ಮುಂಬೈ: ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ( Hardik Pandya ) ಮುಂಬೈ ರಸ್ತೆಯಲ್ಲಿ ತಮ್ಮ ಹೊಚ್ಚ ಹೊಸ ಸೂಪರ್ ಕಾರಿನೊಂದಿಗೆ ಅಡ್ಡಾಡಿದ್ದಾರೆ.
- ಮುಂಬೈ ರಸ್ತೆಯಲ್ಲಿ ತಮ್ಮ ಹೊಚ್ಚ ಹೊಸ ಸೂಪರ್ ಕಾರಿನೊಂದಿಗೆ ಅಡ್ಡಾಡಿದ ಹಾರ್ದಿಕ್ ಪಾಂಡ್ಯ
- ದುಬಾರಿ ಫೆರಾರಿ ಕಾರಿನಲ್ಲಿ ರಸ್ತೆ ಹಂಪ್ ದಾಟಿಸಲು ಪರಾದಾಡಿದ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್
- ಕಾರಿನ ಕೆಳಭಾಗಕ್ಕೆ ಯಾವುದೇ ಡಿಕ್ಕಿ ಆಗದಿರಲಿ ಎಂದು ಕಾರನ್ನು ಓರೆಯಾಗಿ, ಜಿಗ್ಜಾಗ್ ರೂಪದಲ್ಲಿ ಚಾಲನೆ
ಮುಂಬೈ: ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ( Hardik Pandya ) ಮುಂಬೈ ರಸ್ತೆಯಲ್ಲಿ ತಮ್ಮ ಹೊಚ್ಚ ಹೊಸ ಸೂಪರ್ ಕಾರಿನೊಂದಿಗೆ ಅಡ್ಡಾಡಿದ್ದಾರೆ. ಈ ವೇಳೆ ದುಬಾರಿ ಫೆರಾರಿ ಕಾರಿನಲ್ಲಿ ರಸ್ತೆ ಹಂಪ್ ದಾಟಿಸಲು ಪರಾದಾಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಅವರು 12 ಕೋಟಿ ರೂ. ಮೌಲ್ಯದ ಫೆರಾರಿ 12 ಸಿಲಿಂಡ್ರಿ ಸ್ಪೋರ್ಟ್ಸ್ ಕಾರಿನೊಂದಿಗೆ ಕಾಣಿಸಿಕೊಂಡು ಸುದ್ದಿಯಾದರು. ಕಪ್ಪು ಬಣ್ಣದ ಫೆರಾರಿ ಕಾರನ್ನು ಸ್ವತಃ ಹಾರ್ದಿಕ್ ಅವರೇ ತಮ್ಮ ಮನೆಗೆ ಓಡಿಸಿಕೊಂಡು ಬಂದರು. ಈ ವೇಳೆ ಕಾರಿನಲ್ಲಿ ಅವರ ಗೆಳತಿ ಮಹಿಕಾ ಶರ್ಮಾ ಕೂಡ ಇದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಅಭಿಮಾನಿಯೊಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಲ್ಲದೆ, ಇತ್ತೀಚೆಗೆ ಮಹಿಕಾ ಮತ್ತು ಹಾರ್ದಿಕ್, ಫೆರಾರಿ ಕಾರಿಗೆ ಪೂಜೆ ಮಾಡುವ ವಿಡಿಯೋವೂ ವೈರಲ್ ಆಗಿತ್ತು.
ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಏನಿದೆ?
ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ, ಹಾರ್ದಿಕ್ ಅವರು ತಮ್ಮ ಫೆರಾರಿ ಸಿಲಿಂಡ್ರಿ ಕಾರನ್ನು ರಸ್ತೆಯ ಮಧ್ಯದಲ್ಲಿರುವ ಸ್ಪೀಡ್ ಬ್ರೇಕರ್ ಮೇಲೆ ನಿಧಾನವಾಗಿ ಚಲಿಸುತ್ತಾರೆ. ಕಾರಿನ ಕೆಳಭಾಗಕ್ಕೆ ಯಾವುದೇ ಡಿಕ್ಕಿ ಆಗದಿರಲಿ ಎಂದು ಕಾರನ್ನು ಓರೆಯಾಗಿ, ಜಿಗ್ಜಾಗ್ ರೂಪದಲ್ಲಿ ತುಂಬಾ ಎಚ್ಚರಿಕೆಯಿಂದ ಚಾಲನೆ ಮಾಡುತ್ತಾರೆ. ಬಳಿಕ ಕಾರನ್ನು ನಿಧಾನ ಮಾಡಿ, ಅಲ್ಲಿದ್ದ ಪೊಲೀಸ್ ಸಿಬ್ಬಂದಿಯನ್ನು ಮಾತನಾಡಿಸಿ, ಕೈಕುಲುಕಿ ಅಲ್ಲಿಂದ ಹೋಗುತ್ತಾರೆ.
ಅಂದಹಾಗೆ, ಹಾರ್ದಿಕ್ ಅವರು ಫೆರಾರಿ 12 ಸಿಲಿಂಡ್ರಿ ಕಾರನ್ನು ಖರೀದಿ ಮಾಡಿದ್ದು, ತಮ್ಮ ಗ್ಯಾರೇಜ್‌ಗೆ ಮತ್ತೊಂದು ದುಬಾರಿ ವಾಹನವನ್ನು ಸೇರಿಸಿದ್ದಾರೆ. ಈಗಾಗಲೇ ಹಾರ್ದಿಕ್ ಅವರ ಗ್ಯಾರೆಜ್ನಲ್ಲಿ ರೋಲ್ಸ್ ರಾಯ್ಸ್ ಫ್ಯಾಂಟಮ್, ಲಂಬೋರ್ಘಿನಿ ಹುರಾಕನ್ EVO, ಲಂಬೋರ್ಘಿನಿ ಉರಸ್, ಮರ್ಸಿಡಿಸ್-AMG G63, ರೇಂಜ್ ರೋವರ್ ಮತ್ತು ಆಡಿ A6 ಕಾರುಗಳಿವೆ.
ಫೆರಾರಿ 12 ಸಿಲಿಂಡ್ರಿ ಕಾರಿನ ವಿಶೇಷತೆ ಏನು?
* ಫೆರಾರಿ ಸಂಸ್ಥೆಯು ತನ್ನ ಐಕಾನಿಕ್ V12 ಇಂಜಿನ್ ಪರಂಪರೆಯನ್ನು ಮುಂದುವರಿಸುತ್ತಾ ಬಿಡುಗಡೆ ಮಾಡಿರುವ 'ಫೆರಾರಿ 12 ಸಿಲಿಂಡ್ರಿ' ಕಾರು ಆಟೋಮೊಬೈಲ್ ಲೋಕದ ಒಂದು ಅದ್ಭುತವಾಗಿದೆ. ಸುಮಾರು 12 ಕೋಟಿ ರೂಪಾಯಿಗಳ ಆಸುಪಾಸಿನಲ್ಲಿರುವ ಈ ಕಾರು ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ.
* ಈ ಕಾರಿನ ಹೆಸರೇ ಸೂಚಿಸುವಂತೆ, ಇದು 6.5-ಲೀಟರ್ ಸಾಮರ್ಥ್ಯದ ನೈಸರ್ಗಿಕವಾಗಿ ಆಸ್ಪಿರೇಟೆಡ್ (Naturally Aspirated) V12 ಇಂಜಿನ್ ಹೊಂದಿದೆ. ಇದು ಯಾವುದೇ ಟರ್ಬೋಚಾರ್ಜರ್ ಇಲ್ಲದೆ 819 BHP ಶಕ್ತಿ ಮತ್ತು 678 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
* ವೇಗದ ವಿಷಯದಲ್ಲಿ ಈ ಫೆರಾರಿ ಬಗ್ಗೆ ಮಾತುನಾಡುವಂತೆಯೇ ಇಲ್ಲ. ಇದು ಕೇವಲ 2.9 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗವನ್ನು ತಲುಪಬಲ್ಲದು. ಹಾಗೆಯೇ ಇದರ ಗರಿಷ್ಠ ವೇಗ ಗಂಟೆಗೆ 340 ಕಿ.ಮೀ ಗಿಂತಲೂ ಹೆಚ್ಚಿದೆ.
* ಇದರ ವಿನ್ಯಾಸವು 1960ರ ದಶಕದ ಫೆರಾರಿ 365 GTB/4 'ಡೇಟೋನಾ' ಕಾರಿನಿಂದ ಸ್ಫೂರ್ತಿ ಪಡೆದಿದೆ. ಉದ್ದವಾದ ಬಾನೆಟ್ ಮತ್ತು ಮುಂಭಾಗದ ಕಪ್ಪು ಪಟ್ಟಿಯು ಹಳೆಯ ಕಾಲದ ಸೌಂದರ್ಯ ಮತ್ತು ಆಧುನಿಕ ತಂತ್ರಜ್ಞಾನದ ಸಮ್ಮಿಶ್ರಣದಂತೆ ಕಾಣುತ್ತದೆ.
* ಕಾರಿನ ಹಿಂಭಾಗದಲ್ಲಿ ಎರಡು ಸಕ್ರಿಯ ಫ್ಲಾಪ್‌ಗಳನ್ನು (Active Flaps) ನೀಡಲಾಗಿದೆ. ಇವು ಹೆಚ್ಚಿನ ವೇಗದಲ್ಲಿ ಚಲಿಸುವಾಗ ಗಾಳಿಯ ಒತ್ತಡವನ್ನು ನಿಯಂತ್ರಿಸಿ, ಕಾರು ರಸ್ತೆಗೆ ಅಂಟಿಕೊಂಡಂತೆ ಸ್ಥಿರವಾಗಿ ಸಾಗಲು (Downforce) ಸಹಾಯ ಮಾಡುತ್ತವೆ.
* ಕಾರಿನ ಒಳಭಾಗದಲ್ಲಿ ಚಾಲಕ ಮತ್ತು ಪ್ರಯಾಣಿಕರಿಗೆ ಪ್ರತ್ಯೇಕ ಅನುಭವ ನೀಡಲು ಮೂರು ಸ್ಕ್ರೀನ್‌ಗಳನ್ನು ನೀಡಲಾಗಿದೆ. 10.25-ಇಂಚಿನ ಸೆಂಟ್ರಲ್ ಡಿಸ್‌ಪ್ಲೇ, 15.6-ಇಂಚಿನ ಡ್ರೈವರ್ ಡಿಸ್‌ಪ್ಲೇ ಮತ್ತು ಪ್ರಯಾಣಿಕರಿಗಾಗಿ 8.8-ಇಂಚಿನ ಪ್ರತ್ಯೇಕ ಸ್ಕ್ರೀನ್ ಇದೆ.
* ಈ ಕಾರಿನಲ್ಲಿ 'ಫೋರ್-ವ್ಹೀಲ್ ಇಂಡಿಪೆಂಡೆಂಟ್ ಸ್ಟೀರಿಂಗ್' ತಂತ್ರಜ್ಞಾನವಿದೆ. ಇದು ತಿರುವುಗಳಲ್ಲಿ ಕಾರನ್ನು ಅತ್ಯಂತ ನಿಖರವಾಗಿ ಮತ್ತು ಸುಲಭವಾಗಿ ನಿಯಂತ್ರಿಸಲು ಚಾಲಕನಿಗೆ ನೆರವಾಗುತ್ತದೆ. ಇದರಿಂದ ಕಾರಿನ ಹ್ಯಾಂಡ್ಲಿಂಗ್ ತುಂಬಾ ಸುಲಭವಾಗಿರುತ್ತದೆ ಮತ್ತು ಅದ್ಭುತವಾಗಿರುತ್ತದೆ.
ವಿಶ್ವಕಪ್‌ನಲ್ಲಿ ಹಾರ್ದಿಕ್ ಪ್ರದರ್ಶನ
ಅಂದಹಾಗೆ, ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರು ತಮ್ಮ ಆಲ್‌ರೌಂಡ್ ಪ್ರದರ್ಶನದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಒಂಬತ್ತು ಪಂದ್ಯಗಳಲ್ಲಿ 160 ಸ್ಟ್ರೈಕ್ ರೇಟ್‌ನಲ್ಲಿ 217 ರನ್ ಗಳಿಸಿದರು. ಇದರಲ್ಲಿ ಎರಡು ಅರ್ಧಶತಕಗಳು ಸೇರಿವೆ. ಬೌಲಿಂಗ್‌ನಲ್ಲಿಯೂ ತಮ್ಮ ಪ್ರತಿಭೆಯನ್ನು ತೋರಿಸಿದ್ದ ಹಾರ್ದಿಕ್, 9 ವಿಕೆಟ್‌ಗಳನ್ನು ಪಡೆಯುವ ಮೂಲಕ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದರುಕ, (ಏಜೆನ್ಸೀಸ್).