GT vs DC 
ಕ್ರಿಕೆಟ್

1 ರನ್​ಗಳ ರೋಚಕ ಜಯ ಸಾಧಿಸಿದರೂ ತಪ್ಪಲಿಲ್ಲ ದಂಡ! ಅದೊಂದು ಮಿಸ್ಟೇಕ್​, ಕ್ಯಾಪ್ಟನ್​ ಗಿಲ್​ಗೆ ಬಿಗ್ ಶಾಕ್​ | GT vs DC

ಪ್ರಮುಖ ಮುಖ್ಯಾಂಶಗಳು

  • ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಗುಜರಾತ್ ಟೈಟನ್ಸ್​ಗೆ ರೋಚಕ ಜಯ
  • 19ನೇ ಸೀಸನ್​ನಲ್ಲಿ ಈ ದಂಡಕ್ಕೆ ತುತ್ತಾದ ಮೊದಲ ತಂಡ ಗುಜರಾತ್​
  • 1 ರನ್​ಗಳ ರೋಚಕ ಗೆಲುವು ಸಾಧಿಸಿದ ಜಿಟಿ ಕ್ಯಾಪ್ಟನ್​ಗೆ ಬಿತ್ತು 12 ಲಕ್ಷ ರೂ. ದಂಡ
GT vs DC: ನಿನ್ನೆ (ಏ.08) ದೆಹಲಿಯ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ನಡುವಿನ ರೋಚಕ ಪಂದ್ಯದಲ್ಲಿ ಜಿಟಿ 1 ರನ್​ಗಳಿಂದ ಭರ್ಜರಿ ಗೆಲುವು ಸಾಧಿಸಿತು. ಕಡೆಯ ಓವರ್​ವರೆಗೂ ತಲುಪಿದ ಈ ಪಂದ್ಯದಲ್ಲಿ, ಅಂತಿಮವಾಗಿ ಗಿಲ್​ ಪಡೆ ಗೆದ್ದು ಬೀಗಿತು. ಒಂದೆಡೆ ಗೆಲುವಿನ ಸಂಭ್ರಮವಿದ್ದರೂ, ದಂಡದ ಹೊರೆ ತಮ್ಮ ನಾಯಕ ಶುಭಮನ್ ಗಿಲ್​ ಮೇಲೆ ಬಿದ್ದಿದ್ದು, ಇಡೀ ತಂಡಕ್ಕೆ ಬಿಗ್ ಶಾಕ್ ನೀಡಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 210 ರನ್ ಗಳಿಸಿತು. ಈ ಬೃಹತ್​ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 209 ರನ್‌ಗಳಿಗೆ ಸೋಲನ್ನು ಒಪ್ಪಿಕೊಂಡಿತು. ಡೆಲ್ಲಿ ಪರ ಕೆ.ಎಲ್. ರಾಹುಲ್ (52 ಎಸೆತಗಳಲ್ಲಿ 92 ರನ್) ಅರ್ಧಶತಕ ಗಳಿಸಿದರೆ, ಪಾಥುಮ್ ನಿಸ್ಸಂಕಾ (24 ಎಸೆತಗಳಲ್ಲಿ 41 ರನ್) ಮತ್ತು ಡೇವಿಡ್ ಮಿಲ್ಲರ್ (ಅಜೇಯರಾಗಿ 20 ಎಸೆತಗಳಲ್ಲಿ 41 ರನ್​) ಉತ್ತಮ ಪ್ರದರ್ಶನ ನೀಡಿದರು. ಜಿಟಿ ಬೌಲರ್‌ಗಳಲ್ಲಿ ರಶೀದ್ ಖಾನ್ ಮೂರು ವಿಕೆಟ್ ಪಡೆದರು, ಪ್ರಸಿದ್ಧ್ ಕೃಷ್ಣ ಎರಡು ವಿಕೆಟ್ ಪಡೆದರು ಮತ್ತು ಸಿರಾಜ್ ಒಂದು ವಿಕೆಟ್ ಪಡೆದು ಮಿಂಚಿದರು. 

ಗಿಲ್​ಗೆ ದಂಡ ಏಕೆ?

ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮಂದಗತಿಯ ಓವರ್ ರೇಟ್​ (ನಿಗದಿತ ಸಮಯದಲ್ಲಿ ಓವರ್‌ಗಳನ್ನು ಪೂರ್ಣಗೊಳಿಸದಿರುವುದು) ದಾಖಲಿಸಿತು. ಐಪಿಎಲ್​ 19ನೇ ಸೀಸನ್​ನಲ್ಲಿ ಈ ನಿಯಮ ಉಲ್ಲಂಘನೆ ಮಾಡಿದ ಮೊದಲ ತಂಡ ಗುಜರಾತ್​ ಆದ ಕಾರಣ, ನಾಯಕ ಶುಭಮನ್ ಗಿಲ್‌ಗೆ 12 ಲಕ್ಷ ರೂ. ದಂಡ ವಿಧಿಸಲಾಯಿತು. ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22ರ ಉಲ್ಲಂಘನೆಯಾದ ಮೊದಲ ಪ್ರಕರಣ ಇದಾದ ಕಾರಣ, ಗಿಲ್​ಗೆ ದಂಡದ ಹೊರೆ ಬಿದ್ದಿದೆ,(ಏಜೆನ್ಸೀಸ್).