ಅಜಿಂಕ್ಯಾ ರಹಾನೆ, ಕೆವಿನ್​ ಪೀಟರ್​​ಸನ್​ 
ಕ್ರಿಕೆಟ್

ಈ ವರ್ಷವೇ ಕೊನೆ... ಕೆಕೆಆರ್​ ಕಳಪೆ ಪ್ರದರ್ಶನ ಬೆನ್ನಲ್ಲೇ ಕೋಚ್​ಗೆ ಗೇಟ್​ಪಾಸ್​? ಕೆವಿನ್​ ಪೀಟರ್ಸನ್ ಅಚ್ಚರಿ ಹೇಳಿಕೆ ​

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್​ 19ನೇ ಆವೃತ್ತಿಯಲ್ಲಿ ಕೆಕೆಆರ್​ ಅತ್ಯಂತ ಕಳಪೆ ಪ್ರದರ್ಶನ
  • ಆಡಿರುವ ಆರು ಪಂದ್ಯಕ್ಕೆ 6 ಪಂದ್ಯಗಳಲ್ಲಿಯೂ ಹೀನಾಯ ಸೋಲು
  • ತಂಡದ ಕಳಪೆ ಪ್ರದರ್ಶನ ಬೆನ್ನಲ್ಲೇ ಕೋಚ್​ ಅಭಿಷೇಕ್​ ನಾಯರ್​ಗೆ ಗುಡ್​ಬೈ?
  • ಶಾಕಿಂಗ್ ಹೇಳಿಕೆ ನೀಡಿದ ಇಂಗ್ಲೆಂಡ್​ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್
GT vs KKR: ನಿನ್ನೆ (ಏ.17) ಅಹಮದಾಬಾದ್​ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ 19ನೇ ಆವೃತ್ತಿಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್​ ಎದುರು ಕೆಕೆಆರ್​ ಮತ್ತೊಂದು ಹೀನಾಯ ಸೋಲನ್ನು ಅನುಭವಿಸಿತು. ಲೀಗ್​ನ ಆರಂಭದಿಂದಲೂ ಅತ್ಯಂತ ಕಳಪೆ ಪ್ರದರ್ಶನ ತೋರುತ್ತಿರುವ ಅಜಿಂಕ್ಯಾ ರಹಾನೆ ಪಡೆಗೆ ಗೆಲುವಿನ ದಾರಿ ಕಾಣುವುದು ತೀರ ಕಷ್ಟಕರವಾಗುತ್ತಿದೆ ಎಂಬುದು ಸ್ಪಷ್ಟ. ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡರಲ್ಲೂ ಸತತವಾಗಿ ವಿಫಲವಾಗುತ್ತಿರುವ ತಂಡಕ್ಕೆ ಮುಂದಿನ ಹಾದಿ ಇನ್ನಷ್ಟು ಕಠಿಣ ಎನ್ನುವಂತಾಗಿದೆ. ಈ ಮಧ್ಯೆ, ಇಂಗ್ಲೆಂಡ್​ನ ಮಾಜಿ ಕ್ರಿಕೆಟಿಗ ಆಡಿರುವ ಮಾತುಗಳು ಕೆಕೆಆರ್​ ಕೋಚ್​ ಅಭಿಷೇಕ್​ ನಾಯರ್​ ಅವರಿಗೆ ಶೀಘ್ರವೇ ಗೇಟ್​ಪಾಸ್​ ಎಂಬ ಮುನ್ಸೂಚನೆಯನ್ನು ನೀಡಿದೆ.
ಆಡಿರುವ ಆರರಲ್ಲಿ ಐದು ಪಂದ್ಯಗಳನ್ನು ಸೋತಿರುವ ಕೆಕೆಆರ್​, ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮಳೆಯಿಂದಾಗಿ ಸುಲಭವಾಗಿ ಒಂದು ಪಾಯಿಂಟ್​ ಅನ್ನು ಪಡೆಯಿತು. ಇದೂ ನಡೆಯದಿದ್ದರೆ, ಕೇವಲ ಶೂನ್ಯದಲ್ಲಿ ಕೋಲ್ಕತ ಅಂಕಪಟ್ಟಿಯ ಕೊನೆ ಸ್ಥಾನದಲ್ಲಿ ಇರುತ್ತಿತ್ತು. ಪ್ರಸ್ತುತ, -1.149ರ ನಿವ್ವಳ ರನ್ ರೇಟ್​ ಹೊಂದಿರುವ ಕೆಕೆಆರ್​, ಪಾಯಿಂಟ್ಸ್ ಟೇಬಲ್​ನ ಕೊನೆಯ ಸ್ಥಾನವನ್ನು 19ನೇ ಆವೃತ್ತಿಯಲ್ಲಿ ಉಳಿಸಿಕೊಳ್ಳುವುದು ಖಚಿತ ಎಂದೇ ಹೇಳಬಹುದು.
ಈ ಸೀಸನ್​ನಲ್ಲಿ ಕೆಕೆಆರ್ ಪ್ಲೇಆಫ್ ತಲುಪುವುದು ಬಹುತೇಕ ಅನುಮಾನವೇ. ಮುಂದಿನ 8 ಪಂದ್ಯಗಳನ್ನು ಆಡಲಿರುವ ರಹಾನೆ ಪಡೆ, ಅಷ್ಟೂ ಮ್ಯಾಚ್​ಗಳನ್ನು ಗೆದ್ದರೆ ಮಾತ್ರ ಪ್ಲೇಆಫ್ ಕನಸು ಜೀವಂತವಾಗಿರಲಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ಕೆಕೆಆರ್ ಕನಿಷ್ಠ ಒಂದು ಪಂದ್ಯವನ್ನು ಗೆಲ್ಲುವುದು ಕೂಡ ಅಸಾಧ್ಯವಾಗಿದೆ. 2024ರ ಚಾಂಪಿಯನ್ಸ್​ ಕೆಕೆಆರ್, ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿಯೂ ಅತ್ಯಂತ ಕಳಪೆ ಪ್ರದರ್ಶನ ತೋರುವಲ್ಲಿ ವಿಫಲವಾಗುತ್ತಿದೆ.
ಈ ಸಂದರ್ಭದಲ್ಲಿ, ಇಂಗ್ಲೆಂಡ್‌ನ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಮಾತನಾಡಿ, ಮುಂದಿನ ವರ್ಷ ಕೆಕೆಆರ್ ಕೋಚಿಂಗ್ ಸಿಬ್ಬಂದಿಯಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ. ಮಾಜಿ ಕೋಚ್ ಬ್ರೆಂಡನ್ ಮೆಕಲಮ್ ಅವರನ್ನು ಫ್ರಾಂಚೈಸಿ ವಾಪಾಸ್​ ಕರೆತರುವ ಎಲ್ಲ ಸಾಧ್ಯತೆಗಳಿವೆ. ಮುಂದಿನ ಸೀಸನ್​ನಲ್ಲಿ ಮೆಕಲಮ್ ಕೆಕೆಆರ್‌ನ ಕೋಚ್ ಆಗಿರುತ್ತಾರೆ. ಬೇಕಾದರೆ, ನನ್ನ ಈ ಟ್ವೀಟ್ ಅನ್ನು ಬುಕ್‌ಮಾರ್ಕ್ ಮಾಡಿಕೊಳ್ಳಿ" ಎಂದು ಪೀಟರ್ಸನ್ ತಮ್ಮ ಸೋಷಿಯಲ್ ಮೀಡಿಯಾದ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಈ ಹಿಂದೆ ಕೆಕೆಆರ್​ಗೆ ಆಡಿರುವ ಮೆಕಲಮ್, ಫ್ರಾಂಚೈಸಿಯೊಂದಿಗೆ ಉತ್ತಮ ಹಾಗೂ ದೀರ್ಘ ಅನುಭವವನ್ನು ಹೊಂದಿದ್ದಾರೆ. ಅವರು 2008ರಿಂದ 2010 ಮತ್ತು 2012ರಿಂದ 2013ರ ನಡುವೆ ಕೋಲ್ಕತ ನೈಟ್​ ರೈಡರ್ಸ್​ ತಂಡಕ್ಕಾಗಿ ಆಡಿದ್ದಾರೆ. ಐಪಿಎಲ್​ಗೆ ಗುಡ್​ಬೈ ಹೇಳಿದ ಬಳಿಕ ಅವರು, 2020ರಿಂದ 2022ರವರೆಗೆ ಕೆಕೆಆರ್‌ನ ಮುಖ್ಯ ಕೋಚ್​ ಆಗಿ ಸೇವೆ ಸಲ್ಲಿಸಿದ್ದಾರೆ. ಈಗ ಕೆಕೆಆರ್​ಗೆ ಅವರ ಉಪಸ್ಥಿತಿಯ ಅವಶ್ಯಕತೆ ಹೆಚ್ಚಿದೆ ಎಂದು ಕೆವಿನ್ ಹೇಳಿರುವುದು ಕ್ರಿಕೆಟ್​ ಪ್ರೇಮಿಗಳಲ್ಲಿ ಅಚ್ಚರಿ ಮೂಡಿಸಿದೆ,(ಏಜೆನ್ಸೀಸ್).