GT vs RR: ಇಂದು (ಏ.04) ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಐಪಿಎಲ್ 19ನೇ ಆವೃತ್ತಿಯ ಪಂದ್ಯದಲ್ಲಿ ಆರ್ಆರ್ ರೋಚಕ ಜಯ ಸಾಧಿಸಿತು.
ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್, ಜಿಟಿಗೆ ಬೌಲಿಂಗ್ ಮಾಡುವಂತೆ ತಿಳಿಸಿತು. ಅಂತೆಯೇ, ಮೊದಲು ಬ್ಯಾಟ್ ಮಾಡಿದ ಆರ್ಆರ್ಗೆ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿಯಿಂದ ಉತ್ತಮ ಓಪನಿಂಗ್ ಸಿಕ್ಕಿತು. ಸ್ಫೋಟಕ ಆರಂಭ ನೀಡಿದ್ದೇ ಆದರೂ ವೈಭವ್ ಕೇವಲ 31 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು.
ಕ್ರೀಸ್ನಲ್ಲಿ ಗಟ್ಟಿಯಾಗಿ ನಿಂತ ಜೈಸ್ವಾಲ್, ಆಕರ್ಷಕ ಅರ್ಧಶತಕ (55 ರನ್, 36 ಎಸೆತ) ಬಾರಿಸಿದರು. ಅವರ ಬಳಿಕ ಬಂದ ಧ್ರುವ್ ಜ್ಯುರೆಲ್ (75) ಅವರ ಸ್ಫೋಟಕ ಇನ್ನಿಂಗ್ಸ್ ತಂಡದ ಒಟ್ಟು ಮೊತ್ತವನ್ನು 200ರ ಗಡಿದಾಟಿಸುವಲ್ಲಿ ದೊಡ್ಡ ಕೊಡುಗೆ ನೀಡಿತು. ಅಂತಿಮವಾಗಿ, 20 ಓವರ್ಗೆ 6 ವಿಕೆಟ್ ನಷ್ಟಕ್ಕೆ ಆರ್ಆರ್ 210 ರನ್ ಗಳಿಸಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಜಿಟಿಗೆ ಸಖತ್ ಸ್ಟಾರ್ಟ್ ಸಿಕ್ಕಿತು.
ಸಾಯಿ ಸುದರ್ಶನ್ ಅವರಿಂದ 73 ರನ್ಗಳ ಸ್ಫೋಟಕ ಇನ್ನಿಂಗ್ಸ್ ಬಂದಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟರ್ಗಳು ಕೂಡ ತಂಡದ ಗೆಲುವಿಗೆ ಶ್ರಮಿಸಲಿಲ್ಲ. ಕೊನೆಯ ಓವರ್ವರೆಗೂ ಹೋದ ಪಂದ್ಯದಲ್ಲಿ ಗೆಲುವಿಗೆ ಇನ್ನೂ ಅವಕಾಶವಿತ್ತು. ಆದರೆ, ರಶೀದ್ ಖಾನ್ ಅವರ ಸಿಕ್ಸ್ ಬಾರಿಸುವ ಪ್ರಯತ್ನ ವ್ಯರ್ಥವಾಯಿತು. ರಾಜಸ್ಥಾನ ಪರ ಅದ್ಭುತ ಕೊನೆಯ ಓವರ್ ಮಾಡಿದ ತುಶಾರ್ ದೇಶಪಾಂಡೆ, ತಂಡದ ಗೆಲುವಿಗೆ ಪ್ರಮುಖ ಕಾರಣರಾದರು.