾರು ರಾತ್ರಿಗಳನ್ನು ಕಳೆದಿದ್ದಾರೆ. ಕಠಿಣ ಪರಿಸ್ಥಿತಿಗಳಲ್ಲಿ ತಮ್ಮ ಫಿಟ್ನೆಸ್​, ಬ್ಯಾಟಿಂಗ್​ ಮತ್ತು ಬೌಲಿಂಗ್​ ಅನ್ನು ಸುಧಾರಿಸಿಕೊಳ್ಳಲು ಕೆಲಸ ಮಾಡಿದರು. ಮೈದಾನದ ಸಿಬ್ಬಂದಿಗಳ ನಿರಂತರ ಪ್ರಯತ್ನದಿಂದಾಗಿ ಎಲ್ಲಾ ಸುಗಮವಾಗಿ ನಡೆಯಿತು ಎಂದು ಅಭಿಪ್ರಾಯ ಸೂಚಿಸಿದ್ದಾರೆ.
ಪಂದ್ಯದ ಗೆಲುವಿನ ಹಿಂದೆ ಕೇವಲ ಆಟಗಾರರ ಶ್ರಮ ಮಾತ್ರವಲ್ಲದೇ, ಮೈದಾನವನ್ನು ಹದಗೊಳಿಸುವ ಸಿಬ್ಬಂದಿಗಳ ಬೆವರಿನ ಹನಿಗಳೂ ಇರುತ್ತವೆ ಎಂಬುದನ್ನು ಪಾಂಡ್ಯ ಮನಗಂಡಿದ್ದರು. ಹಾಗಾಗಿ ಅವರು, ಟಿ20 ಸರಣಿಯ ವೇಳೆ ಎಲ್ಲವೂ ಸರಿಯಾಗಿ ನಡೆದರೆ ಮೈದಾನದ ಸಿಬ್ಬಂದಿಗಳಿಗೆ ಬಹುಮಾನ ನೀಡುತ್ತೇನೆ ಎಂದಿದ್ದರು. ಕೊಟ್ಟ ಮಾತಿನಂತೆ ಪಾಂಡ್ಯಾ, ಪ್ರತಿಯೊಬ್ಬ ಸಿಬ್ಬಂದಿಯ ಖಾತೆಗೆ 10 ಲಕ್ಷ ರೂ.ಗಳನ್ನು ಉಡುಗೊರೆ ನೀಡಿದ್ದಾರೆ.

ಕಾಣದ ವೀರರಿಗೆ ಸಂದ ಗೌರವ

ಸಾಮಾನ್ಯವಾಗಿ ಕ್ರಿಕೆಟ್​ನಲ್ಲಿ ಆಟಗಾರರು ಮತ್ತು ತರಬೇತುದಾರರು ಮಾತ್ರ ಬೆಳಕಿಗೆ ಬರುತ್ತಾರೆ. ಆದರೆ ಸುಡುಬಿಸಿಲು, ಮಳೆ ಎನ್ನದೆ ಪಿಚ್ ಸಿದ್ಧಪಡಿಸುವ ಮೈದಾನದ ಸಿಬ್ಬಂದಿಗಳು ಯಾವಾಗಲೂ ತೆರೆಮರೆಯಲ್ಲಿ ಇರುತ್ತಾರೆ. ಅಂತವರನ್ನು ಗುರುತಿಸಿ ದೊಡ್ಡ ಮೊತ್ತದ ಬಹುಮಾನ ನೀಡಿರುವುದರಿಂದ ಪಾಂಡ್ಯಾ ಪ್ರಪಂಚದಾದ್ಯಂತ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರು ಕೇವಲ ರನ್ ಮತ್ತು ವಿಕೆಟ್‌ಗಳ ಮೂಲಕ ಮೌಲ್ಯ ನೀಡುವುದಲ್ಲದೆ, ಕ್ರೀಡಾಂಗಣದ ತಳಮಟ್ಟದ ಕಾರ್ಮಿಕರನ್ನು ಗುರುತಿಸುವ ಮೂಲಕ ಒಬ್ಬ ಪರಿಪೂರ್ಣ ನಾಯಕನಾಗಿ ವಿಕಸನಗೊಂಡಿದ್ದಾರೆ. ಈ ಉದಾರತೆಯ ಕಾರ್ಯವು ಕ್ರಿಕೆಟ್​ಗೆ ಕೊಡುಗೆ ನೀಡುವ ಪ್ರತಿಯೊಬ್ಬ ವ್ಯಕ್ತಿಯನ್ನು ಗೌರವಿಸುವ ಆಟಗಾರನಾಗಿ ಮಾರ್ಪಾಟ್ಟಿದೆ.
ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಮಾರ್ಚ್ 29 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ (ಏಜೆನ್ಸೀಸ್​).