- ಆರ್‌ಸಿಬಿ ಮತ್ತು ಆರ್‌ಆರ್ ತಂಡಗಳ ದಾಖಲೆ ಮಾರಾಟದಿಂದ ಶುರುವಾದ ಕ್ರೆಡಿಟ್ ವಾರ್.
- ಜೇ ಶಾ ಪರ ಬ್ಯಾಟ್ ಬೀಸಿದ ಸಂಜೀವ್ ಗೋಯೆಂಕಾ.
- ಗೋಯೆಂಕಾ ಅವರನ್ನು 'ಮರೆಗುಳಿ' ಮತ್ತು 'ಜೋಕರ್' ಎಂದು ಟೀಕಿಸಿದ ಲಲಿತ್ ಮೋದಿ.
- ಐಪಿಎಲ್ ಮೌಲ್ಯದ ವೃದ್ಧಿಯ ಹಿಂದೆ ಯಾರಿದ್ದಾರೆ ಎಂಬ ಚರ್ಚೆ ಜೋರು.
ಲಂಡನ್: ಐಪಿಎಲ್ ಲೋಕದ ಇಬ್ಬರು ದೈತ್ಯರ ನಡುವೆ ಈಗ ಸಾಮಾಜಿಕ ಜಾಲತಾಣದಲ್ಲಿ 'ಬಹಿರಂಗ ಯುದ್ಧ' ಶುರುವಾಗಿದೆ. ರಾಜಸ್ಥಾನ್ ರಾಯಲ್ಸ್ (RR) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳ ದಾಖಲೆ ಮಟ್ಟದ ಮಾರಾಟದ ಬೆನ್ನಲ್ಲೇ, ಐಪಿಎಲ್‌ನ ಮೊದಲ ಅಧ್ಯಕ್ಷ ಲಲಿತ್ ಮೋದಿ ಅವರು ಲಕ್ನೋ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ಅವರನ್ನು 'ಕ್ಲೌನ್' (ಜೋಕರ್) ಎಂದು ಕರೆಯುವ ಮೂಲಕ ಸಂಚಲನ ಮೂಡಿಸಿದ್ದಾರೆ.
ವಿವಾದದ ಕಿಡಿ ಹೊತ್ತಿಸಿದ್ದು ಹೇಗೆ?
ರಾಜಸ್ಥಾನ್ ರಾಯಲ್ಸ್ ತಂಡವು 1.63 ಬಿಲಿಯನ್ ಡಾಲರ್ (ಸುಮಾರು 15,000+ ಕೋಟಿ) ಹಾಗೂ ಆರ್‌ಸಿಬಿ ತಂಡವು ದಾಖಲೆಯ 1.78 ಬಿಲಿಯನ್ ಡಾಲರ್‌ಗೆ (ಸುಮಾರು 16,000+ ಕೋಟಿ) ಮಾರಾಟವಾದ ಬೆನ್ನಲ್ಲೇ ಸಂಜೀವ್ ಗೋಯೆಂಕಾ ಎಕ್ಸ್ (X) ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು. ಅದರಲ್ಲಿ ಅವರು, "ಐಪಿಎಲ್‌ನ ಈ ಅಗಾಧ ಮೌಲ್ಯವರ್ಧನೆಗೆ ಜೇ ಶಾ ಅವರ ದೃಷ್ಟಿಕೋನ ಮತ್ತು ಲೀಗ್‌ನ ಆಡಳಿತ ಶೈಲಿ ಕಾರಣ" ಎಂದು ಶ್ಲಾಘಿಸಿದ್ದರು. ಈ ಪೋಸ್ಟ್‌ನಲ್ಲಿ ಲಲಿತ್ ಮೋದಿ ಅವರ ಪಾತ್ರವನ್ನು ಅವರು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದರು.
ಲಲಿತ್ ಮೋದಿ ಕೆಂಡಾಮಂಡಲ!
ಸಂಜೀವ್ ಗೋಯೆಂಕಾ ಅವರ ಪೋಸ್ಟ್ ಕಂಡು ಕೆರಳಿದ ಲಲಿತ್ ಮೋದಿ, ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ. "ಈ ವ್ಯಕ್ತಿಗೆ ಐಪಿಎಲ್ ಮಾದರಿಯನ್ನು ರೂಪಿಸಿದವರು ಯಾರು ಎಂಬ ವಿಷಯದಲ್ಲಿ ಮರೆಗುಳಿತನ (Memory Loss) ಕಾಡುತ್ತಿದೆ. ಇವರು ತಮ್ಮದೇ ಲೋಕದಲ್ಲಿ ಬದುಕುತ್ತಿದ್ದಾರೆ. ಇವರ ಟ್ವೀಟ್‌ನಿಂದ ಇತಿಹಾಸ ಬದಲಾಗಲ್ಲ," ಎಂದು ಮೋದಿ ಕಿಡಿಕಾರಿದ್ದಾರೆ.
ಕ್ಲೌನ್ ಎಂಬ ಹಣೆಪಟ್ಟಿ: ಸಂಜೀವ್ ಗೋಯೆಂಕಾ ಅವರಿಗೆ 'ಕ್ಲೌನ್' ಎಮೋಜಿ ಬಳಸುವ ಮೂಲಕ ಲೇವಡಿ ಮಾಡಿರುವ ಮೋದಿ, "ಇವರಿಗಿಂತ ಇವರ ಸಹೋದರ ಹರ್ಷ ಗೋಯೆಂಕಾ ಅವರೇ ತಂಡದ ಮಾಲೀಕರಾಗಿದ್ದರೆ ಚೆನ್ನಾಗಿರುತ್ತಿತ್ತು, ಅವರು ನಿಜವಾದ ಕ್ರಿಕೆಟ್ ಪ್ರೇಮಿ," ಎಂದಿದ್ದಾರೆ.
ಶಾ ಮತ್ತು ಐಪಿಎಲ್ ಆರ್ಕಿಟೆಕ್ಚರ್: ಐಪಿಎಲ್‌ನ ಅಡಿಪಾಯವನ್ನು ಹಾಕಿದವರು ಯಾರು ಎಂಬುದು ಇಡೀ ಜಗತ್ತಿಗೆ ಗೊತ್ತು. ಅದನ್ನು ಈಗಿನ ಆಡಳಿತಗಾರರಿಗೆ ಮಾತ್ರ ಕ್ರೆಡಿಟ್ ನೀಡುವುದು ಮೂರ್ಖತನ ಎಂದು ಮೋದಿ ಪ್ರತಿಪಾದಿಸಿದ್ದಾರೆ
ಐಪಿಎಲ್ ಮೌಲ್ಯದ ಮ್ಯಾಜಿಕ್!
ರಾಜಸ್ಥಾನ್ ರಾಯಲ್ಸ್: 2008 ರಲ್ಲಿ 270 ಕೋಟಿಗೆ ಖರೀದಿಯಾಗಿದ್ದ ತಂಡ ಈಗ 15,000 ಕೋಟಿಗೂ ಅಧಿಕ ಮೊತ್ತಕ್ಕೆ ಮಾರಾಟವಾಗಿದೆ.
ಆರ್‌ಸಿಬಿ: 2008 ರಲ್ಲಿ 485 ಕೋಟಿಗೆ ಖರೀದಿಯಾಗಿದ್ದ ತಂಡ ಈಗ 16,700 ಕೋಟಿಗೂ ಅಧಿಕ ಮೊತ್ತಕ್ಕೆ ಮಾರಾಟವಾಗಿ ಇತಿಹಾಸ ನಿರ್ಮಿಸಿದೆ.
ಹಿನ್ನೆಲೆ
ಲಲಿತ್ ಮೋದಿ ಅವರು 2010 ರಲ್ಲಿ ಹಣಕಾಸು ಅಕ್ರಮ ಮತ್ತು ತೆರಿಗೆ ವಂಚನೆಯ ಆರೋಪದ ಮೇಲೆ ಭಾರತವನ್ನು ತೊರೆದು ಲಂಡನ್‌ನಲ್ಲಿ ನೆಲೆಸಿದ್ದಾರೆ. 2009 ರ ಐಪಿಎಲ್ ಪ್ರಸಾರ ಹಕ್ಕುಗಳ ಹಂಚಿಕೆಯಲ್ಲಿ ಮೋದಿ ಅವರು 125 ಕೋಟಿ ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪವನ್ನು ಜಾರಿ ನಿರ್ದೇಶನಾಲಯ (ED) ಮಾಡಿದೆ. ಆದರೆ, ಐಪಿಎಲ್ ಎಂಬ ಬೃಹತ್ ಉದ್ಯಮವನ್ನು ಕಟ್ಟಿ ಬೆಳೆಸಿದ ಕೀರ್ತಿ ಲಲಿತ್ ಮೋದಿ ಅವರಿಗೆ ಸಲ್ಲುತ್ತದೆ ಎಂಬುದು ಕ್ರಿಕೆಟ್ ಲೋಕದ ಒಂದು ವರ್ಗದ ವಾದ,(ಏಜೆನ್ಸೀಸ್).