ಸಮಬಲದ ಹಂಬಲದಲ್ಲಿ ಭಾರತ 
ಕ್ರಿಕೆಟ್

ಗುವಾಹಟಿಯಲ್ಲಿ ಹರಿಣಗಳ ವಿರುದ್ಧ 2ನೇ ಟೆಸ್ಟ್​ಗೆ ವೇದಿಕೆ ಸಜ್ಜು; ಸಮಬಲದ ಹಂಬಲದಲ್ಲಿ ಭಾರತ

ಗುವಾಹಟಿ: ಸರಣಿ ಸೋಲು ತಪ್ಪಿಸಿಕೊಳ್ಳಲು ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಭಾರತ ತಂಡ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಶನಿವಾರದಿಂದ ಎರಡನೇ ಹಾಗೂ ಅಂತಿಮ ಟೆಸ್ಟ್ (test cricket)​ ಪಂದ್ಯವನ್ನು ಆಡಲಿದೆ. ಶುಭಮಾನ್​ ಗಿಲ್​ ಅಲಭ್ಯತೆಯಿಂದ ವಿಕೆಟ್​ ಕೀಪರ್​-ಬ್ಯಾಟರ್​ ರಿಷಭ್​ ಪಂತ್​ ಹಂಗಾಮಿ ನಾಯಕತ್ವದಲ್ಲಿ ಆಡಲಿರುವ ಭಾರತ ತಂಡ ಸರಣಿ ಸಮಬಲ ಸಾಧಿಸಲು ಮಾಡು ಇಲ್ಲವೆ ಮಡಿ ಹೋರಾಟ ನಡೆಸಲಿದೆ. ಮುಖ್ಯ ಕೋಚ್​ ಗೌತಮ್​ ಗಂಭೀರ್​ಗೂ ಇದು ಅತಿದೊಡ್ಡ ಸತ್ವಪರೀೆ ಎನಿಸಿದೆ.

ಕಳೆದ ಕೋಲ್ಕತ ಟೆಸ್ಟ್​ನಲ್ಲಿ ಮೊದಲ 2 ದಿನ ಮೇಲುಗೈ ಸಾಧಿಸಿದ್ದರೂ, ಮೂರನೇ ದಿನ ಮಾಡಿದ ಎಡವಟ್ಟಿನಿಂದಾಗಿ ಭಾರತ ತಂಡ ಪರಾಭವಗೊಂಡಿತ್ತು. ಪ್ರಮುಖವಾಗಿ ದ. ಆಫ್ರಿಕಾದ ಸ್ಪಿನ್​ ದಾಳಿಯನ್ನು ಭಾರತೀಯ ಬ್ಯಾಟರ್​ಗಳು ದಿಟ್ಟವಾಗಿ ಎದುರಿಸಬೇಕಾಗಿದೆ. ಗಿಲ್​ ಗೈರು ಮತ್ತು ಬ್ಯಾಟಿಂಗ್​ ವಿಭಾಗದಲ್ಲಿ ಎಡಗೈ ಬ್ಯಾಟರ್​ಗಳ ಸಂಖ್ಯೆ ಹೆಚ್ಚಾಗಿರುವುದನ್ನೂ ಭಾರತ ಸಮರ್ಥವಾಗಿ ನಿಭಾಯಿಸಬೇಕಾಗಿದೆ. ಕಳೆದ ವರ್ಷ ನ್ಯೂಜಿಲೆಂಡ್​ ಎದುರು ತವರಿನಲ್ಲೇ ಟೆಸ್ಟ್​ ಸರಣಿ ಸೋತಿದ್ದ ಭಾರತ, ಮತ್ತೊಮ್ಮೆ ಮುಗ್ಗರಿಸಿದರೆ 4ನೇ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನಲ್ಲಿ ಫೈನಲ್​ಗೇರುವ ರೇಸ್​ನಲ್ಲೂ ದೊಡ್ಡ ಹಿನ್ನಡೆಯಾಗಲಿದೆ.

ಭಾರತದಲ್ಲಿ 15 ವರ್ಷಗಳ ಬಳಿಕ ಟೆಸ್ಟ್​ ಗೆದ್ದ ವಿಶ್ವಾಸದಲ್ಲಿರುವ ದ. ಆಫ್ರಿಕಾ ತಂಡ ಇದೀಗ 25 ವರ್ಷಗಳ ಬಳಿಕ ಸರಣಿ ಜಯದ ಸಂಭ್ರಮವನ್ನೂ ಕಾಣುವ ತವಕದಲ್ಲಿದೆ. ಇದನ್ನು ತಡೆಯಬೇಕಾದರೆ ಭಾರತ ತಂಡ, ಟೆಂಬಾ ಬವುಮಾ ನಾಯಕತ್ವದ ಅಜೇಯ ದಾಖಲೆಯನ್ನು ಮುರಿಯುವುದು ಕೂಡ ಅಗತ್ಯವಾಗಿದೆ.
ಟೀಮ್​ ನ್ಯೂಸ್​:
ಭಾರತ: ಅಲಭ್ಯರಾಗಿರುವ ನಾಯಕ ಶುಭಮಾನ್​ ಗಿಲ್​ ಸ್ಥಾನದಲ್ಲಿ ಎಡಗೈ ಬ್ಯಾಟರ್​ ಸಾಯಿ ಸುದರ್ಶನ್​ ಸ್ಥಾನ ಪಡೆಯುವ ನಿರೀಕ್ಷೆ ಇದ್ದು, ಅಕ್ಷರ್​ ಪಟೇಲ್​ ಬದಲಿಗೆ ವೇಗದ ಬೌಲಿಂಗ್​ ಆಲ್ರೌಂಡರ್​ ನಿತೀಶ್​ ಕುಮಾರ್​ ರೆಡ್ಡಿ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಕೋಲ್ಕತದಲ್ಲಿ ವಾಷಿಂಗ್ಟನ್​ ಸುಂದರ್​ 3ನೇ ಕ್ರಮಾಂಕದಲ್ಲಿ ಆಡಿದ್ದರೆ, ಈ ಬಾರಿ ಸಾಯಿ ಸುದರ್ಶನ್​ 3 ಮತ್ತು ಧ್ರುವ ಜುರೆಲ್​ 4ನೇ ಕ್ರಮಾಂಕದಲ್ಲಿ ಆಡುವ ನಿರೀಕ್ಷೆ ಇದೆ.
ದ. ಆಫ್ರಿಕಾ: ವೇಗದ ಬೌಲಿಂಗ್​ ಆಲ್ರೌಂಡರ್​ ವಿಯಾನ್​ ಮುಲ್ಡರ್​ ಮೊದಲ ಟೆಸ್ಟ್​ನಲ್ಲಿ ಹೆಚ್ಚಿನ ಕೊಡುಗೆ ನೀಡಿಲ್ಲ. ಹೀಗಾಗಿ ಅವರ ಬದಲಿಗೆ ಸ್ಪಿನ್​ ಬೌಲಿಂಗ್​ ಆಲ್ರೌಂಡರ್​ ಸೆನುರನ್​ ಮುತ್ತುಸ್ವಾಮಿ ಅಥವಾ ತಜ್ಞ ಬ್ಯಾಟರ್​ ಡಿವಾಲ್ಡ್​ ಬ್ರೆವಿಸ್​ ಸ್ಥಾನ ಪಡೆಯುವ ಸಾಧ್ಯತೆ ಇದೆ. ಟ್ರಿಸ್ಟಾನ್​ ಸ್ಟಬ್ಸ್​ ಈ ಬಾರಿ 3ನೇ ಕ್ರಮಾಂಕದಲ್ಲಿ ಆಡಬಹುದು. ರಬಾಡ ಮತ್ತೆ ಅಲಭ್ಯರಾಗಿರುವುದರಿಂದ, ತಂಡಕ್ಕೆ ಹೆಚ್ಚುವರಿಯಾಗಿ ಸೇರ್ಪಡೆಯಾಗಿರುವ ವೇಗಿ ಲುಂಗಿ ಎನ್​ಗಿಡಿ ಕಣಕ್ಕಿಳಿಯುವ ಸೂಚನೆಯನ್ನು ನಾಯಕ ಟೆಂಬಾ ಬವುಮಾ ನೀಡಿದ್ದಾರೆ.
*ಆರಂಭ: ಬೆಳಗ್ಗೆ 9.00
*ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​.
ಪಂತ್​ ಹಂಗಾಮಿ ನಾಯಕ
ಗಿಲ್​ ಗೈರಿನಲ್ಲಿ ಉಪನಾಯಕ ರಿಷಭ್​ ಪಂತ್​ ಗುವಾಹಟಿಯಲ್ಲಿ ಹಂಗಾಮಿ ನಾಯಕರಾಗಿ ಕಣಕ್ಕಿಳಿಯುವುದು ಖಚಿತಗೊಂಡಿದೆ. ಅವರು ಭಾರತದ 38ನೇ ಟೆಸ್ಟ್​ ನಾಯಕ ಎನಿಸಲಿದ್ದಾರೆ ಮತ್ತು ಎಂಎಸ್​ ಧೋನಿ ಈ ಜವಾಬ್ದಾರಿ ಪಡೆದ 2ನೇ ಭಾರತೀಯ ವಿಕೆಟ್​ ಕೀಪರ್​ ಎನಿಸಲಿದ್ದಾರೆ. ಪಂತ್​ ಕೋಲ್ಕತದಲ್ಲೂ ಗಿಲ್​ ಗೈರಿನಲ್ಲಿ ದ. ಆಫ್ರಿಕಾದ 2ನೇ ಇನಿಂಗ್ಸ್​ನಲ್ಲಿ ನಾಯಕತ್ವ ನಿರ್ವಹಿಸಿದ್ದರು. ಆದರೆ ಆಗ ಅವರು ತೆಗೆದುಕೊಂಡ ಕೆಲ ನಿರ್ಧಾರಗಳು ಭಾರತಕ್ಕೆ ಹಿನ್ನಡೆಯನ್ನೇ ತಂದಿದ್ದವು. ಪ್ರಮುಖವಾಗಿ 3ನೇ ದಿನ ಬೆಳಗ್ಗೆ ವೇಗಿಗಳಿಗೆ ಬೇಗನೆ ಬೌಲಿಂಗ್​ ನೀಡದಿದ್ದುದು ಹರಿಣಗಳಿಗೆ ಹೆಚ್ಚಿನ ರನ್​ ಕಲೆಹಾಕಲು ಸಹಾಯ ಮಾಡಿತ್ತು. ಇದೀಗ ತನ್ನ ನಿರ್ಧಾರದ ತಪ್ಪುಗಳನ್ನು ಸರಿಪಡಿಸಲು ಮತ್ತು ನಾಯಕತ್ವದ ಗುಣವನ್ನು ಸಾಬೀತುಪಡಿಸಲು ಪಂತ್​ಗೆ ಇದು ದೊಡ್ಡ ಅವಕಾಶವೆನಿಸಿದೆ.
*ಬ್ಯಾಟಿಂಗ್​ ಕ್ರಮಾಂಕದಲ್ಲಿ ಹೆಚ್ಚಿನ ಎಡಗೈ ಬ್ಯಾಟರ್​ಗಳಿರುವುದನ್ನು ಗಮನಿಸಿದ್ದೇವೆ. ಯಾರು ಪಂದ್ಯದಲ್ಲಿ ಆಡಲಿದ್ದಾರೆ ಎಂದು ಈಗಾಗಲೆ ನಿರ್ಧರಿಸಿದ್ದೇವೆ ಮತ್ತು ಕಣಕ್ಕಿಳಿಯಲಿರುವವರಿಗೂ ಅದನ್ನು ತಿಳಿಸಿದ್ದೇವೆ. ಆದರೆ 11ರ ಬಳಗವನ್ನು ಟಾಸ್​ಗೆ ಮೊದಲಷ್ಟೇ ಪ್ರಕಟಿಸಲಿದ್ದೇವೆ.
| ರಿಷಭ್​ ಪಂತ್​, ಭಾರತ ತಂಡದ ಹಂಗಾಮಿ ನಾಯಕ
ಗಿಲ್​ ಅಲಭ್ಯ, ತಂಡದಿಂದ ಬಿಡುಗಡೆ
ನಾಯಕ ಶುಭಮಾನ್​ ಗಿಲ್​ ಕುತ್ತಿಗೆ ನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದಿರುವುದರಿಂದ ದಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್​ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇದರಿಂದಾಗಿ ಅವರನ್ನು ಭಾರತ ತಂಡದಿಂದ ಬಿಡುಗಡೆಗೊಳಿಸಲಾಗಿದ್ದು, ಗಾಯದ ಹೆಚ್ಚಿನ ಪರಿಶೀಲನೆಗಾಗಿ ಮುಂಬೈಗೆ ತೆರಳಿದ್ದಾರೆ. ಇದರಿಂದಾಗಿ ಅವರು ನವೆಂಬರ್​ 30ರಿಂದ ನಡೆಯಲಿರುವ ದ. ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೂ ಲಭ್ಯರಾಗುವುದು ಅನುಮಾನವೆನಿಸಿದೆ.
2ನೇ ಟೆಸ್ಟ್​ನಿಂದಲೂ ರಬಾಡ ಔಟ್​
ದ. ಆಫ್ರಿಕಾದ ಪ್ರಮುಖ ವೇಗಿ ಕಗಿಸೊ ರಬಾಡ ಪಕ್ಕೆಲುಬು ಗಾಯದಿಂದ ಸಂಪೂರ್ಣ ಚೇತರಿಸಿಕೊಳ್ಳದಿರುವುದರಿಂದ 2ನೇ ಟೆಸ್ಟ್​ಗೂ ಅಲಭ್ಯರಾಗಿದ್ದಾರೆ. ಅವರು ಇದೇ ಕಾರಣದಿಂದ ಸರಣಿಯ ಮೊದಲ ಟೆಸ್ಟ್​ ಕೂಡ ತಪ್ಪಿಸಿಕೊಂಡಿದ್ದರು.
ಭೋಜನಕ್ಕೆ ಮುನ್ನ ಚಹಾ!
ಈಶಾನ್ಯ ಭಾರತದ ಗುವಾಹಟಿಯಲ್ಲಿ ಬೇಗನೆ ಸೂಯೋರ್ದಯ ಮತ್ತು ಸೂರ್ಯಾಸ್ತವಾಗುವುದರಿಂದ ಪಂದ್ಯದ ಪ್ರತಿ ದಿನದಾಟವನ್ನು ಭಾರತದ ಇತರೆಡೆಗಿಂತ ಅರ್ಧಗಂಟೆ ಮುನ್ನ ಅಂದರೆ ಬೆಳಗ್ಗೆ 9 ಗಂಟೆಗೆ ಆರಂಭಿಸಲಾಗುತ್ತದೆ. ಇದರಿಂದಾಗಿ ಪ್ರತಿ ದಿನ ಮೊದಲಿಗೆ ಚಹಾ ವಿರಾಮ (20 ನಿಮಿಷ) ತೆಗೆದುಕೊಂಡು ನಂತರ ಭೋಜನ ವಿರಾಮ (40 ನಿಮಿಷ) ನೀಡಲಾಗುತ್ತದೆ. ಸಂಜೆ 4 ಗಂಟೆಗೆ ಆಟ ಮುಕ್ತಾಯವಾಗಬೇಕಾದರೂ, ನಿಗದಿತ ಓವರ್​ ಪೂರ್ಣಗೊಳಿಸಲು ಅರ್ಧಗಂಟೆ ಆಟ ವಿಸ್ತರಿಸಲು ಕೂಡ ಅವಕಾಶವಿರಲಿದೆ.
ಪ್ರತಿ ದಿನದಾಟ
ಮೊದಲ ಅವಧಿ: ಬೆಳಗ್ಗೆ 9-11
ಎರಡನೇ ಅವಧಿ: 11.20ರಿಂದ 1.20
ಮೂರನೇ ಅವಧಿ: ಮಧ್ಯಾಹ್ನ 2-4
ಟೆಸ್ಟ್​ಗೆ ಈಶಾನ್ಯ ಭಾರತ ಪದಾರ್ಪಣೆ!
ಅಸ್ಸಾಂ ರಾಜ್ಯದ ಅತಿದೊಡ್ಡ ನಗರವಾಗಿರುವ ಗುವಾಹಟಿಯ (guwahati) ಬರ್ಸಾಪರ ಸ್ಟೇಡಿಯಂ ಚೊಚ್ಚಲ ಟೆಸ್ಟ್​ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಈ ಮೂಲಕ ಈಶಾನ್ಯ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಟೆಸ್ಟ್​ ಪಂದ್ಯವೊಂದು ನಡೆಯಲಿದೆ. ಇದು ಟೆಸ್ಟ್​ ಕ್ರಿಕೆಟ್​ ಆತಿಥ್ಯ ವಹಿಸಿದ ಭಾರತದ 30ನೇ ಕ್ರೀಡಾಂಗಣವೆನಿಸಲಿದೆ. ಅಸ್ಸಾಂನ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ದೇವಜಿತ್​ ಸೈಕಿಯಾ ಬಿಸಿಸಿಐ ಕಾರ್ಯದರ್ಶಿ ಆಗಿರುವ ಸಮಯದಲ್ಲಿ ಗುವಾಹಟಿಗೆ ಈ ಅವಕಾಶ ಒಲಿದುಬಂದಿದೆ. ಗುವಾಹಟಿ ಈ ಮುನ್ನ ಏಕದಿನ, ಟಿ20, ಐಪಿಎಲ್​ ಮತ್ತು ಮಹಿಳಾ ವಿಶ್ವಕಪ್​ ಪಂದ್ಯಗಳಿಗೂ ಆತಿಥ್ಯ ವಹಿಸಿತ್ತು.