ಹಾರ್ದಿಕ್ ಪಾಂಡ್ಯ ಮತ್ತು ಗೆಳತಿ ಮಹಿಕಾ ಶರ್ಮ 
ಕ್ರಿಕೆಟ್

ಒಂದೇ ಒಂದು ಮುತ್ತಿನಿಂದ ರಟ್ಟಾಯಿತು ಆ ಗುಟ್ಟು! ಅರ್ಧಶತಕದ ಸಂಭ್ರಮದಲ್ಲಿ ಹಾರ್ದಿಕ್ ಪ್ರೀತಿ​, ವಿಡಿಯೋ ವೈರಲ್​

ಪ್ರಮುಖ ಮುಖ್ಯಾಂಶಗಳು

  • ಐದನೇ ಟಿ20 ಗೆದ್ದ ಭಾರತಕ್ಕೆ ದ. ಆಫ್ರಿಕಾ ವಿರುದ್ಧ ಸರಣಿ ಗೆಲುವು
  • ಸ್ಪೋಟಕ ಇನ್ನಿಂಗ್ಸ್ ನೀಡಿದ ಹಾರ್ದಿಕ್ ಪಾಂಡ್ಯ, ವೇಗದ ಅರ್ಧಶತಕ
  • ಅರ್ಧಶತಕದ ಸಂಭ್ರಮದ ವೇಳೆ ಗೆಳತಿಗೆ ಮುತ್ತು ಹಾರಿಸಿದ ಹಾರ್ದಿಕ್
ಅಹಮದಾಬಾದ್​: ನಿನ್ನೆ (ಡಿ.19) ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ ಭಾರತ 30 ರನ್​ಗಳಿಂದ ಜಯ ಸಾಧಿಸಿತು. ಈ ಗೆಲುವಿನೊಂದಿಗೆ, ಟೀಮ್ ಇಂಡಿಯಾ 5 ಪಂದ್ಯಗಳ ಟಿ20 ಸರಣಿಯನ್ನು 3-1 ಅಂತರದಲ್ಲಿ ಗೆದ್ದು ಬೀಗಿತು. ನಿರ್ಣಾಯಕ ಪಂದ್ಯದಲ್ಲಿ ಹರಿಣರ ಪಡೆಯ ಬೌಲರ್​ಗಳ ಬೆವರಿಳಿಸಿದ ಹಾರ್ದಿಕ್​ ಪಾಂಡ್ಯ, ತಂಡದ ಪರ ಸ್ಫೋಟಕ ಇನ್ನಿಂಗ್ಸ್​ ನೀಡಿ ಎಲ್ಲರ ಗಮನ ಸೆಳೆದರು. ಈ ವೇಳೆ ನಡೆದ ಒಂದು ಕುತೂಹಲಕಾರಿ ದೃಶ್ಯ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ಗೆ ಕಾರಣವಾಗಿದೆ. 
ಟೀಮ್ ಇಂಡಿಯಾದ ಪವರ್​ ಹಿಟ್ಟರ್​, ಅತ್ಯುತ್ತಮ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಎಂಬ ವಿಷಯ ಕ್ರಿಕೆಟ್​ ಪ್ರೇಮಿಗಳಿಗೆ ಗೊತ್ತೇ ಇದೆ. ಅಭಿಮಾನಿಗಳ ಆ ಭರವಸೆ, ನಿರೀಕ್ಷೆಗಳನ್ನು ನಿನ್ನೆಯ ಪಂದ್ಯದಲ್ಲಿ ಪಾಂಡ್ಯ ಸಾಬೀತುಪಡಿಸಿದರು. 25 ಎಸೆತದಲ್ಲಿ ಅಜೇಯ 63 ರನ್​ ಸಿಡಿಸಿದ ಹಾರ್ದಿಕ್​, ತಂಡದ ಒಟ್ಟು ಮೊತ್ತವನ್ನು 200ರ ಗಡಿದಾಟಿಸುವಲ್ಲಿ ಭರ್ಜರಿ ಕೊಡುಗೆ ನೀಡಿದರು. ಇದಕ್ಕೂ ಮೊದಲು ಕೇವಲ 16 ಎಸೆತಕ್ಕೆ 50 ರನ್​ ಬಾರಿಸಿದ ಅವರು, ಸ್ಟೇಡಿಯಂನಲ್ಲಿ ಕುಳಿತಿದ್ದ ಅವರ ಪ್ರೇಯಸಿ ಎಂದೇ ಕರೆಯಲ್ಪಡುವ ಗೆಳತಿ ಮಹಿಕಾ ಶರ್ಮಾ ಫ್ಲೈಯಿಂಗ್ ಕಿಸ್​ ಕೊಟ್ಟರು. ಇದು ಪಾಂಡ್ಯ ಅವರ ಅರ್ಧಶತಕದ ಸಂಭ್ರಮದ ಸಮಯದಲ್ಲಿ ಸೆರೆಯಾದ ದೃಶ್ಯ ಎಂಬುದು ಗಮನಾರ್ಹ. 
ಅತ್ತ ಮಹಿಕಾ ಕೂಡ ಹಾರ್ದಿಕ್​ಗೆ ಮುತ್ತು ಕೊಟ್ಟಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ. ಈ ವಿಡಿಯೋ ತುಣುಕು ಕ್ಷಣಮಾತ್ರದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇಷ್ಟು ದಿನಗಳಿಂದ ಹರಿದಾಡುತ್ತಿದ್ದ ವದಂತಿ ಕಡೆಗೂ ಸತ್ಯ ಎಂದೇ ಸಾಬೀತಾಗಿದೆ. ಇವರಿಬ್ಬರ ನಡುವೆ ಪ್ರೀತಿ-ಪ್ರೇಮ ಸಂಬಂಧವಿದೆ. ಇಬ್ಬರೂ ಈ ವಿಷಯವನ್ನು ಗುಟ್ಟಾಗಿ ಹಲವು ತಿಂಗಳುಗಳಿಂದ ಇಟ್ಟುಕೊಂಡಿದ್ದಾರೆ. ಎಲ್ಲಿಯೂ ಬಾಯ್ಬಿಡುವುದು ಬೇಡ ಎನ್ನುವಂತೆ ನಡೆದುಕೊಳ್ಳುತ್ತಿದ್ದರು. ಆದರೆ, ಐದನೇ ಟಿ20 ಪಂದ್ಯದಲ್ಲಿ ಈ ಗುಟ್ಟುಗಳೆಲ್ಲವೂ ಒಂದೇ ಒಂದು ಮುತ್ತಿನಿಂದ ರಟ್ಟಾಗಿದೆ. 
ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸ್ಫೋಟಕ ಇನ್ನಿಂಗ್ಸ್ ನೀಡಿದರು. ಹರಿಣರ ಪಡೆ ಎದುರು ಮೈದಾನದಲ್ಲಿ ರನ್‌ಗಳ ಹೊಳೆಯನ್ನೇ ಹರಿಸಿದರು. ಕ್ರೀಸ್‌ಗೆ ಬಂದ ಮೊದಲ ಕ್ಷಣದಿಂದಲೇ ಅಬ್ಬರದ ಬ್ಯಾಟಿಂಗ್ ನಡೆಸಿದ ಪಾಂಡ್ಯ, ಬೌಂಡರಿ, ಸಿಕ್ಸರ್​ಗಳನ್ನು ಬಾರಿಸಿದರು. ಕೇವಲ 25 ಎಸೆತಗಳಲ್ಲಿ 63 ರನ್ (5 ಬೌಂಡರಿ, 5 ಸಿಕ್ಸರ್‌) ಗಳಿಸುವ ಮೂಲಕ ಕ್ರಿಕೆಟ್​ ಅಭಿಮಾನಿಗಳ ಸಂತಸಕ್ಕೆ ಸಾಕ್ಷಿಯಾದರು.