- ಭಾರತ-ಪಾಕಿಸ್ತಾನ ಹ್ಯಾಂಡ್ಶೇಕ್ ಮಾಡದಿರುವುದು ಕೇವಲ ಶೋ ಅಷ್ಟೇ
- ಎರಡೂ ತಂಡಗಳು ಕೇವಲ ಮುಂದೆ ಮಾತ್ರ, ತೆರೆ ಹಿಂದೆ ಚೆನ್ನಾಗಿಯೇ ಮಾತಾಡ್ತಾರೆ
- ಹ್ಯಾಂಡ್ಶೇಕ್ ಕೇವಲ ಶೋ ಅನಿಸುತ್ತೆ ಎಂದ ಆಲೆಸ್ಟೈರ್ ಕುಕ್
ನವದೆಹಲಿ: ಫೆ.15ರಂದು ಕೊಲೊಂಬೊದಲ್ಲಿ ನಡೆದ ಇಂಡೋ-ಪಾಕ್ ಪಂದ್ಯವನ್ನು ಆರಂಭದಲ್ಲಿ ಬಹಿಷ್ಕರಿಸುವುದಾಗಿ ಹೇಳಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (Handshake Policy), ಆ ನಂತರ ಆಡಿದ್ದು ಟೀಕೆಗೆಳಿಗೆ ಗುರಿಯಾಯಿತು. ಪ್ರಸಕ್ತ, ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೂಪರ್ 8 ಹಂತಕ್ಕೆ ಈ ಎರಡೂ ತಂಡಗಳು ಎಂಟ್ರಿಕೊಟ್ಟಿವೆ. ಇಂಡೋ-ಪಾಕ್ ನಡುವೆ ಇನ್ನೊಂದು ಪಂದ್ಯ ನೋಡುವ ಬಯಕೆ ಹಲವರದ್ದಾಗಿದೆ.
ಇದೆಲ್ಲದರ ಮಧ್ಯೆ, ಮೈದಾನದಲ್ಲಿ ಭಾರತ-ಪಾಕಿಸ್ತಾನ ತಂಡಗಳ ಸಮರ, ಜಿದ್ದಾಜಿದ್ದಿ ಎಷ್ಟರ ಮಟ್ಟಿಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಪಹಲ್ಗಾಮ್ ಉಗ್ರರ ದಾಳಿ ಬಳಿಕ ಭಾರತವಂತು ಪಾಕ್ ತಂಡದೊಂದಿಗೆ ಹಸ್ತಲಾಘವ ಮಾಡುವುದೇ ಇಲ್ಲ. ಆದರೆ, ಇದನ್ನೇ ಮುಂದಿಟ್ಟು ಮಾತನಾಡಿರುವ ಇಂಗ್ಲೆಂಡ್ನ ಮಾಜಿ ನಾಯಕ ಆಲೆಸ್ಟೈರ್ ಕುಕ್, ಇದೆಲ್ಲವೂ ಶೋ ಅಷ್ಟೇ ಎಂದು ವ್ಯಂಗ್ಯವಾಡಿದ್ದಾರೆ.
ಏಷ್ಯಾಕಪ್ ಟ್ರೋಫಿ ಗೆದ್ದ ಭಾರತ, ಆ ಟೂರ್ನಿಯಲ್ಲಿ ಪಾಕಿಸ್ತಾನದೊಂದಿಗೆ ಆಡಿದ ಮೂರು ಪಂದ್ಯಗಳಲ್ಲಿಯೂ ಹ್ಯಾಂಡ್ಶೇಕ್ ಮಾಡದೆ ಪಂದ್ಯವನ್ನಾಡಿತು. ಇದು ಎರಡೂ ದೇಶಗಳ ನಡುವಿನ ವೈರತ್ವ, ಜಿದ್ದಾಜಿದ್ದಿಗೆ ಸಾಕ್ಷಿಯಾಯಿತು. ಮತ್ತೊಂದೆಡೆ, ಈ ವಿಷಯವನ್ನು ಚರ್ಚೆಗೆ ತೆಗೆದುಕೊಂಡ ಇಂಗ್ಲೆಂಡ್ ಮಾಜಿ ನಾಯಕ, ಹಸ್ತಲಾಘವ ಮಾಡೋದಿಲ್ಲ ಎಂದು ಹೇಳೋದೆಲ್ಲ ಕೇವಲ ಶೋಗೆ ಅಂತ ನನಗೆ ಅನಿಸುತ್ತೆ ಎಂದಿದ್ದಾರೆ.
'ಸ್ಟಿಕ್ ಟು ಕ್ರಿಕೆಟ್' ಪಾಡ್ಕಾಸ್ಟ್ನಲ್ಲಿ ಈ ಕುರಿತು ತಮ್ಮ ಸಹ ಹಿರಿಯ ಆಟಗಾರರಾದ ಮೈಕೆಲ್ ವಾಘನ್, ಡೇವಿಡ್ ಲಾಯ್ಡ್ ಮತ್ತು ಫಿಲ್ ಟಫ್ನೆಲ್ ಜತೆ ಮಾತನಾಡಿದ ಕುಕ್, ಮೈದಾನದಲ್ಲಿ ಹ್ಯಾಂಡ್ಶೇಕ್ ಮಾಡದೆ ಇರಬಹುದು. ಆದರೆ, ಎರಡೂ ತಂಡಗಳ ಆಟಗಾರರು ತೆರೆ ಹಿಂದೆ ಮಾತನಾಡಲ್ವಾ? ನಾನೆಲ್ಲೋ ಓದಿದ್ದು, ಅವರೆಲ್ಲ ಚೆನ್ನಾಗಿಯೇ ಮಾತಾಡಿಕೊಂಡು ಇದ್ದಾರೆ. ಆದರೆ, ಆನ್ಫೀಲ್ಡ್ನಲ್ಲಿ ಮಾತ್ರ ಕೈಕುಲಕುವುದಿಲ್ಲ ಅಷ್ಟೇ ಎಂದಿದ್ದಾರೆ.
ಅಂದು ಏಷ್ಯಾಕಪ್ನಲ್ಲಿ ಆಗಿದ್ದೇನು?
2025ರಲ್ಲಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಮೂರು ಬಾರಿ ಪಾಕಿಸ್ತಾನ ತಂಡದೊಂದಿಗೆ ಕಣಕ್ಕಿಳಿದ ಟೀಮ್ ಇಂಡಿಯಾ, ಪಹಲ್ಗಾಮ್ ದಾಳಿಯಲ್ಲಿ ಪಾಕ್ ಉಗ್ರರ ಕೈವಾಡವನ್ನು ಖಂಡಿಸಿ ಪಾಕ್ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ಮುಂದಾಗಲಿಲ್ಲ. ದುಬೈನಲ್ಲಿ ಆಡಿದ ಮೂರು ಪಂದ್ಯಗಳಲ್ಲಿಯೂ ಪಾಕ್ ಆಟಗಾರರಿಗೆ ಹ್ಯಾಂಡ್ಶೇಕ್ ಮಾಡದ ಟೀಮ್ ಇಂಡಿಯಾ ವಿರುದ್ಧ ಪಿಸಿಬಿ ಭಾರೀ ಅಸಮಾಧಾನ ವ್ಯಕ್ತಪಡಿಸಿತ್ತು. ಇದನ್ನೇ ಮುಂದುವರಿಸಿಕೊಂಡು ಬಂದಿರುವ ಭಾರತ, ಟಿ20 ವಿಶ್ವಕಪ್ ಟೂರ್ನಿಯಲ್ಲೂ ಪಾಕ್ ಜತೆಗೆ ಹಸ್ತಲಾಘವ ಮಾಡುತ್ತಿಲ್ಲ,(ಏಜೆನ್ಸೀಸ್).